ಕಡಬ(ದಕ್ಷಿಣ ಕನ್ನಡ): ಅಕ್ರಮ ದನ ಸಾಗಾಟದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮರ್ಧಾಳ ಜಂಕ್ಷನ್‌ನಲ್ಲಿ ಶನಿವಾರ ರಾತ್ರಿ ನಡೆದಿದೆ. ಮೃತರನ್ನು ಮರ್ಧಾಳ ನೆಕ್ಕಿತ್ತಡ್ಕ ಸಮೀಪದ ಅಚ್ಚಿಲ ಪಟ್ಟೆ ನಿವಾಸಿ ವಿಠಲ ರೈ ಎಂದು ಗುರುತಿಸಲಾಗಿದೆ.
ಶನಿವಾರ ರಾತ್ರಿ ವಿಠಲ ರೈ ಅವರು ತನ್ನ ಕಾರನ್ನು ಮರ್ಧಾಳದಲ್ಲಿ ನಿಲ್ಲಿಸಿ ರಸ್ತೆ ದಾಟುತ್ತಿದ್ದ ವೇಳೆ ಸುಬ್ರಹ್ಮಣ್ಯ ಕಡೆಯಿಂದ ಕಡಬ ಕಡೆಗೆ ತೆರಳುತ್ತಿದ್ದ ಮಾರುತಿ 800 ಕಾರು ಡಿಕ್ಕಿ ಹೊಡೆದಿದೆ. ಕಾರನ್ನು ಚಾಲಕ ನಿಲ್ಲಿಸದೇ ಪರಾರಿಯಾಗಿದ್ದಾನೆ. ವಿಠಲ ರೈ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರೋಪಿಗಳು ಕಾರನ್ನು ಮರ್ಧಾಳ ಸಮೀಪದ ನೆಕ್ಕಿತ್ತಡ್ಕ ಎಂಬಲ್ಲಿನ ರಶೀದ್ ಎಂಬವರ ಮನೆಯ ಮುಂಭಾಗದಲ್ಲಿ ನಿಲ್ಲಿಸಿ ದನವನ್ನು ಪಕ್ಕದ ತೋಟದಲ್ಲಿ ಕಟ್ಟಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಸ್ತೆ ತಡೆ ಪ್ರತಿಭಟನೆ: ಕಡಬ ಸರಕಾರಿ ಆಸ್ಪತ್ರೆಯ ಬಳಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿ ದಕ್ಷಿಣ ಕನ್ನಡ ಎಸ್ಪಿ ಸ್ಥಳಕ್ಕೆ ಬರುವಂತೆ ಆಗ್ರಹಿಸಿದರು. ಮಧ್ಯರಾತ್ರಿ ಎರಡು ಗಂಟೆಯವರೆಗೂ ರಾಜ್ಯ ಹೆದ್ದಾರಿ ರಸ್ತೆ ತಡೆ ನಡೆಸಿದರು. ಪ್ರತಿಭಟನೆಯಲ್ಲಿ ನೂರಾರು ಜನರು ಸೇರಿದ್ದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಅರುಣ್ ಕುಮಾರ್ ಪುತ್ತಿಲ, ವೆಂಕಟ್ ವಳಲಂಬೆ, ಕೃಷ್ಣ ಶೆಟ್ಟಿ ಕಡಬ ಸೇರಿದಂತೆ ಹಲವು ಪ್ರಮುಖರು ಭಾಗಿಯಾಗಿ ರಸ್ತೆಯಲ್ಲೇ ಕುಳಿತಿದ್ದರು.
ದಕ್ಷಿಣ ಕನ್ನಡ ಎಸ್ಪಿ ಸ್ಥಳಕ್ಕೆ ಬರುವಂತೆ ಪ್ರತಿಭಟನಾನಿರತರು ಪಟ್ಟು ಹಿಡಿದಿದ್ದರು. ರಾತ್ರಿ ಎರಡು ಗಂಟೆಯ ಸುಮಾರಿಗೆ ಎಸ್ಪಿ ಸಿ.ಬಿ.ರಿಷ್ಯಂತ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾನಿರತರ ಮನವೊಲಿಸುವ ಪ್ರಯತ್ನ ಮಾಡಿದರು. ಭಾನುವಾರ ಸಂಜೆಯೊಳಗೆ ಆರೋಪಿಗಳ ಬಂಧನವಾಗುತ್ತದೆ ಎಂದು ಭರವಸೆ ನೀಡಿದ ನಂತರದಲ್ಲಿ ತಾತ್ಕಾಲಿಕವಾಗಿ ಪ್ರತಿಭಟನೆ ಕೈಬಿಡಲಾಯಿತು.
ಕಡಬ ತಾಲೂಕಿನಾದ್ಯಂತ ನಡೆಯುವ ಅಕ್ರಮ ಕಸಾಯಿಖಾನೆಗಳು, ಗೋಮಾಂಸ ಮಾರಾಟ ಕೇಂದ್ರಗಳು, ಗಾಂಜಾ ಮಾರಾಟ, ಕಡಬ ಪೇಟೆಯೂ ಸೇರಿದಂತೆ ಎಲ್ಲೂ ಸಿಸಿ ಕ್ಯಾಮರಾಗಳು ಕಾರ್ಯನಿರ್ವಹಿಸದೇ ಇರುವ ಸ್ಥಳೀಯ ಪೊಲೀಸರ ಅಸಡ್ಡೆಯನ್ನು ಎಸ್ಪಿಗೆ ಮನವರಿಕೆ ಮಾಡಿದರು.
ಇದನ್ನೂ ಓದಿ: ಪುತ್ತೂರಿನಲ್ಲಿ ಅಕ್ರಮ ಗೋ ಸಾಗಾಟ; ಬಜರಂಗದಳ ಕಾರ್ಯಕರ್ತರ ಕಂಡು ಕಾರು, ಜಾನುವಾರು ಬಿಟ್ಟು ಪರಾರಿ - Cow Smuggling