ದಾವಣಗೆರೆ: ಬೆಣ್ಣೆನಗರಿ ದಾವಣಗೆರೆಯಲ್ಲಿ ನಮ್ಮ ಕ್ಲಿನಿಕ್ ತೆರೆಯಲಾಗಿದೆ. ಕೊಳಗೇರಿ ನಿವಾಸಿಗಳಿಗೆ, ಕೂಲಿ ಕಾರ್ಮಿಕರಿಗೆ, ದುರ್ಬಲ ವರ್ಗದವರಿಗೆ ಹಾಗು ನಗರ, ಗ್ರಾಮೀಣ ಪ್ರದೇಶದ ಜನರಿಗೆ ಸುಲಭವಾಗಿ ಆರೋಗ್ಯ ಸೇವೆ ದೊರೆಯಲಿ ಎಂಬ ಉದ್ದೇಶದಿಂದ ನಮ್ಮ ಕ್ಲಿನಿಕ್ಗಳನ್ನು ಆರಂಭಿಸಲಾಗಿದೆ. ಈ ಕ್ಲಿನಿಕ್ಗಳಲ್ಲಿ ಗುಣಮಟ್ಟದ ಚಿಕಿತ್ಸೆ ಮತ್ತು ಸಮರ್ಪಕವಾದ ಔಷಧಗಳು ದೊರೆಯುತ್ತಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ.
ನಮ್ಮ ಕ್ಲಿನಿಕ್ ಮಧ್ಯಮ ವರ್ಗದ ಜನರ ಪಾಲಿನ ಆರೋಗ್ಯ ಸಂಜೀವಿನಿಯಾಗುತ್ತದೆ ಎಂದು ಬಿಜೆಪಿ ಸರ್ಕಾರ ನಮ್ಮ ಕ್ಲಿನಿಕ್ ಎಂಬ ಯೋಜನೆ ಜಾರಿಗೆ ತಂದಿತ್ತು. ದಾವಣಗೆರೆ ನಗರದಲ್ಲಿ ಮೊಟ್ಟಮೊದಲ ನಮ್ಮ ಕ್ಲಿನಿಕ್ ಆರಂಭಿಸಲಾಯಿತು. ಈ ಕ್ಲಿನಿಕ್ನಿಂದ 11 ಸಾವಿರ ಜನರಿಗೆ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ. ಇಲ್ಲಿಗೆ ಒಟ್ಟು 7 ಕ್ಲಿನಿಕ್ಗಳು ಮಂಜೂರು ಆಗಿದ್ದವು. ಏಳು ಕ್ಲಿನಿಕ್ಗಳ ಪೈಕಿ ನಾಲ್ಕು ಕ್ಲಿನಿಕ್ಗಳು ಆರಂಭವಾಗಿವೆ.
ಜಿಲ್ಲೆಯ ಆವರಗೆರೆ, ಹೊನ್ನಾಳಿ, ಚನ್ನಗಿರಿ, ಜಗಳೂರು ನಾಲ್ಕು ಕಡೆ ಒಂದೊಂದು ಕ್ಲಿನಿಕ್ಗಳನ್ನು ತೆರೆಯಲಾಗಿದೆ. ಇನ್ನು ದಾವಣಗೆರೆ ಯರಗುಂಟೆ, ಹಳೇ ಕುಂದವಾಡ, ಮಲೇಬೆನ್ನೂರು ಒಟ್ಟು ಮೂರು ಕಡೆ ಕ್ಲಿನಿಕ್ ತೆರೆಯಲು ಜಾಗ ನಿಗದಿ ಮಾಡಲಾಗುತ್ತಿದೆ. ಈ ಕ್ಲಿನಿಕ್ಗಳು ಗ್ರಾಮೀಣ ಮತ್ತು ನಗರ ಪ್ರದೇಶದ ಮಧ್ಯೆ ಸೇವೆ ಸಲ್ಲಿಸಲಿವೆ.
ಆರ್ಸಿಹೆಚ್ ಅಧಿಕಾರಿ ರೇಣುಕರಾಧ್ಯ ಎ.ಎಂ. ಮಾಹಿತಿ: "ಈಗಾಗಲೇ ದಾವಣಗೆರೆಯ ಆವರಗೆರೆ, ಹೊನ್ನಾಳಿ, ಜಗಳೂರು, ಚನ್ನಗಿರಿ ನಾಲ್ಕು ಕಡೆಗಳಲ್ಲಿ ನಾಲ್ಕು ಕ್ಲಿನಿಕ್ಗಳನ್ನು ಆರಂಭಿಸಲಾಗಿದೆ. ಯರಗುಂಟೆ, ಹಳೇ ಕುಂದವಾಡ, ಮಲೇಬೆನ್ನೂರು ಒಟ್ಟು ಮೂರು ಕಡೆ ಕ್ಲಿನಿಕ್ ತೆರೆಯಲು ಸ್ಥಳ ನಿಗದಿಪಡಿಸಲಾಗಿದೆ. ಇವು ಗ್ರಾಮೀಣ, ನಗರ ಪ್ರದೇಶದ ಮಧ್ಯೆ ಕಾರ್ಯನಿರ್ವಹಿಸಲಿವೆ. ಮಧ್ಯಾಹ್ನ 12 ರಿಂದ ರಾತ್ರಿ 8ರ ವರೆಗೆ ಸೇವೆ ನೀಡಲಿವೆ. ಒಬ್ಬರು ಎಂಬಿಬಿಎಸ್ ವೈದ್ಯರು, ಒಬ್ಬರು ಸ್ಟಾಫ್ ನರ್ಸ್, ಡೇಟಾ ಎಂಟ್ರಿ, ಫಾರ್ಮಸಿಸ್ಟ್ , ಡಿ ಗ್ರೂಪ್ ನೌಕರ ಇರಲಿದ್ದಾರೆ" ಎಂದು ಆರ್ಸಿಹೆಚ್ ಅಧಿಕಾರಿ ರೇಣುಕಾರಾಧ್ಯ ಎ.ಎಂ. ತಿಳಿಸಿದ್ದಾರೆ.
