ದಾವಣಗೆರೆ: "ಕಾಂಗ್ರೆಸ್ ಪಕ್ಷದ ಭಿಕ್ಷೆಯಿಂದ ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಶಾಸಕರಾಗಿರಬೇಕಾದ ಅವಶ್ಯಕತೆ ಇಲ್ಲ. ಹೀಗಾಗಿ ಬಿ.ವೈ.ವಿಜಯೇಂದ್ರ ಅವರೇ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಬನ್ನಿ, ಈ ಮೂಲಕ ಕಾಂಗ್ರೆಸ್ನವರಿಗೆ ಮುಖಭಂಗ ಆಗುವಂತೆ ತೀರ್ಮಾನ ತೆಗೆದುಕೊಳ್ಳಿ" ಎಂದು ಹರಿಹರ ಶಾಸಕ ಬಿ.ಪಿ.ಹರೀಶ್ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಎಲ್ಲಾ ಪಕ್ಷದ ನಾಯಕರು ಹೊಂದಾಣಿಕೆ ರಾಜಕೀಯ ಮಾಡುತ್ತಾರೆ ಎಂದು ಈ ಹಿಂದೆಯೇ ನಾನು ಹೇಳಿದ್ದೆ. ಇವತ್ತು ಅದು ಸತ್ಯ ಎನ್ನುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್, ಹೇ ವಿಜಯೇಂದ್ರ ನೀನು ಕಾಂಗ್ರೆಸ್ ಕೊಟ್ಟ ಭಿಕ್ಷೆಯಿಂದ ಶಾಸಕರಾಗಿರುವುದು, ನಾಗರಾಜ್ ಗೌಡರನ್ನು ಶಿಕಾರಿಪುರದಲ್ಲಿ ನಿಲ್ಲಿಸಿದ್ದರೆ ಗೊತ್ತಾಗುತ್ತಿತ್ತು ನಿನ್ನ ಬಣ್ಣ ಎಂದು ಹೇಳಿದ್ದಾರೆ. ನಾನು ಅಂದು ಹೇಳಿದ್ದ ಮ್ಯಾಚ್ಫಿಕ್ಸಿಂಗ್ ಅನ್ನು ಕಾಂಗ್ರೆಸ್ ಅಧ್ಯಕ್ಷರೇ ಒಪ್ಪಿಕೊಂಡರು" ಎಂದರು.
"ಮೊದಲಿನ ಯಡಿಯೂರಪ್ಪ ಈಗ ಇಲ್ಲ. ಅವರು ಶ್ರೀಮಂತರ ಸಹವಾಸಕ್ಕೆ ಬಿದ್ದು, ಒಳ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ. ಬಿ.ವೈ.ವಿಜಯೇಂದ್ರ ಹೊಂದಾಣಿಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿನ ಒಳಒಪ್ಪಂದ ಹಾಗೂ ಹೊಂದಾಣಿಕೆ ರಾಜಕಾರಣ ಈಗ ಬಯಲಾಗುತ್ತಿದೆ. ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಮ್ಮ ಫಾರ್ಮ್ ಹೌಸ್ನಲ್ಲಿ ಜಿಂಕೆ ಪತ್ತೆಯಾದ ಪ್ರಕರಣದಲ್ಲಿ ಬಚಾವ್ ಆಗಲು ಅಂದು ಸಿಎಂ ಆಗಿದ್ದ ಬಸವರಾಜ್ ಬೊಮ್ಮಾಯಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರೇ ಕಾರಣ. ಈ ಬಗ್ಗೆ ಪಕ್ಷದ ವರಿಷ್ಠರಿಗೆ ದೂರ ಸಹ ನೀಡಲಾಗಿದೆ. ಜಿಂಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಲ್ಮಾನ್ ಖಾನ್ ಶಿಕ್ಷೆ ಅನುಭವಿಸಿ ಬಂದರೆ, ಸಚಿವ ಮಲ್ಲಿಕಾರ್ಜುನ್ಗೆ ಮಾತ್ರ ಶಿಕ್ಷೆಯಾಗಲಿಲ್ಲ. ಇದಕ್ಕೆ ಕಾರಣ ಹೊಂದಾಣಿಕೆ ರಾಜಕಾರಣ. ಇನ್ನು ವಿಜಯೇಂದ್ರ ವಿರುದ್ಧ ಬ್ಲ್ಯಾಕ್‌ಮೇಲ್ ರಾಜಕಾರಣ ಮಾಡುತ್ತಿರುವ ಡಿ.ಕೆ.ಸುರೇಶ್ಗೂ ಶಿಕ್ಷೆ ಆಗಬೇಕು" ಎಂದು ಒತ್ತಾಯಿಸಿದರು.
"ಬೆಳಗಾವಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದೆ. ಅಲ್ಲಿ ಹೊಂದಾಣಿಕೆ ರಾಜಕಾರಣದ ಬಗ್ಗೆ ವರಿಷ್ಠರ ಗಮನಕ್ಕೆ ತರಲಾಗಿದೆ. ಬಲಿಷ್ಠವಾಗಿ ಪಕ್ಷ ಕಟ್ಟುವವರು ಮಾತ್ರ ಸಭೆ ಸೇರಿದ್ದೆವು. ರಾಜ್ಯಾಧ್ಯಕ್ಷರ ವಿರುದ್ಧ ರಾಷ್ಟ್ರೀಯ ನಾಯಕರಿಗೆ ನಾವು ದೂರು ನೀಡಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಶಾಮನೂರು ಮನೆತನದ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೀರಿ ಅವರ ಪರ ಚುನಾವಣಾ ಕೆಲಸ ಮಾಡಿಸಿದ್ದೀರಿ. ಆದ್ದರಿಂದ ನಿನ್ನೆ ಸಭೆ ಮಾಡಿದ್ದೇವೆ. ನಮ್ಮ ಪಕ್ಷಕ್ಕೆ ಪರ್ಯಾಯ ನಾಯಕರ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲೂ ಸಭೆ ಮಾಡುತ್ತೇವೆ, ಅಲ್ಲಿ ಹೆಚ್ಚು ನಾಯಕರನ್ನು ಸೇರಿಸುತ್ತೇವೆ" ಎಂದು ತಿಳಿಸಿದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಬಿಜೆಪಿಯ 12 ಮಂದಿ ಸಭೆ ನಡೆಸಿರುವುದು ಆಘಾತ ಉಂಟು ಮಾಡಿದೆ: ಕೆ.ಎಸ್.ಈಶ್ವರಪ್ಪ - K S Eshwarappa