ದಾವಣಗೆರೆ: ನಗರದ ಖಾಸಗಿ ಹೋಟೆಲ್ನಲ್ಲಿ ವಿಜಯೇಂದ್ರ ಬೆಂಬಲಿಸಿ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ನಡೆದ ಸಭೆ ಮುಕ್ತಾಯವಾಗಿದೆ. ಸಭೆಯಲ್ಲಿ ಮುಂದಿನ ಚುನಾವಣೆಯ ವರೆಗೂ ಬಿ.ವೈ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮುಂದುವರೆಸಬೇಕು ಎಂದು ಅಭಿಪ್ರಾಯವನ್ನು ಮಾಜಿ ಶಾಸಕರು, ಸಚಿವರು ವ್ಯಕ್ತವಾಗಿದೆ.
ಸಭೆ ಬಳಿಕ ಮಾತನಾಡಿದ ಮಾಜಿ ಶಾಸಕ ಕಟ್ಟಾ ಸುಬ್ರಮಣ್ಯ ನಾಯ್ಡು, "ವಿಜಯೇಂದ್ರ ಅವರನ್ನು ಮುಂದಿನ ಚುನಾವಣೆವರೆಗೂ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮುಂದುವರೆಸಬೇಕು. ಯಡಿಯೂರಪ್ಪ ಅವರ ಹುಟ್ಟುಹಬ್ಬದ ಪ್ರಯುಕ್ತ ದಾವಣಗೆರೆಯಲ್ಲಿ ಸಮಾವೇಶ ಮಾಡುತ್ತೇವೆ. ದೆಹಲಿಗೆ ತೆರಳಿ ರಾಷ್ಟ್ರೀಯ ನಾಯಕರನ್ನ ಆಹ್ವಾನ ಮಾಡುತ್ತೇವೆ. ಇಂದಿನ ಸಭೆಯಲ್ಲಿ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಶಕ್ತಿ ಇರುವವರು ಸೇರಿದ್ದೇವೆ" ಎಂದರು.
"ನಾವೆಲ್ಲರೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ನಮಗೆಲ್ಲರಿಗೂ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೊಡಬೇಕು ಎಂಬ ಬೇಡಿಕೆ ಇದೆ. ಎಲ್ಲರಿಗೂ ಸೂಕ್ತ ಸ್ಥಾನಮಾನ ಕೋಡಬೇಕು ಅನ್ನೋದು ನಮ್ಮ ಅಭಿಪ್ರಾಯವಾಗಿದೆ. ಇಂದು ನಡೆದ ಸಭೆಯಲ್ಲಿ 10 ಜನ ಪ್ರಮುಖರ ಸಮಿತಿ ರಚನೆ ಮಾಡಲಾಗಿದೆ. ರಾಜಕೀಯ ಸಮಾವೇಶ ಮಾಡಲು ಅವಕಾಶ ಇಲ್ಲದಿರುವುದರಿಂದ ಯಡಿಯೂರಪ್ಪ ಅವರ ಹುಟ್ಟುಹಬ್ಬ ಆಚರಣೆ ಮಾಡುತ್ತೇವೆ. ಜನವರಿ 16ಕ್ಕೆ ಮತ್ತೆ ಸಭೆ ಮಾಡುತ್ತೇವೆ" ಎಂದು ತಿಳಿಸಿದರು.
ಮಾಜಿ ಸಚಿವ ಎಸ್. ಎ ರವೀಂದ್ರನಾಥ್ ಮಾತನಾಡಿ, "ದಾವಣಗೆರೆಯಲ್ಲಿ ಬಿ. ಎಸ್. ಯಡಿಯೂರಪ್ಪ ಅವರ ಜನ್ಮದಿನ ಆಚರಣೆ ಮೂಲಕ ಶಕ್ತಿ ಪ್ರದರ್ಶನ ಮಾಡುತ್ತೇವೆ. ಇಂದು ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಣಯವಾಗಿದೆ. ಫೆಬ್ರವರಿ 27 ದಾವಣಗೆರೆಯಲ್ಲಿ ಬಿಎಸ್ವೈ ಹುಟ್ಟುಹಬ್ಬ ಆಚರಣೆ ನಡೆಯಲಿದೆ. ಅಂದು ನಡೆಯುವ ಕಾರ್ಯಕ್ರಮಕ್ಕೆ 25 ಲಕ್ಷ ಜನರನ್ನು ಸೇರಿಸುವ ನಿರೀಕ್ಷೆ ಇದೆ" ಎಂದು ಹೇಳಿದರು.
ಮಾಜಿ ಶಾಸಕರಾದ ಸೋಮಶೇಖರ್ ರೆಡ್ಡಿ, ಹರತಾಳು ಹಾಲಪ್ಪ, ಸೀಮಾ ಮಸೂತಿ ಸೇರಿ 35ಕ್ಕೂ ಹೆಚ್ಚು ಮಾಜಿ ಶಾಸಕರು, ಸಚಿವರು ಸಭೆಯಲ್ಲಿ ಭಾಗಿಯಾಗಿಯಾಗಿದ್ದರು. ಸಭೆಗೂ ಮುನ್ನ ಮಾಜಿ ಶಾಸಕರು, ಮಾಜಿ ಸಚಿವರು ದಾವಣಗೆರೆ ನಗರದ ದುರ್ಗಾಂಬಿಕಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಇದನ್ನೂ ಓದಿ: ಬಿಜೆಪಿಯಲ್ಲಿ ಬಣ ರಾಜಕೀಯಕ್ಕೆ ಅವಕಾಶವಿಲ್ಲ, ಬಣದ ಹೆಸರಲ್ಲಿ ಸಭೆಗಳ ಆಯೋಜನೆ ಒಪ್ಪಲಾಗದು: ವಿಜಯೇಂದ್ರ