ಆನೇಕಲ್: "ಕಳೆದ ಹತ್ತು ವರ್ಷಗಳಿಂದ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿದ್ದ ತೆರಿಗೆ ಹಣ ಹಂಚಿಕೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆಗ ಕೇಂದ್ರ ಸರ್ಕಾರ ಎಷ್ಟು ನೀಡುತ್ತಿತ್ತೋ ಇಂದೂ ಅಷ್ಟೇ ನೀಡುತ್ತಿದೆ. ಇದನ್ನು ಪ್ರಶ್ನಿಸಿದರೆ ದೇಶ ವಿಭಜಕರು ಅಥವಾ ದೇಶದ್ರೋಹಿಗಳು ಎನ್ನುವುದು ಸರಿಯಲ್ಲ" ಎಂದು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಹೇಳಿದರು.
ಇಂದು ನಾರಾಯಣ ಹೆಲ್ತ್ ಸಿಟಿಯ ಪುನರ್ವಸತಿ ಕೇಂದ್ರ ಉದ್ಘಾಟಿಸಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಪ್ರತಿ ವರ್ಷ ರಾಜ್ಯದಿಂದ ಕೇಂದ್ರಕ್ಕೆ ತೆರಿಗೆ ರೂಪದಲ್ಲಿ ಹಣ ಹರಿದು ಹೋಗುತ್ತಿದೆ. ಆದರೆ ರಾಜ್ಯದ ಪಾಲು ಹತ್ತು ವರ್ಷಗಳಲ್ಲಿ ಎಷ್ಟಿತ್ತೋ ಇಂದೂ ಅಷ್ಟೇ ಇದೆ. ನಾವು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಪ್ರಶ್ನಿಸಿದರೆ ಇದಕ್ಕೆ ಉತ್ತರಿಸದೆ ದೇಶದ್ರೋಹದ ಪಟ್ಟ ಕಟ್ಟಿ ವಿಷಯಾಂತರ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಂಸದ ಡಿ.ಕೆ.ಸುರೇಶ್ ತುಸು ಭಾವೋದ್ವೇಗದಲ್ಲಿ ಮಾತಾಡಿರಬಹುದು. ಅದು ಅಷ್ಟು ಸಮಂಜಸವಲ್ಲ ಅಂತ ಹೇಳಿದ್ದೇವೆ. ಇಂದು ರಾಜ್ಯದ ಆರ್ಥಿಕ ಬೆಳವಣಿಗೆ ಕುಂಠಿತವಾಗಿದೆ. ಈ ಬಗ್ಗೆ ಬಿಜೆಪಿಯ ಯಾವೊಬ್ಬ ನಾಯಕನಿಗೂ ಮೋದಿ ಎದುರು ಪ್ರಶ್ನಿಸುವ ಧೈರ್ಯವಿಲ್ಲ. ಇದಕ್ಕೆ ಬದಲಾಗಿ ಆಡಳಿತ ಸರ್ಕಾರದ ವಿರುದ್ದ ಹರಿಹಾಯುತ್ತಿದ್ದಾರೆ. ಹತ್ತು ವರ್ಷದಿಂದ ಇಂದಿಗೂ ರಾಜ್ಯಕ್ಕೆ 44,000 ಕೋಟಿಯಷ್ಟೇ ತೆರಿಗೆ ಹಣ ಕೇಂದ್ರ ನೀಡುತ್ತಿದೆ" ಎಂದರು.
"ರಾಜ್ಯ ಬರಗಾಲದಲ್ಲಿದೆ. ಹಣಕಾಸು ಆಯೋಗದಿಂದ ಅನುದಾನ ಬರುತ್ತಿಲ್ಲ. ಉತ್ತರ ಪ್ರದೇಶದಿಂದ 100 ರೂ ಪಡೆದು 300 ರೂ ನೀಡುತ್ತಿರುವುದರ ಹಿನ್ನಲೆ ಏನು?, ಮೋದಿ ಮಾತೆತ್ತಿದರೆ 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಅಂತಾರೆ. ದೇಶದಲ್ಲಿ ಅತ್ಯಧಿಕ ತೆರಿಗೆ ಮೂಲಕ ಹಣ ಕಟ್ಟುತ್ತಿರುವ ರಾಜ್ಯ ನಮ್ಮದು. ಹೀಗಾಗಿ ಸಹಜವಾಗಿಯೇ ಒಕ್ಕೂಟ ವ್ಯವಸ್ಥೆಯನ್ನು ಹೊಂದಿರುವ ನಾವು ನಮ್ಮ ಪಾಲು ಕೇಳುತ್ತಿದ್ದೇವೆ" ಎಂದು ಪ್ರತಿಭಟನೆಯನ್ನು ಸಮರ್ಥಿಸಿಕೊಂಡರು.
ಪುನರ್ವಸತಿ ಕೇಂದ್ರ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಹೃದಯ ತಜ್ಞ ಡಾ.ದೇವಿಶೆಟ್ಟಿ, "ಸ್ಟ್ರೋಕ್ ಆದ ವ್ಯಕ್ತಿಗೆ ತಕ್ಷಣ ಚಿಕಿತ್ಸೆ ನೀಡಿದರೆ ಆ ವ್ಯಕ್ತಿ ಬದುಕುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಇಂತಹ ತುರ್ತು ಚಿಕಿತ್ಸಾ ವ್ಯವಸ್ಥೆಗಾಗಿ ರಿಹಾಬಿಲಿಟಿ ಕೇಂದ್ರ ತೆರೆಯಲಾಗಿದೆ" ಎಂದು ತಿಳಿಸಿದರು.
ಇದನ್ನೂ ಓದಿ: ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯ ಕುರಿತು ಸಾರ್ವಜನಿಕ ಚರ್ಚೆಗೆ ಸಿದ್ಧ : ಸಿಎಂ ಸಿದ್ದರಾಮಯ್ಯ