ಮೈಸೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆ ಎಂದೆಲ್ಲಾ ಹೇಳುವುದಕ್ಕೆ ಬಿ.ವೈ.ವಿಜಯೇಂದ್ರ ಯಾರು? ಕಾಂಗ್ರೆಸ್ ಪಕ್ಷ ಆ ಅಧಿಕಾರವನ್ನು ಅವರಿಗೆ ನೀಡಿದೆಯಾ ಎಂದು ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಖಾರವಾಗಿ ಕೇಳಿದರು.
ಮೈಸೂರಿನಲ್ಲಿಂದು ನಾಡ ಕುಸ್ತಿ ಸಮಾರೋಪ ಸಮಾರಂಭಕ್ಕೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೆ ಎಂದು ಯಾರು ಹೇಳಿದರು? ಆ ರೀತಿ ಹೇಳಲು ವಿಜಯೇಂದ್ರನಿಗೆ ಯಾವ ಅಧಿಕಾರ ಇದೆ? ಕಾಂಗ್ರೆಸ್ ಪಕ್ಷ ಅವರಿಗೆ ಯಾವ ಸ್ಥಾನ-ಮಾನ ನೀಡಿದೆ? ಮಾಧ್ಯಮದವರು ಊಹಾಪೋಹ ಮತ್ತು ಅಂತೆಕಂತೆಗಳಿಗೆ ಪ್ರಾಮುಖ್ಯತೆ ನೀಡಬಾರದು. ಅದ್ಧೂರಿ ದಸರಾ ನಡೆಯುತ್ತಿದೆ. ಆ ಕಡೆ ಗಮನಹರಿಸಿ ಎಂದರು.
ಡಿನ್ನರ್ ಪಾರ್ಟಿ ಬಗ್ಗೆ ಪ್ರತಿಕ್ರಿಯಿಸಿ, ನಿನ್ನೆ ರಾತ್ರಿ ಸಚಿವರು ದಸರಾ ಆಚರಣೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದರು. ನೂತನವಾಗಿ ಆಯ್ಕೆಯಾದ ಸಂಸದ ಸುನೀಲ್ ಬೋಸ್ ಮನೆಯಲ್ಲಿ ಒಟ್ಟಾಗಿ ಊಟ ಮಾಡಿದೆವು ಅಷ್ಟೇ, ಅದರಲ್ಲಿ ವಿಶೇಷತೆ ಏನೂ ಇಲ್ಲ ಎಂದರು.
ದಲಿತ ಸಿಎಂ ವಿಚಾರ: ಈಗ ಸಿದ್ದರಾಮಯ್ಯನವರು ಸಿಎಂ ಆಗಿದ್ದಾರೆ. ಬದಲಾವಣೆ ಪ್ರಶ್ನೆ ಯಾಕೆ? ಊಹಾಪೋಹಗಳಿಗೆ ಅವಕಾಶ ನೀಡಬೇಡಿ. ಎಲ್ಲರೂ ಒಟ್ಟಾಗಿ ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಮುಂದುವರೆಯುತ್ತಿದ್ದೇವೆ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೇಳಲು ಬಿಜೆಪಿಯವರಿಗೆ ಯಾವ ಅಧಿಕಾರವೂ ಇಲ್ಲ. ಎಲ್ಲವನ್ನೂ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಬಿಜೆಪಿಯವರಿಗೆ ಬಹುಮತ ಪಡೆದು ಸರ್ಕಾರ ರಚನೆ ಮಾಡುವ ಬದಲು ಹಿಂಬಾಗಿಲಿನ ಮೂಲಕ ಬಂದು ಅಧಿಕಾರದ ರುಚಿ ಕಂಡಿದ್ದಾರೆ. ಅದಕ್ಕೆ ಹೀಗೆ ಮಾತನಾಡುತ್ತಿದ್ದಾರೆ. ಸಿಎಂ ರಾಜೀನಾಮೆ ಕೇಳಲು ಅವರಿಗೆ ಯಾವ ಹಕ್ಕಿದೆ ಎಂದು ಮಹದೇವಪ್ಪ ಪ್ರಶ್ನಿಸಿದರು.