ಬೆಂಗಳೂರು: ವಿಧಾನ ಪರಿಷತ್ನ ಆರು ಸ್ಥಾನಗಳಿಗೆ ಜೂನ್ 3 ರಂದು ನಡೆಯಲಿರುವ ಚುನಾವಣೆಗೆ ಮತದಾರರ ದಾಖಲಾತಿ ನೋಂದಣಿಗೆ ಮೇ 6 ಕೊನೆಯ ದಿನವಾಗಿದೆ. ಅರ್ಜಿಗಳನ್ನು ಆಯಾ ಚುನಾವಣಾಧಿಕಾರಿ ಕಚೇರಿಯಲ್ಲಿ ನಿಗದಿತ ದಿನಾಂಕದ ಒಳಗೆ ಸಲ್ಲಿಸಬಹುದು.
ಈಗಾಗಲೇ ಈಶಾನ್ಯ ಪದವೀಧರರ ಕ್ಷೇತ್ರದಲ್ಲಿ 1,50,184, ನೈಋತ್ಯ ಪದವೀಧರರ ಕ್ಷೇತ್ರ 74,218, ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ 1,00,100 ಮತದಾರರಿದ್ದಾರೆ. ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ 23,514, ನೈಋತ್ಯ ಶಿಕ್ಷಕರ ಕ್ಷೇತ್ರ 19,380, ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ 18,379 ಮತದಾರರು ನೋಂದಾಯಿಸಿಕೊಂಡಿದ್ದಾರೆ.
ವಿಧಾನಪರಿಷತ್‌ನ ಮೂರು ಶಿಕ್ಷಕರ ಕ್ಷೇತ್ರ ಹಾಗೂ 3 ಪದವೀಧರರ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದೆ. ಬೆಂಗಳೂರು ಪದವೀಧರ ಕ್ಷೇತ್ರ, ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರ, ಕರ್ನಾಟಕ ನೈಋತ್ಯ ಪದವೀಧರ ಕ್ಷೇತ್ರ ಹಾಗೂ ಕರ್ನಾಟಕ ಆಗ್ನೇಯ, ಕರ್ನಾಟಕ ನೈರುತ್ಯ, ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರಗಳಿಗೆ ಜೂನ್ 3 ರಂದು ಚುನಾವಣೆ ನಡೆಯಲಿದೆ.
ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೇ 16 ಕೊನೆಯ ದಿನವಾಗಿದೆ. ನಾಮಪತ್ರ ಪರಿಶೀಲನೆ ಮೇ 17 ಕ್ಕೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಮೇ 20 ಕೊನೆಯ ದಿನವಾಗಿದೆ. ಜೂನ್ 3 ರಂದು ಬೆಳಗ್ಗೆ 8 ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದೆ. ಜೂನ್ 6 ರಂದು ಮತ ಎಣಿಕೆ ಇರಲಿದೆ.
ಪದವೀಧರ ಕ್ಷೇತ್ರದಿಂದ ಡಾ. ಚಂದ್ರಶೇಖರ್ ಪಾಟೀಲ್, ಅಯನೂರು ಮಂಜುನಾಥ್, ಎ. ದೇವೇಗೌಡ ಹಾಗೂ ಶಿಕ್ಷಕರ ಕ್ಷೇತ್ರದಿಂದ ವೈ. ಎ. ನಾರಾಯಣಸ್ವಾಮಿ, ಎಸ್. ಎಲ್. ಭೋಜೇಗೌಡ ಹಾಗೂ ಮರಿತಿಬ್ಬೇಗೌಡ ಅವರ ವಿಧಾನಪರಿಷತ್ ಅವಧಿ ಜೂನ್ 21ಕ್ಕೆ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ 6 ಕ್ಷೇತ್ರಗಳಿಗೆ ಚುನಾವಣೆ ಘೋಷಣೆ ಆಗಿದೆ.
ಇದನ್ನೂ ಓದಿ: ವಿಧಾನಪರಿಷತ್ ಶಿಕ್ಷಕರ, ಪದವೀಧರ ಕ್ಷೇತ್ರಗಳಿಗೆ ಚುನಾವಣೆ ಘೋಷಣೆ - Council Election