ಬೆಂಗಳೂರು: ಇತ್ತೀಚಿಗೆ ನಗರದ ವೈಯಾಲಿಕಾವಲ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮಹಾಲಕ್ಷ್ಮಿ (29) ಎಂಬ ಯುವತಿಯ ಭೀಕರ ಹತ್ಯೆ ಪ್ರಕರಣದ ಕುರಿತು ಆಕೆಯ ತಾಯಿ ಮೀನಾ ರಾಣಾ ಅವರು ಪೊಲೀಸರಿಗೆ ನೀಡಿದ ದೂರಿನನ್ವಯ ಎಫ್ಐಆರ್ ದಾಖಲಾಗಿದೆ. ಈ ದೂರಿನಲ್ಲಿ ಪತಿ ಹಾಗು ಸಹೋದರನೊಂದಿಗೂ ಮಗಳು ಜಗಳ ಮಾಡಿಕೊಂಡು ಮಗುವನ್ನೂ ತೊರೆದು ಒಂಟಿಯಾಗಿ ವಾಸವಿದ್ದ ಬಗ್ಗೆ ತಿಳಿಸಿದ್ದಾರೆ. ಹೀಗಾಗಿ, ಪ್ರಕರಣ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ದೂರಿನ ವಿವರ: ನೇಪಾಳದ ಟಿಕಾಪೂರ್ ಎಂಬಲ್ಲಿನ ಮೀನಾ ರಾಣಾ ಕುಟುಂಬ ಕೆಲಸ ಅರಸಿ 35 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ನೆಲಮಂಗಲದಲ್ಲಿ ವಾಸವಿತ್ತು. ಮೀನಾ ರಾಣಾ ಅವರ ನಾಲ್ವರು ಮಕ್ಕಳ ಪೈಕಿ ಎರಡನೆಯವರಾದ ಮಹಾಲಕ್ಷ್ಮಿಗೆ ಹೇಮಂತ್ ದಾಸ್ ಜೊತೆ ವಿವಾಹವಾಗಿತ್ತು. 4 ವರ್ಷದ ಹೆಣ್ಣು ಮಗುವಿನೊಂದಿಗೆ ದಂಪತಿ ನೆಲಮಂಗಲದಲ್ಲಿ ನೆಲೆಸಿದ್ದರು. ಮೂರನೆಯ ಮಗ ಹುಕುಂ ಸಿಂಗ್ ರಾಣಾಗೂ ವಿವಾಹವಾಗಿದ್ದು, ಫುಡ್ ಡೆಲಿವರಿ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಿಕೊಂಡಿದ್ದರು.
ಆರಂಭದಿಂದಲೂ ಗಂಡನೊಂದಿಗೆ ಹೊಂದಾಣಿಕೆಯಾಗದೆ ಜಗಳವಾಗುತ್ತಿದ್ದುದರಿಂದ ಮಹಾಲಕ್ಷ್ಮಿ 2023ರ ಅಕ್ಟೋಬರ್‌ನಲ್ಲಿ ವೈಯಾಲಿಕಾವಲ್ ಠಾಣಾ ವ್ಯಾಪ್ತಿಯ ಬಸಪ್ಪ ಗಾರ್ಡನ್‌ನಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದರು. ಪತಿ ಹೇಮಂತ್ ದಾಸ್ ಮಗುವಿನೊಂದಿಗೆ ನೆಲಮಂಗಲದಲ್ಲಿದ್ದರು. ಮಹಾಲಕ್ಷ್ಮಿ ತಮ್ಮ ಕುಟುಂಬವನ್ನು ತೊರೆದ ಆರಂಭದ ದಿನಗಳಲ್ಲಿ ಸಹೋದರ ಹುಕುಂ ಸಿಂಗ್ ಹಾಗೂ ಆತನ ಪತ್ನಿ ದೀಪಿಕಾ ಕೂಡಾ ಆಕೆಯೊಂದಿಗೆ ಬಸಪ್ಪ ಗಾರ್ಡನ್‌ನಲ್ಲಿ ವಾಸವಿದ್ದರು.
