ದೊಡ್ಡಬಳ್ಳಾಪುರ: ಜನವರಿ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾನ ವಿಗ್ರಹ ಪ್ರತಿಷ್ಠಾಪನೆಯಾಗಲಿದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದಾರೆ. ಮಾದಿಗ ಸಮುದಾಯದ ಮುಖಂಡರು ಶುಭಕೋರಿ ಬೀಳ್ಕೊಟ್ಟರು.
ರಾಮಮಂದಿರ ಟ್ರಸ್ಟ್ನಿಂದ ಆಹ್ವಾನ ಬಂದಿರುವ ಹಿನ್ನೆಲೆಯಲ್ಲಿ ಸ್ವಾಮೀಜಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳಿದ್ದಾರೆ. ಚಿತ್ರದುರ್ಗದಿಂದ ತೆರಳಿರುವ ಅವರು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಯೋಧ್ಯೆ ಶ್ರೀಮಹರ್ಷಿ ವಾಲ್ಮೀಕಿ ಗುರುಪೀಠ ಶ್ರೀವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಶ್ರೀಕನಕ ಗುರುಪೀಠದ ಸ್ವಾಮೀಜಿ ನಿರಂಜನಾನಂದಪುರಿ ಸ್ವಾಮೀಜಿ, ಭೋವಿ ಮಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀ ಸೇರಿದಂತೆ ಸ್ವಾಮೀಜಿ ತಂಡದೊಂದಿಗೆ ಪ್ರಯಾಣ ಬೆಳೆಸಿದ್ದಾರೆ.
![ayodhya](https://etvbharatimages.akamaized.net/etvbharat/prod-images/21-01-2024/20559046_thumbswamiji.jpeg)
ಏರ್ಪೋರ್ಟ್ಗೆ ತೆರಳುವ ದಾರಿ ಮಧ್ಯೆ ದೊಡ್ಡಬಳ್ಳಾಪುರದಲ್ಲಿ ಕೆಲಹೊತ್ತು ಮಾದಿಗ ಸಮುದಾಯದ ಮುಖಂಡರನ್ನು ಭೇಟಿ ಮಾಡಿದರು. ಈ ವೇಳೆ ಸ್ವಾಮೀಜಿಯವರ ಪ್ರಯಾಣಕ್ಕೆ ಶುಭಕೋರಿದರು. ಮಾದಿಗ ಸಮುದಾಯದ ಮುಖಂಡರಾದ ನರಸಿಂಹಮೂರ್ತಿ ನೇರಳಘಟ್ಟ ಮಾತನಾಡಿ, ರಾಮಾಯಣದಲ್ಲಿ ಹೇಳಿರುವಂತೆ ರಾಮ ಸೀತೆಯನ್ನು ರಕ್ಷಣೆ ಮಾಡಲು ಮಾದಿಗ ಸಮುದಾಯದ ಜಾಂಬವಂತ ಸಹಾಯ ಮಾಡಿದ್ದಾನೆ. ರಾಮನಿಗೂ ಮಾದಿಗ ಸಮುದಾಯಕ್ಕೂ ಪುರಾಣ ಕಾಲದಿಂದ ಸಂಬಂಧವಿದೆ. ಶ್ರೀರಾಮ ಮಂದಿರ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಮಾದಿಗ ಸಮುದಾಯ ಸ್ವಾಮೀಜಿಯವರಿಗೆ ಆಹ್ವಾನ ನೀಡಿರುವುದು ಸಮುದಾಯಕ್ಕೆ ಸಂತಸ ತಂದಿದೆ ಎಂದರು.
ಸಮುದಾಯದ ಮುಖಂಡ ಹನುಮಂತರಾಜು, ನರಸಪ್ಪ, ನರೇಂದ್ರ ಮಾಡೇಶ್ವರ, ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷರಾದ ರಾಮು ನೇರಳೆಘಟ್ಟ ಮತ್ತು ಮುಖಂಡರು ಹಾಜರಿದ್ದರು.
ಇದನ್ನೂ ಓದಿ: ಅಯೋಧ್ಯೆ ತಲುಪಿದ ಕಂಗನಾ ರಣಾವತ್: 'ಪುಣ್ಯವಿದ್ದವರಿಗೆ ಶ್ರೀರಾಮನ ದರ್ಶನ ಸಾಧ್ಯ'ವೆಂದ ನಟಿ