ಮೈಸೂರು: ಅಪ್ರಾಪ್ತೆಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಆರೋಪಿಗೆ, ಇಲ್ಲಿನ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಸ್‌ಟಿಎಸ್‌ಸಿ 1ನೇ ವಿಶೇಷ ನ್ಯಾಯಾಲಯವು 3 ವರ್ಷಗಳ ಕಠಿಣ ಸಜೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಜಿ.ಮನು ಎಂಬಾತ ಶಿಕ್ಷೆಗೆ ಗುರಿಯಾದವ.
2022ರ ಆಗಸ್ಟ್ 22ರ ರಾತ್ರಿ ಶಶೃತ ಬಡಾವಣೆಯ ಮನೆಯೊಂದರಲ್ಲಿ ಅಪ್ರಾಪ್ತೆ ಒಬ್ಬಳೇ ಇರುವುದನ್ನು ಗಮನಿಸಿದ ಆರೋಪಿ, ತನಗೆ ಕರೆ ಮಾಡುವಂತೆ ಒತ್ತಾಯ ಮಾಡಿದ್ದಾನೆ. ಇದಕ್ಕೆ ಅಪ್ರಾಪ್ತೆ ಒಪ್ಪದಿದ್ದಾಗ ಗ್ಲಾಸ್ ಪೀಸ್‌ನಿಂದ ಚುಚ್ಚಿಕೊಳ್ಳುವುದಾಗಿ ಹೆದರಿಸಿದ್ದಾನೆ. ಈ ವಿಚಾರವನ್ನು ಬಾಲಕಿ ಪಾಲಕರ ಬಳಿ ಹೇಳಿಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ಅಪ್ರಾಪ್ತೆಯ ತಾಯಿ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಆಲನಹಳ್ಳಿ ಠಾಣೆಯ ಇನ್ಸ್ಪೆಕ್ಟರ್ ಜಿ.ಎನ್.ಶ್ರೀಕಾಂತ್, ಆರೋಪಿಯ ವಿರುದ್ಧ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪೋಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಆನಂದ್ ಪಿ.ಹೊಗಾಡೆ ಅವರು, ಆರೋಪಿಯ ವಿರುದ್ಧ ಆರೋಪ ಸಾಬೀತಾಗಿದೆ ಎಂದು ತಿಳಿಸಿ, ಆರೋಪಿಗೆ ಪೋಕ್ಸೋ ಕಾಯಿದೆ ಅಡಿ ಅಪರಾಧಿಗಳಿಗೆ 3 ವರ್ಷಗಳ ಕಠಿಣ ಸಜೆ ಹಾಗೂ 10 ಸಾವಿರ ರೂ. ಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಬಿ.ಜಯಂತಿ ಅವರು ವಾದ ಮಂಡಿಸಿದ್ದರು.
ಇದನ್ನೂ ಓದಿ: ಕೊಪ್ಪಳ: ಜಾತಿ ಸಂಘರ್ಷ ಪ್ರಕರಣದಲ್ಲಿ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