ನಮ್ಮ ಕ್ಲಿನಿಕ್ ರೈತರಿಗೆ, ಕೊಳಗೇರಿ ನಿವಾಸಿಗಳಿಗೆ ಸಂಜೀವಿನಿ: ಕೊಳಗೇರಿ ನಿವಾಸಿಗಳು, ದಿನಗೂಲಿ ಕಾರ್ಮಿಕರು ಮತ್ತು ಸಮಾಜದಲ್ಲಿರುವ ಇತರ ದುರ್ಬಲ ವರ್ಗಗಳಿಗೆ ಸುಲಭವಾಗಿ ವೈದ್ಯಕೀಯ ಸೇವೆ ದೊರಕಿಸಬೇಕೆಂಬುದು ಈ ಯೋಜನೆಯ ಪ್ರಮುಖ ಉದ್ದೇವಾಗಿದೆ. ಜಿಲ್ಲೆಯಲ್ಲಿ ನಾಲ್ಕು ನಮ್ಮ ಕ್ಲಿನಿಕ್ಗಳು ತೆರೆದಿದ್ದರಿಂದ ಬಡ ವರ್ಗದ ಜನರಿಗೆ ಸಂಜೀವಿನಿಯಾಗಿವೆ. ಬಡವರ್ಗದವರಿಗೆ ಹೆಚ್ಚು ಉಪಯೋಗವಾಗಿದೆ. ನಗರ ಮತ್ತು ಗ್ರಾಮೀಣ ಭಾಗಕ್ಕೆ ಹತ್ತಿರವಾಗುವ ಪ್ರದೇಶಗಳಲ್ಲಿ ಮತ್ತಷ್ಟು ಕ್ಲಿನಿಕ್ಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.
"ಕ್ಲಿನಿಕ್ಗೆ ಬರುವ ರೋಗಿಗಳಿಗೆ ಒಳ್ಳೆಯ ಚಿಕಿತ್ಸೆ ಕೊಡಲಾಗುತ್ತಿದೆ. ದಿನಕ್ಕೆ 30ರಿಂದ 50 ರೋಗಿಗಳು ಚಿಕಿತ್ಸೆ ಅರಸಿ ಬರಲಿದ್ದಾರೆ. ತುರ್ತು ಚಿಕಿತ್ಸೆ, ಸಾಂಕ್ರಾಮಿಕ ರೋಗಳಿಗೆ ಚಿಕಿತ್ಸೆ ಹಾಗೂ ಚುಚ್ಚು ಮದ್ದು ನೀಡಲಾಗುತ್ತಿದೆ. ಲ್ಯಾಬ್ ಟೆಸ್ಟ್ ಇದ್ದು, ಬಿಪಿ, ಶುಗರ್, ಕಫ ಪರೀಕ್ಷೆ ನಡೆಸಲಾಗುತ್ತದೆ. ಮಧ್ಯಾಹ್ನ 12 ರಿಂದ 8ರ ವರೆಗೆ ಕ್ಲಿನಿಕ್ ಸೇವೆ ಲಭ್ಯವಿರುತ್ತದೆ" ಎಂದು ವೈದ್ಯೆ ರಕ್ಷಿತಾ ಮಾಹಿತಿ ನೀಡಿದರು.
ನಮ್ಮ ಕ್ಲಿನಿಕ್ಗೆ ಬೇಕಿದೆ ಹೆಚ್ಚು ಔಷಧ, ಗುಣಮಟ್ಟದ ಚಿಕಿತ್ಸೆ: ''ಸರ್ಕಾರ ನಮ್ಮ ಕ್ಲಿನಿಕ್ಗಳನ್ನು ತೆರೆದಿದೆ. ಕ್ಲಿನಿಕ್ನಲ್ಲಿ ತುರ್ತಾಗಿ ಚಿಕಿತ್ಸೆ ಸಿಗಲಿ ಎಂಬ ಉದ್ದೇಶದಿಂದ ಜಾರಿಗೊಳಿಸಲಾಗಿದೆ. ಕ್ಲಿನಿಕ್ನಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿಲ್ಲ. ಜೊತೆಗೆ ಔಷಧಗಳ ಕೊರತೆ ಕಾಡುತ್ತಿದೆ. ನಮ್ಮ ಕ್ಲಿನಿಕ್ ಅನ್ನು ಗ್ರಾಮೀಣ ಮಟ್ಟದಲ್ಲಿ ಆಗಬೇಕಿದೆ. ಪ್ರತಿ ಹಳ್ಳಿಗೊಂದು ನಮ್ಮ ಕ್ಲಿನಿಕ್ ಅವಶ್ಯಕತೆ ಇದೆ" ಎಂದು ಸ್ಥಳೀಯರಾದ ಆವರಗೆರೆ ವಾಸು ಒತ್ತಾಯಿಸಿದರು.