ಬೆಂಗಳೂರು: ಲೋಕಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಚುನಾವಣಾ ಆಯೋಗ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಮಾದರಿ ನೀತಿ ಸಂಹಿತೆ ಜಾರಿಯಾದ ಬಳಿಕ ಮೊದಲ ದಿನವೇ ರಾಜ್ಯದಲ್ಲಿ ಒಟ್ಟು 15.89 ಕೋಟಿ ರೂ. ಮೌಲ್ಯದ ನಗದು, ಮದ್ಯ ಹಾಗು ಬೆಲೆಬಾಳುವ ಲೋಹಗಳನ್ನು ಜಪ್ತಿ ಮಾಡಲಾಗಿದೆ.
ರಾಜ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯಡಿ ಮೊದಲ ದಿನ ನಗದು ರೂಪದಲ್ಲಿ 45.76 ಲಕ್ಷ ರೂ. ಜಪ್ತಿ ಮಾಡಿದೆ. ಇದರ ಜೊತೆಗೆ 15.37 ಕೋಟಿ ರೂ. ಮೌಲ್ಯದ ಮದ್ಯ, ಇತರೆ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಆಯೋಗ ಮಾಹಿತಿ ನೀಡಿದೆ.
ಸೋಮವಾರದವರೆಗೆ 2,357 ಕ್ಷಿಪ್ರ ಪಡೆಗಳು (FS) ಮತ್ತು 2,669 ಸ್ಥಾಯಿ ಕಾವಲು ತಂಡಗಳನ್ನು (SST) ಸಕ್ರಿಯಗೊಳಿಸಲಾಗಿದೆ. ಚುನಾವಣೆ ಘೋಷಣೆಯ ನಂತರ 87,212 ಗೋಡೆ ಬರಹ, ಪೋಸ್ಟರ್, ಬ್ಯಾನರ್ ಮತ್ತು ಇತರೆ ವಿರೂಪಗಳನ್ನು 24 ಗಂಟೆಗಳ ಒಳಗೆ ಸರ್ಕಾರಿ ಆಸ್ತಿಯಿಂದ ತೆಗೆದುಹಾಕಲಾಗಿದೆ. ಹಾಗೆಯೇ 34,307 ಗೋಡೆ ಬರಹ, ಪೋಸ್ಟರು, ಬ್ಯಾನರ್ಗಳನ್ನು ಸಾರ್ವಜನಿಕ ಆಸ್ತಿಯಿಂದ ತೆಗೆದುಹಾಕಲಾಗಿದೆ. ಕರ್ನಾಟಕ ತೆರೆದ ಸ್ಥಳಗಳ (ವಿರೂಪಗೊಳಿಸುವಿಕೆಯ ನಿಬಂಧನೆಗಳು) [Karnataka Open Places (Provisions of disfigurement) Act] ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿ: ರಾಜ್ಯದಲ್ಲಿ 5.42 ಕೋಟಿ ಮತದಾರರು, ಅಧಿಕಾರಿಗಳಿಂದ ಹದ್ದಿನ ಕಣ್ಣು
ದಾಖಲಾದ ಪ್ರಕರಣಗಳು: ಕ್ಷಿಪ ಪಡೆಗಳು (FS), ಸ್ಥಿರ ಕಣ್ಗಾವಲು ತಂಡಗಳು (SST) ಮತ್ತು ಪೊಲೀಸ್ ಅಧಿಕಾರಿಗಳು ನಗದು, ಮದ್ಯ, ಡ್ರಗ್ಸ್ ಬೆಲೆಬಾಳುವ ಲೋಹ ಮತ್ತು ಉಚಿತ ಉಡುಗೊರೆ(Freebies) ವಶಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ 70 ಎಫ್ಐಆರ್ಗಳನ್ನು ದಾಖಲಿಸಲಾಗಿದೆ. 29,332 ಶಸ್ತ್ರಾಸ್ತ್ರಗಳನ್ನು ಠೇವಣಿ ಮಾಡಲಾಗಿದೆ, 824 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ, CRPC ಅಡಿಯಲ್ಲಿ 1,350 ಪ್ರಕರಣಗಳನ್ನು ದಾಖಲಿಸಿದೆ. ಅದರಲ್ಲಿ ಜಾಮೀನುರಹಿತ ವಾರಂಟ್ (Non Bailable warrant) ಅಡಿಯಲ್ಲಿ 819 ವ್ಯಕ್ತಿಗಳ ವಿರುದ್ಧ 699 ಪ್ರಕರಣಗಳನ್ನು ದಾಖಲಿಸಿದೆ.
ಅಬಕಾರಿ ಇಲಾಖೆ ಘೋರ ಅಪರಾಧ ಅಡಿಯಲ್ಲಿ 56 ಪ್ರಕರಣಗಳನ್ನು ದಾಖಲಿಸಿದ್ದು, ಪರವಾನಗಿ ಉಲ್ಲಂಘನೆ ಅಡಿಯಲ್ಲಿ 53 ಪ್ರಕರಣ ದಾಖಲಾಗಿದೆ. NDPS ಅಡಿಯಲ್ಲಿ 4 ಪ್ರಕರಣಗಳನ್ನು ಮತ್ತು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಸೆಕ್ಷನ್ 15(a) ಅಡಿಯಲ್ಲಿ 241 ಪ್ರಕರಣಗಳು ದಾಖಲಾಗಿವೆ. 35 ವಿವಿಧ ರೀತಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದಾಯ ಇಲಾಖೆ ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರಗಳಲ್ಲಿ 20 ಲಕ್ಷ ರೂ. ನಗದು ವಶಕ್ಕೆ ಪಡೆದುಕೊಂಡಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ: ಮಾದರಿ ನೀತಿ ಸಂಹಿತೆ ಜಾರಿಯಾದರೆ ಏನೆಲ್ಲಾ ಆಗುತ್ತೆ?