ಉಡುಪಿ: ನಕ್ಸಲ್ ಬಾಧಿತ ಪ್ರದೇಶದಲ್ಲಿನ ಜನರು ಮತ್ತೆ ಸರ್ಕಾರದ ಕದ ತಟ್ಟಿದ್ದಾರೆ. 4-5 ದಶಕಗಳಿಂದ ಸಮಸ್ಯೆಗಳಲ್ಲೇ ಬದುಕುತ್ತಿರುವ ಮಲೆಕುಡಿಯರು, ಮೂಲಭೂತ ಸೌಕರ್ಯಕ್ಕಾಗಿ ಹೋರಾಟ ಮುಂದುವರಿಸಿದ್ದಾರೆ. ಇತ್ತೀಚೆಗೆ ಎನ್ಕೌಂಟರ್ ನಡೆದ ಸ್ಥಳದ ಸುತ್ತಮುತ್ತಲ ಜನಜೀವನದ ಬಗ್ಗೆ ಜನಪ್ರತಿನಿಧಿಗಳ ಗಮನ ಸೆಳೆದು ಈಗ ಅನುದಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.
ಪಶ್ಚಿಮ ಘಟ್ಟದ ಕಾಡಂಚಿನಲ್ಲಿ ಬದುಕುವ ಸಮುದಾಯ ಮಲೆಕುಡಿಯರು. ಪರಿಶಿಷ್ಟ ಪಂಗಡಕ್ಕೆ ಸೇರಿರುವ ಈ ಸಮುದಾಯ ಹಳ್ಳಿ ಗ್ರಾಮ, ನಗರಗಳಿಂದ ಬಲು ದೂರವೇ ವಾಸಿಸುವರು. ಕಾಡುತ್ಪತ್ತಿಗಳನ್ನು ಸಂಗ್ರಹ ಮಾಡಿ ಮನೆ ಅಂಗಳದ ಸುತ್ತ ತರಕಾರಿ ತೋಟ ಬೆಳೆದು ಜೀವನ ಮಾಡುವ ಸಮುದಾಯ, ಸಂಕಷ್ಟಗಳ ನಡುವೆಯೇ ಜೀವನ ಸಾಗಿಸುತ್ತಿದೆ.
ಸರ್ಕಾರ ಮಲೆಕುಡಿಯ ಜನರ ಸಮಸ್ಯೆ ಆಲಿಸಬೇಕಿದೆ: ನಗರ ಜೀವನದಿಂದ ಬಲು ದೂರ ನೆಲೆಸಿರುವ ಇಂತಹ ಮುಗ್ಧ ಸಮುದಾಯಗಳ ಸಮಸ್ಯೆಗಳನ್ನು ಎತ್ತಿಕೊಂಡೇ ನಕ್ಸಲಿಯರು ಈ ಭಾಗದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಇತ್ತೀಚಿನ ಎರಡು ದಶಕದಲ್ಲಿ ನಕ್ಸಲರ ಬಲ ಕುಗ್ಗಿದ್ದು, ಜನರು ನಕ್ಸಲೈಟ್ಗಳಿಗೆ ಯಾವುದೇ ಬೆಂಬಲಗಳನ್ನು ಕೊಡುತ್ತಿಲ್ಲ. ಇಷ್ಟಾದರೂ ಈ ಊರಿನ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿದೆ. ಸರಕಾರ ಇತ್ತ ಕಡೆ ಗಮನ ಕೊಡುತ್ತಿಲ್ಲ.
ಕಾಡಿನಂಚಿನಲ್ಲಿ ವಾಸಿಸುತ್ತಿರುವ 300ಕ್ಕೂ ಹೆಚ್ಚು ಕುಟುಂಬಗಳು: ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಶಿವಮೊಗ್ಗ ಭಾಗದಲ್ಲಿ 300ಕ್ಕೂ ಹೆಚ್ಚು ಕುಟುಂಬಗಳು ಕಾಡಂಚಿನಲ್ಲಿ ವಾಸಿಸುತ್ತಿವೆ. ಕಸ್ತೂರಿ ರಂಗನ್ ವರದಿ, ಅತಿ ಸೂಕ್ಷ್ಮ ಪ್ರದೇಶ, ಅರಣ್ಯ ಭೂಮಿ ಹೀಗೆ ಹಲವು ವಿಚಾರಗಳಿಂದಾಗಿ ಮನೆ ನಿರ್ಮಾಣಕ್ಕೆ, ಜೀವನಕ್ಕೆ, ಓಡಾಟಕ್ಕೆ ಈ ಕುಟುಂಬಗಳು ಸರ್ಕಾರದ ಇಲಾಖೆಗಳ ಜೊತೆ ಗುದ್ದಾಟ ನಡೆಸುತ್ತಿವೆ. ಈ ನಡುವೆ ರಾಜ್ಯ ಸರ್ಕಾರಕ್ಕೆ ಮಲೆಕುಡಿಯ ಸಮುದಾಯ ಸಾಕಷ್ಟು ಬೇಡಿಕೆಗಳನ್ನು ಇಟ್ಟಿದೆ.
