ಬೆಂಗಳೂರು: ಕಾವೇರಿ ನಿವಾಸದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ಸಭೆ ನಡೆಸಿ, ರಾಜ್ಯ ರಾಜಕಾರಣದ ಬಗ್ಗೆ ಸಮಾಲೋಚಿಸಿದರು.
ಮುಡಾ ಹಗರಣ, ಉಪ ಚುನಾವಣೆ, ಸಿಎಂ ಬದಲಾವಣೆ ಪುಕಾರು ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಜೊತೆಗಿನ ಕೆ.ಸಿ.ವೇಣುಗೋಪಾಲ್ ಭೇಟಿಯು ಕುತೂಹಲ ಮೂಡಿಸಿದೆ. ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ ಬಗ್ಗೆ ಮಾಹಿತಿ ಪಡೆದ ಕೆ.ಸಿ.ವೇಣುಗೋಪಾಲ್, ಚುನಾವಣೆ ಸಿದ್ಧತೆ, ಕಾರ್ಯತಂತ್ರ ಹಾಗೂ ಪಂಚ ಗ್ಯಾರಂಟಿ ಅನುಷ್ಠಾನ ಸಂಬಂಧ ಚರ್ಚೆ ನಡೆಸಿದರು.
ಅಭ್ಯರ್ಥಿಗಳ ಆಯ್ಕೆ ಬಗ್ಗೆಯೂ ಔಪಚಾರಿಕವಾಗಿ ಪ್ರಸ್ತಾಪಿಸಲಾಯಿತು. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಕಮಿಟಿ ಮಾಡಲಾಗಿದ್ದು, ಎಲ್ಲರೂ ಸ್ಥಳೀಯ ಮಟ್ಟದಲ್ಲಿ ಸಭೆ ನಡೆಸಿದ್ದಾರೆ. ಅಲ್ಲಿನ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಪಡೆದಿದ್ದಾರೆ. ನಮಗೂ ವಾಸ್ತವ ಪರಿಸ್ಥಿತಿ ವರದಿ ಕೊಟ್ಟಿದ್ದಾರೆ. ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿ ಕಳುಹಿಸಿಕೊಡುತ್ತೇವೆ ಎಂದು ಸಿಎಂ, ಡಿಸಿಎಂ ವಿವರಿಸಿದ್ದಾರೆ.
ಇತ್ತೀಚೆಗೆ ನಡೆದ ಹರಿಯಾಣ ರಾಜ್ಯದ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಚರ್ಚೆ ವೇಳೆ ಕೆ.ಸಿ.ವೇಣುಗೋಪಾಲ್ ಉಲ್ಲೇಖಿಸಿದ್ದಾರೆ. ಅತಿಯಾದ ಆತ್ಮವಿಶ್ವಾಸ ಬೇಡ. ವಿಪಕ್ಷಗಳ ತಂತ್ರಕ್ಕೆ ತಕ್ಕ ಪ್ರತ್ಯುತ್ತರ ನೀಡುವ ಕುರಿತು ಸಿದ್ಧತೆಗಳನ್ನು ಮಾಡಿಕೊಳ್ಳಿ. ಅಭ್ಯರ್ಥಿಗಳ ಆಯ್ಕೆ ಕುರಿತು ಶೀಘ್ರವೇ ಚರ್ಚಿಸಿ ಅಂತಿಮಗೊಳಿಸೋಣ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.
