ಚಾಮರಾಜನಗರ: ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಶುಕ್ರವಾರ ಮುಂಜಾನೆಯಿಂದಲೇ ಸ್ವಾಮಿಗೆ ಎಳನೀರಿನ ಅಭಿಷೇಕ, ಹಾಲು, ಪಂಚಾಮೃತ ಅಭಿಷೇಕ ನೆರವೇರಿತು. ನೈವೇದ್ಯ ಅರ್ಪಿಸಿದ ಬಳಿಕ ಮಹಾಮಂಗಳಾರತಿ ಮಾಡಲಾಯಿತು. ಅಮಾವಾಸ್ಯೆ ಪ್ರಯುಕ್ತ ಶ್ರೀ ಕ್ಷೇತ್ರಕ್ಕೆ ಸಾವಿರಾರು ಜನರು ಭೇಟಿ ನೀಡಿ ಮಹದೇಶ್ವರ ದರ್ಶನ ಪಡೆದರು. ಚಿನ್ನದ ರಥೋತ್ಸವ, ಬೆಳ್ಳಿ ರಥೋತ್ಸವ, ಬಸವ ವಾಹನ, ಹುಲಿ ವಾಹನ, ರುದ್ರಾಕ್ಷಿ ಮಂಟಪದ ಸೇವೆಗಳನ್ನು ಮಾಡುವ ಮೂಲಕ ತಮ್ಮ ಹರಕೆಯನ್ನು ಸಮರ್ಪಿಸಿದರು.
ಅಮಾವಾಸ್ಯೆ ಪೂಜೆ ಹಿನ್ನೆಲೆ ಬೆಂಗಳೂರು, ರಾಮನಗರ, ಕನಕಪುರ, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ನಂಜನಗೂಡು ತುಮಕೂರು ಕೋಲಾರ ಸೇರಿದಂತೆ ತಮಿಳುನಾಡು ರಾಜ್ಯದ ವಿವಿಧ ಗ್ರಾಮಗಳಿಂದ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದರು. ಇವರಲ್ಲದೇ 60 ವರ್ಷ ಮೇಲ್ಪಟ್ಟ ಭಕ್ತಾದಿಗಳಿಗೆ ರಾಜಗೋಪುರದ ಮುಖ್ಯ ದ್ವಾರದಲ್ಲಿ ನೇರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಶ್ರೀ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಸರತಿ ಸಾಲಿನ ವ್ಯವಸ್ಥೆ ಕಲ್ಪಿಸಲಾಗಿತ್ತು.
ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದ ಸಾವಿರಾರು ಭಕ್ತಾದಿಗಳು ಎಣ್ಣೆ ಮಜ್ಜನ ದಿನವಾದ ಬುಧವಾರ ಸಂಜೆ ಬಿದ್ದ ಮಳೆಯ ನಡೆವೆಯೂ ಉಘೇ ಮಾದಪ್ಪ ಉಘೇ ಮಾಯಿಕರ ಎಂಬ ಘೋಷಣೆಯೊಂದಿಗೆ ಮಲೆ ಮಹದೇಶ್ವರ ದರ್ಶನ ಪಡೆದು ಪುನೀತರಾದರು.
ಭಕ್ತರಿಗೆ ವಿಶೇಷ ಪ್ರಸಾದ: ಅಮಾವಾಸ್ಯೆ ಪ್ರಯುಕ್ತ ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದ ಸಾವಿರಾರು ಭಕ್ತಾದಿಗಳಿಗೆ ದಾಸೋಹ ಭವನದಲ್ಲಿ ಬಿಸಿಬೇಳೆ ಬಾತ್, ಸಿಹಿ ಪೊಂಗಲ್, ಪುಳಿಯೋಗರೆ, ಚಿತ್ರಾನ್ನ, ಮಜ್ಜಿಗೆ ಹುಳಿ, ಟಮಟೋಬಾತ್, ಅನ್ನ ಸಾಂಬಾರ್, ಪಾಯಸ, ರಸಂ, ಮಜ್ಜಿಗೆ, ಪೊಂಗಲ್, ಕೇಸರಿಬಾತ್, ಉಪ್ಪಿಟ್ಟು ಪ್ರಸಾದ ನೀಡಲಾಯಿತು.
ಪ್ರಸಾದ ಬಡಿಸಿದ ಕಾರ್ಯದರ್ಶಿ : ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ದಾಸೋಹ ಭವನಕ್ಕೆ ಸಾವಿರಾರು ಜನರು ಭೇಟಿ ನೀಡಿದ್ದ ಹಿನ್ನೆಲೆ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ಅವರು ಆಗಮಿಸಿದ್ದ ಭಕ್ತಾದಿಗಳಿಗೆ ಪ್ರಸಾದ ಬಡಿಸಿದರು.
ಟ್ರಾಫಿಕ್ ಜಾಮ್: ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆ ಸಾವಿರಾರು ಜನರು ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ದ್ವಿಚಕ್ರ ವಾಹನ, ಕಾರು ,ಗೂಡ್ಸ್ ವಾಹನ, ಬಸ್ಗಳಲ್ಲಿ ಆಗಮಿಸಿದ ಹಿನ್ನೆಲೆ ಆನೆ ತಲೆ ದಿಂಬದಲ್ಲಿ ಸುಮಾರು ಒಂದು ಗಂಟೆಗಳಿಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಳಿಕ ಪೊಲೀಸರು ಸಂಚಾರ ದಟ್ಟಣೆಯನ್ನು ನಿವಾರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಓದಿ: ಒಂದೇ ತಿಂಗಳಲ್ಲಿ 134 ಡೆಂಗ್ಯೂ ಪ್ರಕರಣ ದೃಢ, ಧಾರವಾಡದಲ್ಲಿ ಜಾಗೃತಿ ಜಾಥಾ - Dengue Awareness Rally