ಬೆಂಗಳೂರು: ಚುನಾವಣಾ ಅಕ್ರಮದ ಮೇಲೆ ನಿಗಾವಹಿಸಿರುವ ವಿವಿಧ ತನಿಖಾ ತಂಡಗಳು ಸೋಮವಾರ ಒಟ್ಟು 2.68 ಕೋಟಿ ರೂ. ನಗದು, 7.06 ಕೋಟಿ ರೂ. ಮೌಲ್ಯದ ಮೂರು ಕೆಜಿ ಚಿನ್ನಾಭರಣ, 68 ಕೆಜಿ ಬೆಳ್ಳಿ, 103 ಕೆಜಿ ಹಳೆ ಬೆಳ್ಳಿಯನ್ನು ಜಪ್ತಿ ಮಾಡಿವೆ.
ಲೋಕಸಭೆ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಾದ ಬಳಿಕ ಇದುವರೆಗೆ 44.09 ಕೋಟಿ ರೂ. ನಗದು ಸೇರಿ 288 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇದರಲ್ಲಿ 134 ಕೋಟಿ ರೂ. ಮೌಲ್ಯದ 1.39 ಕೋಟಿ ಲೀಟರ್ ಮದ್ಯ, 9.54 ಕೋಟಿ ರೂ. ಮೌಲ್ಯದ 339 ಕೆಜಿ ಮಾದಕ ವಸ್ತುಗಳು, 10.56 ಕೋಟಿ ರೂ. ಮೌಲ್ಯದ 19 ಕೆಜಿ ಚಿನ್ನ, 69.23 ಲಕ್ಷ ರೂ. ಮೌಲ್ಯದ 230 ಕೆಜಿ ಬೆಳ್ಳಿ ಸೇರಿದೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.
ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ 7.06 ಕೋಟಿ ರೂ. ಮೌಲ್ಯದ 3 ಕೆಜಿ ಚಿನ್ನ, 68 ಕೆಜಿ ಬೆಳ್ಳಿ, 103 ಕೆಜಿ ಹಳೇ ಬೆಳ್ಳಿ, 5.60 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 10 ಲಕ್ಷ ರೂ. ಮೌಲ್ಯದ 1,411 ಫ್ಯಾನ್ಸ್ ಪರಿಕರಗಳ ಜಪ್ತಿ ಮತ್ತು ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ 2.62 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಕಚೇರಿ ಮಾಹಿತಿ ನೀಡಿದೆ.
ಇದನ್ನೂ ಓದಿ: ಮೊದಲ ಹಂತದ ಕಣದಲ್ಲಿ ಒಟ್ಟು 247 ಅಭ್ಯರ್ಥಿಗಳು; ನಾಳೆಯಿಂದ ಪ್ರಚಾರ ಭರಾಟೆ ಮತ್ತಷ್ಟು ಜೋರು - Lok Sabha Election