400 ಎಕರೆ ಕೃಷಿ ಜಮೀನು, ಮೂಲ ಸೌಕರ್ಯಕ್ಕೆ 100 ಕೋಟಿ ವಿಶೇಷ ಪ್ಯಾಕೇಜ್ ಅವಶ್ಯ: ಈ ಭಾಗಕ್ಕೆ ಶಿಕ್ಷಣ, ಆರೋಗ್ಯ, ಕುಡಿಯುವ ನೀರು ಕೂಡ ತಲುಪಿಲ್ಲ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಮನೆ ಕಟ್ಟಿಕೊಂಡು ಬೇಸಾಯ ಕೃಷಿ ಮಾಡಿಕೊಂಡಿರುವ ಕುಟುಂಬಗಳನ್ನು ಸೂಕ್ಷ್ಮ ವಲಯದಿಂದ ಬೇರ್ಪಡಿಸಿ ಪುನರ್ವಸತಿ ಕಲ್ಪಿಸುವ ಯೋಜನೆ ಕಳೆದ ಹಲವಾರು ವರ್ಷಗಳಿಂದ ಚರ್ಚೆಯಾಗುತ್ತಿದೆ.
ಹೆಬ್ರಿಯಂತಹ ಪ್ರದೇಶಗಳ್ಲಿ ನೆಲೆಸಿರುವ ಮಲೆಕುಡಿಯ ಜನಾಂಗಕ್ಕೆ ಆರೋಗ್ಯ, ಕುಡಿಯುವ ನೀರು ಸಹ ಇಲ್ಲ. ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ. ಈ ಭಾಗದಲ್ಲಿ ಈ ಯೋಜನೆ ಜಾರಿಗೆ ಬರಲು 400 ಎಕರೆ ಜಮೀನು ಬೇಕು, 100 ಕೋಟಿಗೂ ಮಿಕ್ಕಿ ಮೂಲಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯಕ್ಕೆ ಮೀಸಲಿಡಬೇಕು. ಈ ಎಲ್ಲ ಬೇಡಿಕೆಗಳು ಪೂರೈಕೆ ಆದರೆ ಜನ ಅರಣ್ಯ ಉತ್ಪತ್ತಿಗಳನ್ನು ಸಂಗ್ರಹ ಮಾಡುವುದನ್ನು ಬಿಟ್ಟು, ಬೇಸಾಯ, ಕೃಷಿ ಚಟುವಟಿಕೆಗಳಲ್ಲಿ ತೊಡಗಿ ಹೊಸ ಜೀವನ ಕಟ್ಟಿಕೊಳ್ಳುತ್ತಾರೆ.
ಈ ಬಗ್ಗೆ ಮಾತನಾಡಿದ ಕರ್ನಾಟಕ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀಧರ ಗೌಡ ಈದು, "ಈ ಭಾಗಗಳಲ್ಲಿ ವಾಸಿಸುವ ಜನರಿಗೆ ಶಿಕ್ಷಣ, ಆರೋಗ್ಯ ಕುಡಿಯುವ ನೀರು ಸೇರಿದಂತೆ ಅಭಿವೃದ್ಧಿ ಕಾರ್ಯ ಮರೀಚಿಕೆಯಾಗಿದೆ. ಎಲ್ಲ ಪ್ರಸ್ತಾವನೆಗಳನ್ನು ಇಟ್ಟುಕೊಂಡು ರಾಜ್ಯ ಮಲೆಕುಡಿಯ ಸಂಘ, ಉಡುಪಿ ಜಿಲ್ಲೆಯ ಮಲೆಕುಡಿಯ ಸಂಘ, ಶಾಸಕರು, ಮಂತ್ರಿಗಳು, ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಆದರೆ ಯಾವುದೇ ಭರವಸೆ ನೀಡಿಲ್ಲ. ಸರ್ಕಾರ ಮತ್ತು ಇಲಾಖೆ 100 ಕೋಟಿ ಅನುದಾನ ನೀಡಬೇಕು. ಮೂಲಭೂತ ಸೌಕರ್ಯಗಳ ಅವಕಾಶ ಮಾಡಿಕೊಡಬೇಕು" ಎಂದು ಮನವಿ ಮಾಡಿದರು.
ಇನ್ನಾದರು ಸರ್ಕಾರ ಇದನ್ನು ಗಮನಿಸಿ ಅಳುವ ಕುಟಂಬಗಳ ಕಣ್ಣೀರು ಒರಿಸುತ್ತದೆಯೋ ಇಲ್ಲವೇ ಕಾದು ನೋಡಬೇಕಾಗಿದೆ.
ಇದನ್ನೂ ಓದಿ: ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣ ಅಭಿವೃದ್ಧಿ ಯಾವಾಗ; ಪ್ರಯಾಣಿಕರ ಗೋಳು ಕೇಳೋರಾರು? - Udupi Indrali railway station