ಬೆಳಗಾವಿ: ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ಗೋಕಾಕ್ ಪಟ್ಟಣದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೌದು, ಘಟಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಪರಿಣಾಮ ಗೋಕಾಕ್ ಪಟ್ಟಣಕ್ಕೆ ಜಲದಿಗ್ಬಂಧನವಾಗಿದ್ದು, ಇಲ್ಲಿನ ಉಪ್ಪಾರಪೇಟೆ, ಹಳೆ ದನದ ಪೇಟೆ, ಮಟನ್ ಮಾರ್ಕೆಟ್, ಕುಂಬಾರ ಗಲ್ಲಿ ಸೇರಿ ವಿವಿಧ ಬಡಾವಣೆಗಳಿಗೆ ನೀರು ನುಗ್ಗಿದೆ.
ಘಟಪ್ರಬಾ ನದಿಗೆ 80 ಸಾವಿರ ಕ್ಯೂಸೆಕ್ ನೀರಿನ ಒಳಹರಿವು: ಘಟಪ್ರಭಾ ನದಿಗೆ ಮಾರ್ಕಂಡೇಯ, ಹಿರಣ್ಯಕೇಶಿ ನದಿಗಳ ಹಾಗೂ ಹಿಡಕಲ್ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಈ ನೀರು ಸದ್ಯ ಗೋಕಾಕ್ ಪಟ್ಟಣಕ್ಕೆ ನುಗ್ಗಿದ್ದರಿಂದ ಗೋಕಾಕ್ನ ಹಲವು ಬಡಾವಣೆಗಳು ಜಲಾವೃತವಾಗಿವೆ. ಪ್ರವಾಹಕ್ಕೆ ಸಿಲುಕಿ ಸಾವಿರಾರು ಜನರ ಬದುಕು ಬೀದಿಗೆ ಬಿದ್ದಿದೆ.
ಶಾಶ್ವತ ಪರಿಹಾರಕ್ಕೆ ಸ್ಥಳೀಯರ ಒತ್ತಾಯ; ಈ ಕುರಿತು ಈಟಿವಿ ಭಾರತ ಜೊತೆಗೆ ಮಾತನಾಡಿದ ಸ್ಥಳೀಯ ನಿವಾಸಿ ಮಹೇಶ ಬಡೆಪ್ಪಗೋಳ, ಘಟಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ ಮೂರು ನದಿಗಳ ಸಂಗಮ ಗೋಕಾಕ್. ಲೋಳಸೂರ ಸೇತುವೆ ಮೇಲೆ ನೀರು ಬಂದರೆ ನಮ್ಮ ಗಲ್ಲಿಗಳಿಗೆ ನೀರು ಬರುತ್ತದೆ. ಆಗ ಇಲ್ಲಿನ ಜನರ ಪರಿಸ್ಥಿತಿ ಶೋಚನೀಯ. ನೀರು ಮನೆಯೊಳಗೆ ನುಗ್ಗುತ್ತಿದ್ದಂತೆ ಉಟ್ಟ ಬಟ್ಟೆಯಲ್ಲಿ ಜನರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಹಾಗಾಗಿ, ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು.
ಸ್ಥಳೀಯ ಗಣೇಶ ರಂಕನಕೊಪ್ಪ ಮಾತನಾಡಿ, ಪ್ರವಾಹ ಉಂಟಾಗಿದ್ದರಿಂದ ನಾವೆಲ್ಲಾ ಕಾಳಜಿ ಕೇಂದ್ರದಲ್ಲೇ ವಾಸ್ತವ್ಯ ಹೂಡಿದ್ದೇವೆ. ಈಗ ಮನೆ ನೋಡಿಕೊಂಡು ಹೋಗಲು ಬಂದಿದ್ದೇವು. ನಿನ್ನೆಗಿಂತ ಇಂದು ನೀರಿನ ಮಟ್ಟ ಹೆಚ್ಚಿದೆ. ಶಾಸಕರು ಬಂದು ಭೇಟಿ ಕೊಟ್ಟು ಹೋಗಿದ್ದಾರೆ. ದಯವಿಟ್ಟು ನಮಗೆ ಬೇರೆ ಕಡೆ ಮನೆ ಕಟ್ಟಿಸಿ ಕೊಡಬೇಕು ಎಂದು ಮನವಿ ಮಾಡಿದರು.
ಸಂತ್ರಸ್ತರಿಗೆ ಕಾಳಜಿ ಕೇಂದ್ರದಲ್ಲಿ ಆಶ್ರಯ; ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿರುವ ಸಾವಿರಕ್ಕೂ ಅಧಿಕ ಸಂತ್ರಸ್ತರಿಗೆ ಸದ್ಯ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ(ಎಂಹೆಚ್ಎಫ್)ದಲ್ಲಿ ತೆರೆದಿರುವ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ. ಸದ್ಯ ಇವರೆಲ್ಲಾ ಮಕ್ಕಳು, ಮರಿ ಕಟ್ಟಿಕೊಂಡು ಇಲ್ಲಿಯೇ ವಾಸವಿದ್ದಾರೆ.
ಒಟ್ಟಿನಲ್ಲಿ 2019ರಲ್ಲಿ ಗೋಕಾಕಿನಲ್ಲಿ ಉಂಟಾಗಿದ್ದ ಪ್ರವಾಹದ ಭೀಕರತೆ ನೆನಪಿಸುವಂತೆ ಮತ್ತೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ.
ಇದನ್ನೂ ಓದಿ: ನವೀಲುತೀರ್ಥ ಡ್ಯಾಂನಿಂದ ನೀರು ಬಿಡುಗಡೆ: ಒಂದೆಡೆ ಮೊಸಳೆ ಮತ್ತೊಂದೆಡೆ ಪ್ರವಾಹ ಆತಂಕ - Navilutheertha Reservoir