ಬೆಂಗಳೂರು: ಅನೇಕ ಘಟಾನುಘಟಿ ನಾಯಕರಾಗಿ ಸವಾಲಾಗಿದ್ದ ಲೋಕಸಭಾ ಚುನಾವಣಾ ಫಲಿತಾಂಶ ಇಂದು ಹೊರ ಬಿದ್ದಿದೆ. ಅನೇಕ ಕ್ಷೇತ್ರಗಳಲ್ಲಿ ಹಾಲಿ ಸಂಸದರು ಸೋಲಿನ ರುಚಿ ಕಂಡಿದ್ದಾರೆ. ಈ ನಡುವೆ ಮೊದಲ ಬಾರಿ ಚುನಾವಣಾ ಕಣಕ್ಕೆ ಇಳಿದು ಅನೇಕ ಅಭ್ಯರ್ಥಿಗಳು ಭರ್ಜರಿ ಗೆಲುವಿನ ಮೂಲಕ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಅದರಲ್ಲಿ ಮೂವರು ಮಾಜಿ ಸಿಎಂಗಳು ಇರುವುದು ವಿಶೇಷವಾಗಿದೆ. ಜೊತೆಗೆ ಕಿರಿಯ ವಯಸ್ಸಿನ ಅಭ್ಯರ್ಥಿಗಳು ಕೂಡ ಮೊದಲ ಚುನಾವಣೆಯಲ್ಲಿ ಗೆಲುವು ಸಾಧಿಸಿ ಸಂಸತ್ ಪ್ರವೇಶಕ್ಕೆ ಸಜ್ಜಾಗಿದ್ದಾರೆ.
ರಾಜ್ಯ ರಾಜಕಾರಣದಿಂದ ಕೇಂದ್ರಕ್ಕೆ ಜಿಗಿದ ಮಾಜಿ ಸಿಎಂಗಳು:
ಹೆಚ್ಡಿ ಕುಮಾರಸ್ವಾಮಿ: ಜೆಡಿಎಸ್- ಬಿಜೆಪಿ ಮೈತ್ರಿ ಹಿನ್ನಲೆ ಮಂಡ್ಯ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿದ ಹೆಚ್ ಡಿ ಕುಮಾರಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ವಿರುದ್ಧ 2 ಲಕ್ಷ 84 ಸಾವಿರದ 620 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ರಾಜ್ಯ ರಾಜಕಾರಣಕ್ಕೆ ವಿದಾಯ ಹೇಳಲು ಸಜ್ಜಾಗಿದ್ದಾರೆ.
ಜಗದೀಶ್ ಶೆಟ್ಟರ್: ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದ ಹಿನ್ನಲೆ ಕಾಂಗ್ರೆಸ್ ಸೇರಿದ್ದ ಜಗದೀಶ್ ಶೆಟ್ಟರ್, ಬಿಜೆಪಿ ಸೇರ್ಪಡನೆಯಾಗಿ ಬೆಳಗಾವಿ ಲೋಕಸಭಾ ಟಿಕೆಟ್ ಗಿಟ್ಟಿಸಿದ್ದರು. ಹೊಸ ಕ್ಷೇತ್ರದಲ್ಲಿ ಲಿಂಗಾಯತ ಮತಗಳ ಓಲೈಕೆ ನಡೆಸುವಲ್ಲಿ ಯಶಸ್ವಿಯಾದ ಅವರು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ವಿರುದ್ಧ 1,51,677 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಬಸವರಾಜ ಬೊಮ್ಮಾಯಿ: ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಬಿಜೆಪಿ ಹೈಕಮಾಂಡ್ ಆದೇಶದಂತೆ ಹಾವೇರಿ ಕ್ಷೇತ್ರದಲ್ಲಿ ನಿಂತು ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್ನ ಆನಂದಸ್ವಾಮಿ ಗಡ್ಡದೇವರಮಠ ವಿರುದ್ಧ 43 ಸಾವಿರ ಅಂತರದಲ್ಲಿ ಜಯಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರದಲ್ಲಿ ದಾಖಲೆಯ ಗೆಲುವು; ರಾಜ್ಯದ ಜಿದ್ದಾಜಿದ್ದಿ ಕಣಗಳಲ್ಲಿ ಒಂದಾಗಿ ರೂಪುಗೊಂಡಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ವಿರುದ್ಧ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ ಸಿ ಎನ್ ಮಂಜುನಾಥ್ 2,53,487 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಸಂಸದ ಡಿಕೆ ಸುರೇಶ್ಗೆ ಸೋಲಿನ ರುಚಿ ತೋರಿಸಿದ್ದಾರೆ.
