ಉಡುಪಿ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ನಿರ್ಮಿಸಿದ ತುಳುನಾಡಿನ ಸಾಕ್ಷ್ಯಚಿತ್ರ 'ಪಿಲಿವೇಷ' (ಹುಲಿವೇಷ) ಸಾಕ್ಷ್ಯಚಿತ್ರವು 'ಟೋಕಿಯೊ ಸಾಕ್ಷ್ಯಚಿತ್ರ ಚಲನಚಿತ್ರೋತ್ಸವ-2024'ರಲ್ಲಿ ಪ್ರದರ್ಶನಕ್ಕೆ ಅಧಿಕೃತವಾಗಿ ಆಯ್ಕೆಯಾಗಿದೆ.
ಸಾಕ್ಷ್ಯಚಿತ್ರವನ್ನು ದೃಶ್ಯ ಮಾನವಶಾಸ್ತ್ರ ಮತ್ತು ಎಥ್ನೋಗ್ರಾಫಿಕ್ ಫಿಲ್ಮ್ ವಿಭಾಗದಲ್ಲಿ ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದೆ. ವಿಶ್ವದಾದ್ಯಂತ ಪಟ್ಟಿಯಲ್ಲಿದ್ದ 800ಕ್ಕೂ ಅಧಿಕ ಸಾಕ್ಷ್ಯಚಿತ್ರಗಳಲ್ಲಿ ಭಾರತದಿಂದ ಎರಡು ಸಾಕ್ಷ್ಯಚಿತ್ರಗಳು ಆಯ್ಕೆಯಾಗಿವೆ. ಇದರಲ್ಲಿ ಪಿಲಿವೇಷವೂ ಒಂದು ಎಂದು ಮಾಹೆ ಪ್ರಕಟಣೆಯಲ್ಲಿ ತಿಳಿಸಿದೆ.
MAHE is proud to announce that the documentary “Pilivesha of Tulunadu”, produced by the Centre for Intercultural Studies and Dialogue (CISD) at Manipal Centre for European Studies (MCES), has been officially selected for screening at the Tokyo Documentary Film Festival 2024. pic.twitter.com/KVCaa6T43f
— Manipal Academy of Higher Education (@MAHE_Manipal) October 24, 2024
ಟೋಕಿಯೊ ಸಾಕ್ಷ್ಯಚಿತ್ರ ಉತ್ಸವ ನವೆಂಬರ್ 30ರಿಂದ ಡಿಸೆಂಬರ್ 13ರವರೆಗೆ ನಡೆಯಲಿದೆ. ಚಲನಚಿತ್ರೋತ್ಸವದ ಭಾಗವಾಗಿ ಈ ಸಾಕ್ಷ್ಯಚಿತ್ರ ಡಿ.5ರಂದು ಪ್ರದರ್ಶನಗೊಳ್ಳಲಿದೆ. ಮಾಹೆಯ ಇಂಟರ್ ಕಲ್ಚರಲ್ ಸ್ಟಡೀಸ್ ಮತ್ತು ಡೈಲಾಗ್ ಕೇಂದ್ರದ (ಸಿಐಎಸ್‌ಡಿ) ಸಂಯೋಜಕ ಡಾ.ಪ್ರವೀಣ್ ಕೆ.ಶೆಟ್ಟಿ ಹಾಗೂ ಸಂಸ್ಥೆಯಲ್ಲಿ ಸಂಶೋಧನಾ ಸಹವರ್ತಿಯಾಗಿರುವ ನಿತೇಶ್ ಆಂಚನ್ ಅವರು ಈ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದಾರೆ.
ಸಾಕ್ಷ್ಯಚಿತ್ರವು ಕರಾವಳಿ ಕರ್ನಾಟಕ ಪ್ರದೇಶದ ಸ್ಥಳೀಯ ಸಾಂಪ್ರದಾಯಿಕ ಜಾನಪದ ನೃತ್ಯವಾದ ಹುಲಿವೇಷದ ಕುರಿತಾಗಿದೆ. ಮಾಹೆಯ ಯುರೋಪಿಯನ್ ಅಧ್ಯಯನ ಕೇಂದ್ರದ ಭಾಗವಾಗಿರುವ ಸಿಐಎಸ್‌ಡಿಯು ಡಿಸರ್ನಿಂಗ್ ಇಂಡಿಯಾ: ಲಿವಿಂಗ್ ಕಲ್ಚರ್ಸ್ ಆಫ್ ತುಳುನಾಡು ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿದೆ. 2021ರ ಸೆಪ್ಟೆಂಬರ್ ತಿಂಗಳಲ್ಲಿ ಪ್ರಾರಂಭಗೊಂಡ ಈ ಯೋಜನೆಯು ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡ ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಆನ್‌ಲೈನ್ ಕೋರ್ಸ್ ಮೂಲಕ ಜಾಗತಿಕ ಪ್ರೇಕ್ಷಕರಿಗೆ ತಲುಪಿಸುವ ಗುರಿ ಹೊಂದಿದೆ.
ಆನ್‌ಲೈನ್ ಕೋರ್ಸ್ಗಳು ಸಾಕ್ಷ್ಯಚಿತ್ರ, ಪರಿಣಿತ ಉಪನ್ಯಾಸಗಳು ಮತ್ತು ಶೈಕ್ಷಣಿಕ ವಾಚನಗೋಷ್ಠಿಯನ್ನು ಒಳಗೊಂಡಿವೆ. ಈ ಕೋರ್ಸ್‌ನಲ್ಲಿ ಈಗಾಗಲೇ 450 ವಿದ್ಯಾರ್ಥಿಗಳು ಭಾಗವಹಿಸಿ ಪೂರ್ಣಗೊಳಿಸಿದ್ದಾರೆ. ಕೋರ್ಸ್ ಜೊತೆಗೆ, ಸಿಐಎಸ್‌ಡಿ ತುಳುನಾಡಿನ ಸಂಸ್ಕೃತಿಗಳು ಎಂಬ ಪುಸ್ತಕವನ್ನೂ ಪ್ರಕಟಿಸಿದೆ. ಇದು ಈ ಪ್ರದೇಶದ ಸಾಂಸ್ಕೃತಿಕ ಸಂಪ್ರದಾಯಗಳ ವಿವಿಧ ಅಂಶಗಳ ಒಳನೋಟಗಳು ಮತ್ತು ಮಾಹಿತಿ ನೀಡುತ್ತದೆ.
ಇದನ್ನೂ ಓದಿ: ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡದ 'ಕೆರೆಬೇಟೆ', 'ವೆಂಕ್ಯಾ' ಪ್ರದರ್ಶನ