ಬೆಂಗಳೂರು: ಮಾಜಿ ಸಚಿವ ಹೆಚ್. ಡಿ. ರೇವಣ್ಣ ಅವರ ವಿರುದ್ಧದ ಅಪಹರಣ ಆರೋಪ ಪ್ರಕರಣದಲ್ಲಿ ಎಸ್ಐಟಿ ತನಿಖಾಧಿಕಾರಿಗಳೆದುರು ಸಂತ್ರಸ್ತೆ ಗೊಂದಲದ ಹೇಳಿಕೆಗಳನ್ನ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಾಪತ್ತೆಯಾಗಿದ್ದ ಏ.29ನೇ ತಾರೀಖಿನಿಂದ ಮೇ 4ರ ವರೆಗೆ ಏನಾಯಿತು ಎಂಬ ಪ್ರಶ್ನೆಗಳನ್ನ ಸಂತ್ರಸ್ತೆಯ ಮುಂದಿಡಲಾಗಿದ್ದು, ಸಂತ್ರಸ್ತೆಯಿಂದ ಗೊಂದಲದ ಉತ್ತರಗಳು ಬಂದಿವೆ. ಆದ್ದರಿಂದ ಸಂತ್ರಸ್ತೆಗೆ ವಿರಾಮ ಪಡೆದು ನಿಧಾನವಾಗಿ ಹೇಳಿಕೆ ನೀಡಲು ತನಿಖಾಧಿಕಾರಿಗಳು ಸಮಯಾವಕಾಶ ನೀಡಿದ್ದಾರೆ.
ತನಿಖಾಧಿಕಾರಿಗಳ ಪ್ರಶ್ನೆಗೆ ಒಮ್ಮೆ 'ನಾನೇ ಕೆಲಸಕ್ಕೆ ಹೋಗಿದ್ದೆ' ಎಂದರೆ ಮತ್ತೊಮ್ಮೆ 'ಸತೀಶ್ ಬಾಬಣ್ಣ ಕರೆದುಕೊಂಡು ಹೋಗಿದ್ದರು' ಮಗದೊಮ್ಮೆ 'ಪರಿಚಿತರೊಂದಿಗೆ ಹೋಗಿದ್ದೆ' ಎಂದು ಸಂತ್ರಸ್ತ ಮಹಿಳೆ ಉತ್ತರಿಸಿದ್ದಾರೆ. ಒತ್ತಡದ ಕಾರಣದಿಂದ ಹೀಗೆ ಉತ್ತರಿಸುತ್ತಿರಬಹುದು ಎಂಬ ಕಾರಣದಿಂದ ಸಂತ್ರಸ್ತೆಗೆ ನಿಧಾನವಾಗಿ ಉತ್ತರಿಸಲು ಸಮಯಾವಕಾಶ ನೀಡಲಾಗಿದೆ. ಮತ್ತೊಂದೆಡೆ ಹೆಚ್.ಡಿ. ರೇವಣ್ಣ ಅವರನ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಎಸ್ಐಟಿ ಸಿದ್ಧವಾಗಿದೆ. ರೇವಣ್ಣ ಅವರನ್ನ ಕೋರಮಂಗಲದಲ್ಲಿರುವ ನಿವಾಸದಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಕೇಳಲು ಎಸ್ಐಟಿ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ನ್ಯಾಯಾಧೀಶರ ಮನೆಗೆ ಹೆಚ್.ಡಿ.ರೇವಣ್ಣ ಹಾಜರುಪಡಿಸಲು ಎಸ್ಐಟಿ ಸಿದ್ಧತೆ - H D Revanna