ಮುಡಾ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣವನ್ನು ಮುಂದಿಟ್ಟು ಕಾಂಗ್ರೆಸ್ ಪಕ್ಷದ ವಿರುದ್ಧ ಜನಾಭಿಪ್ರಾಯ ಮೂಡಿಸಲು ವಿಪಕ್ಷಗಳು ಯತ್ನಿಸುತ್ತಿವೆ. ಈ ಮೂರು ಕ್ಷೇತ್ರಗಳ ಉಪ ಚುನಾವಣೆಯನ್ನು ಎಚ್ಚರಿಕೆಯಿಂದ ನಿರ್ವಹಿಸುವಂತೆ ವೇಣುಗೋಪಾಲ್ ಉಭಯ ನಾಯಕರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಮುಡಾ ವಿಚಾರವಾಗಿ ಚರ್ಚೆ: ಇದೇ ವೇಳೆ, ಮುಡಾ ಪ್ರಕರಣ ವಿಚಾರವಾಗಿಯೂ ಚರ್ಚೆ ನಡೆಸಲಾಯಿತು. ಕಾನೂನು ಹೋರಾಟ ಹೇಗೆ ನಡೆದಿದೆ?. ಪ್ರತಿಪಕ್ಷಗಳ ತಂತ್ರಗಾರಿಕೆ, ಬಿಜೆಪಿ ಕಾಲದಲ್ಲಿನ ಅಕ್ರಮಗಳ ಬಗ್ಗೆ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸಮಾಲೋಚಿಸಿದ್ದಾರೆ. ನಾವು ನಿಮ್ಮ ಬೆನ್ನಿಗೆ ನಿಂತಿದ್ದೇವೆ. ಧೈರ್ಯವಾಗಿರಿ, ಜನಪರ ಆಡಳಿತ ನಡೆಸಿ ಎಂದು ಕೆ.ಸಿ.ವೇಣುಗೋಪಾಲ್ ಅಭಯ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಡಾದಲ್ಲಿ ನನ್ನ ಪಾತ್ರವೇನು ಇಲ್ಲ. ಬಿಜೆಪಿಯವರು ಬೇಕಂತಲೇ ಆರೋಪ ಮಾಡುತ್ತಿದ್ದಾರೆ. ಸರ್ಕಾರ ಬೀಳಿಸುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ನನ್ನ ಮೇಲೆ ಯಾವ ಆರೋಪಗಳೂ ಇಲ್ಲ. ಪರ್ಯಾಯ ನಿವೇಶನ ವಾಪಸ್ ನೀಡಲಾಗಿದೆ. ಇತ್ತ ಇ.ಡಿಯೂ ಪ್ರಕರಣ ದಾಖಲಿಸಿದೆ. ಅದನ್ನು ಎದುರಿಸಲು ನಾನು ಸಿದ್ಧನಿದ್ದೇನೆ. ನಾವು ರಾಜಕೀಯವಾಗಿ ಬಿಜೆಪಿ, ಜೆಡಿಎಸ್ಗೆ ಕೌಂಟರ್ ಕೊಡುತ್ತಿದ್ದೇವೆ. ಅವರ ಕಾಲದ ಅಕ್ರಮಗಳನ್ನೂ ಬಹಿರಂಗಪಡಿಸುತ್ತಿದ್ದು, ಈ ಸಂಬಂಧ ತನಿಖೆ ಚುರುಕುಗೊಳಿಸಿದ್ದೇವೆ ಎಂದು ಸಿಎಂ ತಿಳಿಸಿದ್ದಾರೆನ್ನಲಾಗಿದೆ.
ಇತ್ತ, ರಾಜ್ಯಪಾಲರು ಪದೇ ಪದೆ ಬರೆಯುತ್ತಿರುವ ಪತ್ರದ ಬಗ್ಗೆಯೂ ವಿಷಯ ಪ್ರಸ್ತಾಪವಾಗಿದೆ. ಇದಕ್ಕೆ ತೆಗೆದುಕೊಂಡಿರುವ ಕಾರ್ಯತಂತ್ರದ ಬಗ್ಗೆ ಕೆ.ಸಿ.ವೇಣುಗೋಪಾಲ್ ಗಮನಕ್ಕೆ ತರಲಾಯಿತು.
ಇದನ್ನೂ ಓದಿ: ವಾಲ್ಮೀಕಿ ಹಗರಣದಲ್ಲಿ ನನ್ನ ಪಾತ್ರವಿಲ್ಲ, ಇದು ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಷಡ್ಯಂತ್ರ: ಮಾಜಿ ಸಚಿವ ನಾಗೇಂದ್ರ