ಮೈಸೂರು- ಕೊಡಗು ಗೆಲುವು: ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಕಣಕ್ಕೆ ಇಳಿದ ರಾಜವಂಶಸ್ಥ ಯದುವೀರ್ ಒಡೆಯರ್ ಭರ್ಜರಿ ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷಣ್ ವಿರುದ್ಧ 1,39,262 ಮತಗಳಿಂದ ಗೆಲುವು ದಾಖಲಿಸಿದ್ದಾರೆ.
ಬೆಂಗಳೂರು ಕೇಂದ್ರ: ಅಂತಿಮ ಕ್ಷಣದವರೆಗೆ ಹಿನ್ನಡೆ ಅನುಭವಿಸಿದ್ದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪಿಸಿ ಮೋಹನ್ ಗೆಲುವಿಗೆ ಮಹಾದೇವಪುರ ಕ್ಷೇತ್ರದ ಮತಗಳು ನಿರ್ಣಾಯಕವಾದವು. ಈ ಮೂಲಕ ಮಾಜಿ ಸಚಿವ ರೆಹಮಾನ್ ಖಾನ್ ಮಗ ಮನ್ಸೂರ್ ಆಲಿ ಖಾನ್ ವಿರುದ್ಧ ಗೆಲುವು ದಾಖಲಿಸಿದರು.
ಬೆಂಗಳೂರು ಉತ್ತರ: ಉಡುಪಿ- ಚಿಕ್ಕಮಗಳೂರು ಕ್ಷೇತ್ರ ತೊರೆದು ಬಂದು ಬೆಂಗಳೂರು ಉತ್ತರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಶಿಕ್ಷಣ ತಜ್ಞ ಪ್ರೊ ಎಂ ರಾಜೀವ್ ಗೌಡ ವಿರುದ್ಧ 2ಲಕ್ಷ ಮತಗಳ ಅಂತದಲ್ಲಿ ಗೆಲುವು ದಾಖಲಿಸಿದ್ದಾರೆ.
ದಾವಣಗೆರೆ: ಬಿಜೆಪಿ ಹಾಲಿ ಸಂಸದ ಜಿಎಂ ಸಿದ್ದೇಶ್ವರ್ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್ ವಿರುದ್ಧ ಕಣಕ್ಕೆ ಇಳಿದಿದ್ದ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಪುತ್ರಿ ಪ್ರಭಾ ಮಲ್ಲಿಕಾರ್ಜುನ್ ದಾಖಲೆಯ ಗೆಲುವು ಸಾಧಿಸಿದ್ದಾರೆ.
ಬಳ್ಳಾರಿ: ಸಂಡೂರು ಶಾಸಕ, ಕಾಂಗ್ರೆಸ್ನ ಅಭ್ಯರ್ಥಿ ಇ ತುಕಾರಾಂ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ವಿರುದ್ಧ ಕಣಕ್ಕೆ ಇಳಿದು ಗೆಲುವು ದಾಖಲಿಸಿದ್ದಾರೆ. ಈ ಮೂಲಕ ರಾಜ್ಯ ರಾಜಕೀಯಕ್ಕೆ ಗುಡ್ಬೈ ಹೇಳಲಿದ್ದಾರೆ.
