ದಾವಣಗೆರೆ: ತಾಲೂಕಿನ ಕನಗೊಂಡನಹಳ್ಳಿಯಲ್ಲಿ ಬೇವಿನ ಮರವೊಂದರಲ್ಲಿ ಹಾಲಿನ ರೂಪದ ಬಿಳಿ ದ್ರವ ಹೊರಹೊಮ್ಮುತ್ತಿದ್ದು, ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ. ಇದು ದೇವಿಯ ಪವಾಡ ಎಂದೇ ಹೇಳುತ್ತಿರುವ ಜನರು ಮರಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಮರ ನೋಡಲು ಸುತ್ತಲಿನ ಗ್ರಾಮಗಳ ನಿವಾಸಿಗಳೂ ಕೂಡ ಆಗಮಿಸುತ್ತಿದ್ದಾರೆ.
ಕನಗೊಂಡನಹಳ್ಳಿ ಗ್ರಾಮದ ಮರಡಿ ಕೆಂಚಮ್ಮ ದೇವಸ್ಥಾನದ ಬಳಿ ಮೂನ್ನೂರು ವರ್ಷದ ಹಳೆಯ ಬೃಹತ್ ಬೇವಿನ ಮರವಿದೆ. ಈ ಬೇವಿನ ಮರದಲ್ಲಿ, ಗಣೇಶ ಚತುರ್ಥಿ ದಿನ ಬೆಳಗ್ಗೆಯಿಂದ ಹಾಲ್ನೊರೆಯಂತಹ ಬಿಳಿಯ ಬಣ್ಣದ ದ್ರವ ನಿರಂತರವಾಗಿ ಹೊರ ಬರುತ್ತಿದೆ. ಇದನ್ನು ಕಂಡು ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ. ಇದು ಮರಡಿ ಕೆಂಚಮ್ಮ ದೇವಿಯ ಪವಾಡ ಎಂದೇ ನಂಬಿರುವ ಜನರು, ಬೇವಿನ ಮರಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಅದನ್ನು ನೋಡಲು ಕನಗೊಂಡನಹಳ್ಳಿ ಸುತ್ತಮುತ್ತಲಿನ ಹತ್ತೂರಿನ ಜನರು ಧಾವಿಸುತ್ತಿದ್ದಾರೆ.
''ಮರದಿಂದ ದ್ರವವು ಸತತ ನಾಲ್ಕು ದಿನಗಳಿಂದಲೂ ನಿರಂತರವಾಗಿ ಹೊರಬರುತ್ತಿದೆ. ಈ ರೀತಿಯಲ್ಲಿ ಬಿಳಿ ಬಣ್ಣದ ದ್ರವ ಬರುತ್ತಿರುವುದ್ದರಿಂದ ದೇವರನ್ನು ಕೇಳಿಸಲಾಗಿದೆ. ದೇವರಿಗೆ ಅಭಿಷೇಕ, ಅನ್ನಸಂತರ್ಪಣೆ ಮಾಡಬೇಕೆಂದು ಆಂಜನೇಯ ದೇವರು ಹೇಳಿದೆ. ಬಹಳ ಜನ ಭಕ್ತರು ಬಂದು ನೋಡಿ, ಪೂಜೆ ಸಲ್ಲಿಸುತ್ತಿದ್ದಾರೆ. 300 ವರ್ಷದ ಹಳೆಯ ಮರ ಇದಾಗಿದೆ. ಊರಿಗೆ ಒಳ್ಳೆಯದಾಗುತ್ತದೆ ಎಂದು ದೇವರು ಹೇಳಿದೆ. ಇದೊಂದು ಪವಾಡ ಆಗಿದ್ದು, ನಮಗೆ ಖುಷಿ ತಂದಿದೆ'' ಎಂದು ಗ್ರಾಮಸ್ಥೆ ಶಿಲ್ಪಾ ತಿಳಿಸಿದರು.
"ನನಗೆ 50 ವರ್ಷಗಳು ತುಂಬಿದ್ದು ಮೊದಲಿನಿಂದಲೂ ಈ ಮರ ಇದೆ. ಇದು ಮೂನ್ನೂರು ವರ್ಷದ ಮರ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಬೇವಿನ ಮರದಿಂದ ಹಾಲಿನ ರೂಪದ ದ್ರವ ಹೊರಬರುತ್ತಿದೆ ಎಂದು ಬೇರೆ ಬೇರೆ ಊರುಗಳಿಂದ ಜನ ಆಗಮಿಸಿ ಪೂಜೆ ಮಾಡಿಸುತ್ತಿದ್ದಾರೆ. ಮರಡಿ ಕೆಂಚಮ್ಮನ ಪವಾಡ ಇದು, ಇದರಿಂದ ಊರಿಗೆ ಒಳ್ಳೆದಾದರೆ ಸಾಕು. ಇದೇ ಮೊದಲ ಬಾರಿಗೆ ಈ ರೀತಿಯ ದ್ರವ ಬರುತ್ತಿದೆ. ಪೂಜೆ ಮಾಡೋಣ ಎಂದು ಬಂದಿದ್ದೇವೆ'' ಎಂದು ಬೇರೆ ಗ್ರಾಮದಿಂದ ಆಗಮಿಸಿದ್ದ ವಿನೋದ್ ಹೇಳಿಕೊಂಡರು.