ಬೆಂಗಳೂರು: ಮಾಲೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯದ ಸಂಪೂರ್ಣ ವಿಡಿಯೋ (ಸಿಸಿ ಟಿವಿ ದೃಶ್ಯಾವಳಿ) ನಾಪತ್ತೆಯಾಗಿರುವ ಕುರಿತು ಪ್ರಮಾಣಪತ್ರ ಸಲ್ಲಿಸುವಂತೆ ಅಂದಿನ ಚುನಾವಣಾಧಿಕಾರಿ ಆಗಿದ್ದ ಈಗಿನ ಕೊಡಗು ಜಿಲ್ಲಾಧಿಕಾರಿ ವೆಂಕಟರಾಜ ಅವರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದ ಮಾಲೂರು ಕ್ಷೇತ್ರದಿಂದ ಶಾಸಕರಾಗಿ ಕಾಂಗ್ರೆಸ್ನ ಕೆ.ವೈ. ನಂಜೇಗೌಡ ಆಯ್ಕೆಯಾಗಿರುವುದನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿ ಬಿಜೆಪಿ ಪರಾಜಿತ ಅಭ್ಯರ್ಥಿ ಕೆ.ಎಸ್. ಮಂಜುನಾಥ್ ಗೌಡ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿತು. ಮತ ಎಣಿಕೆ ಕಾರ್ಯದ ಸಂಪೂರ್ಣ ವಿಡಿಯೋ ದೃಶ್ಯಾವಳಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ವಿಫಲವಾದಲ್ಲಿ ಕೋಲಾರ ಜಿಲ್ಲಾ ಚುನಾವಣಾಧಿಕಾರಿ ಆಗಸ್ಟ್ 27ರಂದು ಖುದ್ದು ವಿಚಾರಣೆಗೆ ಹಾಜರಾಗಬೇಕು ಎಂದು ಹಿಂದಿನ ವಿಚಾರಣೆ ಸಂದರ್ಭದಲ್ಲಿ ನ್ಯಾಯಪೀಠ ನಿರ್ದೇಶನ ನೀಡಿತ್ತು.
ಅದರಂತೆ, ಸದ್ಯ ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಹಾಲಿ ಕೋಲಾರ ಡಿಸಿ ಅಕ್ರಂಪಾಷಾ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಚುನಾವಣಾಧಿಕಾರಿಗಳ ಪರವಾಗಿ ವಾದ ಮಂಡಿಸಿದ ವಕೀಲರು, ಮತ ಎಣಿಕೆ ಕಾರ್ಯದ ವಿಡಿಯೋ ದೃಶ್ಯಾವಳಿಗಳನ್ನು ಪತ್ತೆ ಮಾಡಲು ಪ್ರಯತ್ನಿಸಲಾಗಿದೆ. ಆದರೆ, ಚುನಾವಣೆ, ಮತ ಎಣಿಕೆ ಎಲ್ಲವೂ ಹಿಂದಿನ ಜಿಲ್ಲಾ ಚುನಾವಣಾಧಿಕಾರಿಗಳ ಅವಧಿಯಲ್ಲಿ ನಡೆದಿದೆ ಎಂದು ಹೇಳಿದರು.
ಸ್ಟ್ರಾಂಗ್ ರೂಂ ತೆರೆಯುವ ಪ್ರಕ್ರಿಯೆ ಸಹ ಹಿಂದಿನ ಜಿಲ್ಲಾ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ನಡೆದಿದೆ. ಆಗಿನ ಮತ ಎಣಿಕೆಯ ವಿಡಿಯೋ ಚಿತ್ರೀಕರಣ, ಸಿಸಿಟಿವಿ ದೃಶ್ಯಾವಳಿಗಳ ಬಗ್ಗೆ ಈಗಿನ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮಾಹಿತಿ ಇಲ್ಲ. ಈ ವಿಚಾರವನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಸಿಸಿ ಕ್ಯಾಮರಾಗಳನ್ನು ಪೂರೈಸಿದ ಖಾಸಗಿ ಕಂಪನಿಯಿಂದಲೂ ಮಾಹಿತಿ ಕೇಳಲಾಗಿತ್ತು. ಒಟ್ಟಾರೆ, ಚುನಾವಣೆ, ಮತ ಎಣಿಕೆ ನಡೆದಾಗ ಈಗಿನ ಜಿಲ್ಲಾ ಚುನಾವಣಾಧಿಕಾರಿಗಳು ಕೋಲಾರ ಜಿಲ್ಲಾಧಿಕಾರಿ ಆಗಿರಲಿಲ್ಲ ಎಂಬ ಅಂಶವನ್ನು ನ್ಯಾಯಪೀಠಕ್ಕೆ ಮನವರಿಕೆ ಮಾಡಿದರು.
ವಾದ ಆಲಿಸಿದ ನ್ಯಾಯಪೀಠ, ಮತ ಎಣಿಕೆ ಕಾರ್ಯದ ವಿಡಿಯೋ ರೆಕಾರ್ಡಿಂಗ್ ನಾಪತ್ತೆಯಾಗಿರುವ ಬಗ್ಗೆೆ ಚುನಾವಣೆ ನಡೆದಾಗ ಜಿಲ್ಲಾ ಚುನಾವಣಾಧಿಕಾರಿ ಆಗಿದ್ದ, ಸದ್ಯ ಕೊಡಗು ಜಿಲ್ಲಾಧಿಕಾರಿಯಾಗಿರುವ ವೆಂಕಟರಾಜ ಅವರಿಗೆ ಪ್ರಮಾಣಪತ್ರ ಸಲ್ಲಿಸುವಂತೆ ನಿರ್ದೇಶನ ನೀಡಿತು. ಅಲ್ಲದೇ ಈ ಬಗ್ಗೆೆ ವೆಂಕಟರಾಜು ಅವರು ತಮ್ಮದೇ ಆದ ತನಿಖೆ ಸಹ ನಡೆಸಬಹುದು ಎಂದು ಹೇಳಿ ವಿಚಾರಣೆಯನ್ನು ಸೆಪ್ಟಂಬರ್ 10ಕ್ಕೆ ಮುಂದೂಡಿತು.