ಬೆಂಗಳೂರು ದಕ್ಷಿಣ: ಬಿಜೆಪಿಯಿಂದ ಈ ಬಾರಿ ಕೂಡ ಟಿಕೆಟ್ ಪಡೆದ ತೇಜಸ್ವಿ ಸೂರ್ಯ, ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ವಿರುದ್ಧ ಎರಡೂವರೆ ಲಕ್ಷಕ್ಕೂ ಹೆಚ್ಚಿನ ಮತಗಳಿಂದ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆ ಎರಡಲ್ಲೂ ಸೌಮ್ಯ ರೆಡ್ಡಿ ಸೋಲಿನ ಕಹಿ ಕಂಡಿದ್ದಾರೆ.
ಸೋಲಿನ ಕಹಿಗೆ ಗೆಲುವಿನ ರುಚಿ; ವಿಧಾನಸಭಾ ಚುನಾವಣೆಯ ಸೋಲಿನಿಂದ ಕಂಗೆಟ್ಟಿದ್ದ ವಿ ಸೋಮಣ್ಣ ತುಮಕೂರನ್ನು ಬಿಜೆಪಿ ತೆಕ್ಕೆಗೆ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ವಿರುದ್ಧ ಅವರು 1,75,594 ಮತಗಳಿಂದ ಸೋಲಿಸಿದ್ದಾರೆ.
ಗೆದ್ದ ಸುಧಾಕರ್: ವಿಧಾನಸಭೆ ಸೋಲಿನ ನಿರಾಶೆಯಲ್ಲಿದ್ದ ಡಾ ಕೆ ಸುಧಾಕರ್ ಲೋಕಸಭೆಯಲ್ಲಿ ಗೆದ್ದು ಬೀಗಿದ್ದಾರೆ. ಚಿಕ್ಕಬಳ್ಳಾಪುರ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ವಿರುದ್ಧ 95,863 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಸಂಸತ್ಗೆ ಕಾಗೇರಿ: ಸಂಸದ ಅನಂತ್ ಕುಮಾರ್ ಬದಲಾಗಿ ಪಕ್ಷದಿಂದ ಟಿಕೆಟ್ ಪಡೆದಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ವಿರುದ್ಧ 7,76,968 ಮತಗಳಿಂದ ಗೆಲುವು ಸಾಧಿಸಿದ್ದಾರೆ.
ಮಾಜಿ ಉಪಮುಖ್ಯಮಂತ್ರಿಗೆ ಗೆಲುವು: ವಿಧಾನಸಭಾ ಚುನಾವಣೆಯಲ್ಲಿ ಮುಧೋಳ ಕ್ಷೇತ್ರದಲ್ಲಿ ಸೋಲು ಕಂಡಿದ್ದ ಅವರಿಗೆ, ಚಿತ್ರದುರ್ಗ ಮೀಸಲು ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದರು. ಗೋವಿಂದ ಕಾರಜೋಳ ಅವರು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರ ವಿರುದ್ಧ 42,046 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಮಲ್ಲೇಶ್ ಬಾಬು ಗೆಲುವು: ಕೋಲಾರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿ ಮಲ್ಲೇಶ್ ಬಾಬು, ಕಾಂಗ್ರೆಸ್ ಅಭ್ಯರ್ಥಿ ಗೌತಮ್ ವಿರುದ್ಧ ಗೆದ್ದು ಸಂಸತ್ ಪ್ರವೇಶಿಸಿದ್ದಾರೆ.