ಆದರೆ, 15 ದಿನಗಳ ಬಳಿಕ ಮನೆಯಲ್ಲಿ ತಾನೊಬ್ಬಳೇ ಇರುವುದಾಗಿ ಸಹೋದರ ಹುಕುಂ ಸಿಂಗ್ ಜೊತೆ ಮಹಾಲಕ್ಷ್ಮಿ ಜಗಳವಾಡಿದ್ದರು. ಬಳಿಕ ಹುಕುಂ ಸಿಂಗ್ ಪತ್ನಿಯೊಂದಿಗೆ ಗುಂಜೂರಿಗೆ ಶಿಫ್ಟ್ ಆಗಿದ್ದರು. ನಂತರ ಬಾಡಿಗೆ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದ ಮಹಾಲಕ್ಷ್ಮಿಯನ್ನು ಆಗಾಗ ತಾಯಿ ಹಾಗೂ ಸಹೋದರಿ ಬಂದು ಭೇಟಿಯಾಗುತ್ತಿದ್ದರು. ಸೆಪ್ಟೆಂಬರ್ 2ರಂದು ಕೊನೆಯ ಬಾರಿ ತಂದೆಗೆ ಕರೆ ಮಾಡಿದ್ದ ಮಹಾಲಕ್ಷ್ಮಿ, ತಾಯಿಯನ್ನು ನೋಡಲು ಬರುವುದಾಗಿ ಹೇಳಿದ್ದರು. ಅದಾದ ಬಳಿಕ ಮತ್ತೆ ಮಹಾಲಕ್ಷ್ಮಿ ಕರೆ ಮಾಡಿರಲಿಲ್ಲ. ಸೆಪ್ಟೆಂಬರ್ 20ರಂದು ರಾತ್ರಿ ಮಹಾಲಕ್ಷ್ಮಿಯ ಸಹೋದರನಿಗೆ ಕರೆ ಮಾಡಿದ್ದ ಪಕ್ಕದ ಮನೆಯವರು, ಆಕೆ ವಾಸವಿರುವ ಮನೆಯಲ್ಲಿ ದುರ್ವಾಸನೆ ಬರುತ್ತಿರುವುದಾಗಿ ತಿಳಿಸಿದ್ದರು. ಬೆಳಗ್ಗೆ ಮಹಾಲಕ್ಷ್ಮಿಯ ತಾಯಿ ಹಾಗೂ ಸಹೋದರಿ ಮನೆಗೆ ಬಂದು ನೋಡಿದಾಗ ಮಹಾಲಕ್ಷ್ಮಿಯ ಮೃತದೇಹ ತುಂಡರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂದು ಮೀನಾ ರಾಣಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಹಾಲಕ್ಷ್ಮಿಯ ಪರಿಚಿತರು ಮನೆಗೆ ಬಂದು ಹೋಗುತ್ತಿದ್ದವರ ಕುರಿತು ಅನುಮಾನ ವ್ಯಕ್ತಪಡಿಸಿ ಮೀನಾ ರಾಣಾ ದೂರು ನೀಡಿದ್ದಾರೆ. ಪತಿ, ಸಹೋದರನೊಂದಿಗೆ ಜಗಳವಾಡಿಕೊಂಡು ದೂರಾಗಿದ್ದ ಮಹಾಲಕ್ಷ್ಮಿಯ ಹತ್ಯೆಯ ಕುರಿತು ಪೊಲೀಸರಿಗೆ ಅನುಮಾನ ವ್ಯಕ್ತವಾಗಿದ್ದು ಆಕೆಯೊಂದಿಗೆ ಸಂಪರ್ಕದಲ್ಲಿದ್ದ ಪ್ರತಿಯೊಬ್ಬರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮರಣೋತ್ತರ ಪರೀಕ್ಷೆ ವರದಿ ಇಂದು ಕೈ ಸೇರುವ ನಿರೀಕ್ಷೆ: ಹಂತಕ ಫ್ರಿಡ್ಜ್ನಲ್ಲಿರಿಸಿದ್ದ ಮೃತದೇಹದ 52 ತುಂಡುಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಮರಣೋತ್ತರ ಪರೀಕ್ಷೆ ಮುಗಿಸಿರುವ ವೈದ್ಯರು, ಇಂದು ಪ್ರಾಥಮಿಕ ವರದಿ ಸಲ್ಲಿಸಲಿದ್ದು, ಇನ್ನೂ ಕೆಲ ಪರೀಕ್ಷೆಗಳ ವರದಿ ಒಂದು ವಾರದ ಬಳಿಕ ಕೈ ಸೇರುವ ನಿರೀಕ್ಷೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಮಹಾಲಕ್ಷ್ಮಿಯ ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಚುಚ್ಚಿರುವ ಹಂತಕ ಬಳಿಕ ಮೃತದೇಹವನ್ನು ತುಂಡರಿಸಿದ್ದಾನೆ. ನಂತರ ಫ್ರಿಡ್ಜ್ನಲ್ಲಿರಿಸಿದ್ದಾನೆ. ಮೃತದೇಹದ ತುಂಡುಗಳನ್ನು ಜೋಡಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಹತ್ಯೆಗೂ ಮುನ್ನ ಪ್ರಜ್ಞೆ ತಪ್ಪಿಸಲಾಗಿತ್ತೇ? ಅಥವಾ ವಿಷಪ್ರಾಶನ ಮಾಡಿ ಹತ್ಯೆಗೈಯ್ಯಲಾಗಿತ್ತೇ? ಎಂಬುದರ ಕುರಿತು ಪತ್ತೆ ಹಚ್ಚಲು ಹೊಟ್ಟೆ ಹಾಗೂ ಕರುಳಿನ ಭಾಗವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರುವುದು ವಿಳಂಬವಾಗುತ್ತದೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.