ಬೆಂಗಳೂರು: ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್ ವರಿಷ್ಠ ನಾಯಕರ ಸಭೆ ಇಂದು ಆಯೋಜನೆಗೊಂಡಿದ್ದು, ಲೋಕಸಭಾ ಕ್ಷೇತ್ರಗಳಲ್ಲಿ ಯಾವ ರೀತಿಯ ಹೊಂದಾಣಿಕೆ ಇರಬೇಕು, ಪ್ರಚಾರ ಕಾರ್ಯದಲ್ಲಿ ಪರಸ್ಪರ ಭಾಗಿಯಾಗುವ ಬಗೆ ಹೇಗೆ ಎನ್ನುವ ಕುರಿತು ಮಹತ್ವದ ಸಮಾಲೋಚನೆ ನಡೆಯಲಿದೆ.
ಗುರುವಾರವಷ್ಟೇ ಬೆಂಗಳೂರಿಗೆ ಸೀಮಿತವಾಗಿ ಉಭಯ ಪಕ್ಷಗಳ ನಾಯಕರ ಸಮನ್ವಯ ಸಭೆ ನಡೆದ ಬೆನ್ನಲ್ಲೇ ಇಂದು ರಾಜ್ಯಮಟ್ಟದಲ್ಲಿ ಕೈಗೊಳ್ಳಬೇಕಾದ ನಿರ್ಧಾರಗಳ ಕುರಿತು ಚರ್ಚಿಸಲು ಸಮನ್ವಯ ಸಭೆ ಕರೆಯಲಾಗಿದೆ. ಬೆಳಗ್ಗೆ 11.00ರಿಂದ ಅರಮನೆ ರಸ್ತೆಯಲ್ಲಿ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಸಭೆ ನಿಗದಿಯಾಗಿದೆ.
ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ, ರಾಜ್ಯ ಬಿಜೆಪಿ ವರಿಷ್ಠ ನಾಯಕ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಎರಡು ಪಕ್ಷದ ಹಿರಿಯ ನಾಯಕರು ಹಾಗೂ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಮೈತ್ರಿ ನಂತರ ಬಿಜೆಪಿಗೆ 25 ಸ್ಥಾನ ಜೆಡಿಎಸ್‌ಗೆ 3 ಸ್ಥಾನ ಹಂಚಿಕೆಯಾಗಿದೆ. ಅದರಂತೆ ನಾಮಪತ್ರ ಸಲ್ಲಿಕೆ ಕಾರ್ಯಕ್ಕೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಈ ನಡುವೆ ಹಾಸನ ಸೇರಿದಂತೆ ಕೆಲವು ಭಾಗದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರ ನಡುವೆ ಅಂತರವಿದೆ. ಮೈತ್ರಿಗೆ ವಿರೋಧವೂ ವ್ಯಕ್ತವಾಗಿದೆ. ಅಲ್ಲದೆ ಬಿಜೆಪಿ ನಾಯಕರು ಪ್ರಚಾರ ಕಾರ್ಯ ಸೇರಿದಂತೆ ಚುನಾವಣಾ ಪ್ರಕ್ರಿಯೆಗಳಲ್ಲಿ ಜೆಡಿಎಸ್ ಅನ್ನು ಕಡೆಗಣಿಸುತ್ತಿದ್ದಾರೆ ಎಂದು ಜೆಡಿಎಸ್ ನಾಯಕರ ಸಭೆಯಲ್ಲಿ ಮುಖಂಡರು ಆಪಾದಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇರುವ ಗೊಂದಲ ಸರಿಪಡಿಸಿಕೊಂಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಯಲಿದೆ.
ರಾಷ್ಟ್ರಮಟ್ಟದಲ್ಲಿ ಎನ್ಡಿಎ ಯಾವ ರೀತಿ ನಡೆಯುತ್ತಿದೆಯೋ ಅದೇ ರೀತಿಯಲ್ಲಿ ರಾಜ್ಯದಲ್ಲಿಯೂ ನಡೆಯಬೇಕು. ಮಿತ್ರಪಕ್ಷಗಳು ಒಗ್ಗಟ್ಟಾಗಿ ಹೋಗಬೇಕು. ಅದಕ್ಕೆ ಏನೆಲ್ಲಾ ಮಾಡಬೇಕು ಎನ್ನುವ ಕುರಿತು ಚರ್ಚಿಸಲಾಗುತ್ತದೆ. ರಾಜ್ಯ ಪ್ರವಾಸದಲ್ಲಿ ನಾಯಕರ ಪಾಲ್ಗೊಳ್ಳುವಿಕೆಯ ಬಗ್ಗೆಯೂ ನಿರ್ಧಾರ ಆಗಲಿದೆ.