ಮೊದಲ ಬಾರಿ ಸಂಸತ್ ಪ್ರವೇಶಿಸುತ್ತಿರುವ ಖಂಡ್ರೆ ಪುತ್ರ: ಕಾಂಗ್ರೆಸ್ ಶಾಸಕ ಈಶ್ವರ್ ಖಂಡ್ರೆ ಅವರ ಮಗ ಸಾಗರ್ ಈಶ್ವರ್ ಖಂಡ್ರೆ 26ನೇ ವಯಸ್ಸಿಗೆ ಲೋಕಸಭಾ ಟಿಕೆಟ್ ಗಿಟ್ಟಿಸುವ ಮೂಲಕ ಸುದ್ದಿಯಾಗಿದ್ದರು. ಇದೀಗ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರನ್ನು 1, 26,308 ಮತಗಳಿಂದ ಮಣಿಸುವ ಮೂಲಕ ಸಂಸತ್ ಪ್ರವೇಶಿಸುತ್ತಿದ್ದಾರೆ.
ರಾಷ್ಟ್ರ ರಾಜಕಾರಣಕ್ಕೆ ಜಾರಕಿಹೊಳಿ ಕುಡಿ: ರಾಜ್ಯ ರಾಜಕಾರಣದಲ್ಲಿ ಈಗಾಗಲೇ ಹಿಡಿತ ಸಾಧಿಸಿರುವ ಜಾರಕಿಹೊಳಿ ಕುಟುಂಬದ ಕುಡಿಯಾಗಿರುವ ಪ್ರಿಯಾಂಕಾ ಜಾರಕಿಹೊಳಿ ಮೊದಲ ಚುನಾವಣೆಯಲ್ಲೇ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಬಿಜೆಪಿ ಹಾಲಿ ಸಂಸದ ಅಣ್ಣ ಸಾಹೇಬ್ ಜೊಲ್ಲೆ 94 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಮಹದೇವಪ್ಪ ಮಗನಿಗೆ ಗೆಲುವು: ಕಾಂಗ್ರೆಸ್ ನಾಯಕ ಮಹದೇವಪ್ಪ ಮಗ ಸುನೀಲ್ ಬೋಸ್ ಕೂಡ ಬಿಜೆಪಿ ಅಭ್ಯರ್ಥಿ ಎಸ್ ಬಾಲರಾಜು ವಿರುದ್ಧ ಒಂದು ಲಕ್ಷ ಮತದ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಚಾಮರಾಜನಗರ ಮೀಸಲು ಕ್ಷೇತ್ರದಲ್ಲಿ ಮೊದಲ ಚುನಾವಣೆಯಲ್ಲಿಯೇ ಗೆಲುವು ದಾಖಲಿಸಿದ್ದಾರೆ.
ಪ್ರಜ್ವಲ್ ವಿರುದ್ಧ ಗೆದ್ದ ಶ್ರೇಯಸ್: ದೇವೇಗೌಡ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ವಿರುದ್ಧ ಕಾಂಗ್ರೆಸ್ನ ಜಿ ಪುಟ್ಟಸ್ವಾಮಿ ಅವರ ಮೊಮ್ಮಗ ಶ್ರೇಯಸ್ ಪಟೇಲ್ ಗೆಲುವು ಸಾಧಿಸಿದ್ದಾರೆ.
ಖರ್ಗೆ ಅಳಿಯ ಸಂಸತ್ಗೆ: ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧಾಕೃಷ್ಣ ದೊಡ್ಡಮನಿ ಕೂಡ ಮೊದಲ ಚುನಾವಣೆಯಲ್ಲೇ ಜಯಭೇರಿ ಭಾರಿಸಿದ್ದಾರೆ. ಖರ್ಗೆ ಸೋಲಿಗೆ ಕಾರಣವಾಗಿದ್ದ ಉಮೇಶ್ ಜಾಧವ್ ಅವರನ್ನು ಮಣಿಸಿದ್ದಾರೆ.
ಇದನ್ನೂ ಓದಿ: ವಿಧಾನಸಭೆ ಚುನಾವಣೆ ಸೋಲಿನ ಕಹಿ ಮರೆಸಿದ ಸಂಸತ್ ಚುನಾವಣೆ ಗೆಲುವು