ಬೆಂಗಳೂರು: ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿರುವ ಕರ್ನಾಟಕ ರಾಜ್ಯವು ರಾಷ್ಟ್ರದಲ್ಲೇ ಅತಿ ಹೆಚ್ಚು ಸಾರ್ವಜನಿಕ ಎಲೆಕ್ಟ್ರಿಕ್ ವೆಹಿಕಲ್ (ಇವಿ)ಗಳ ಚಾರ್ಜಿಂಗ್ ಸ್ಟೇಷನ್‌ಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೇಂದ್ರ ಇಂಧನ ಸಚಿವಾಲಯದ ಬ್ಯೂರೋ ಆಫ್ ಎನರ್ಜಿ ಎಫೀಷಿಯನ್ಸಿ ಬಿಡುಗಡೆ ಮಾಡಿರುವ ವರದಿ ಪ್ರಕಾರ, ರಾಜ್ಯದಲ್ಲಿ ಒಟ್ಟು 5,765 ಇವಿ ಚಾರ್ಜಿಂಗ್ ಸ್ಟೇಷನ್‌ಗಳಿವೆ. ಇದು ದೇಶದಲ್ಲಿಯೇ ಅತ್ಯಧಿಕವಾಗಿದೆ. ದೇಶದಲ್ಲಿಯೇ ಪ್ರಥಮ ಬಾರಿಗೆ ಇವಿ ನೀತಿಯನ್ನು ಪರಿಚಯಿಸಿದ ಕೀರ್ತಿ ಕರ್ನಾಟಕದ್ದಾಗಿದೆ. ಎಲೆಕ್ಟ್ರಿಕ್ ವಾಹನ ವಲಯದಲ್ಲಿ ಒಂದು ಹೆಜ್ಜೆ ಸದಾ ಮುಂದಿರುವ ಕರ್ನಾಟಕ, 2017ರಲ್ಲಿ 2021ರಲ್ಲಿ ಹೆಚ್ಚುವರಿ ಪ್ರೋತ್ಸಾಹದೊಂದಿಗೆ ಈ ನೀತಿಯನ್ನು ಪರಿಷ್ಕರಿಸಲಾಯಿತು. ಇದಲ್ಲದೇ, ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಗಣನೀಯವಾಗಿ ಹೆಚ್ಚಿಸುವ ಕಾರ್ಯತಂತ್ರದ ಕ್ರಮವಾಗಿ ಸರ್ಕಾರವು ರಾಜ್ಯಾದ್ಯಂತ ಮಾದರಿ ಇವಿ ನಗರಗಳನ್ನು ಅಭಿವೃದ್ಧಿಪಡಿಸಲು ಸಜ್ಜಾಗಿದೆ.
ವರದಿಯ ಪ್ರಕಾರ, ಇವಿ ಚಾರ್ಜಿಂಗ್ ಸ್ಟೇಷನ್ ವಿಚಾರದಲ್ಲಿ ಬೆಂಗಳೂರು ನಗರವು ಮುಂಚೂಣಿಯಲ್ಲಿದ್ದು, ನಗರ ಜಿಲ್ಲೆಯಲ್ಲಿ 4,462 ಇವಿ ಚಾರ್ಜಿಂಗ್ ಸ್ಟೇಷನ್‌ಗಳಿವೆ. ಇದು ರಾಜ್ಯದ ಒಟ್ಟಾರೆ ಇವಿ ಚಾರ್ಜಿಂಗ್ ಸ್ಟೇಷನ್‌ಗಳ ಪೈಕಿ ಶೇ. 85ರಷ್ಟು ಆಗಿದೆ. ಸುಸ್ಥಿರ ಮತ್ತು ಶುದ್ಧ ಇಂಧನ ಬಳಕೆ ವಿಚಾರದಲ್ಲಿ ರಾಜ್ಯ ಸರ್ಕಾರದ ಬದ್ಧತೆಗೆ ಇದು ಸಾಕ್ಷಿಯಾಗಿದೆ.
ಕೇಂದ್ರ ಇಂಧನ ಸಚಿವಾಲಯದ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ ವರದಿ ಹೇಳುವಂತೆ 5,765 ಇವಿ ಚಾರ್ಜಿಂಗ್ ಸ್ಟೇಷನ್‌ಗಳಿರುವ ಕರ್ನಾಟಕ ಮೊದಲ ಸ್ಥಾನದಲ್ಲಿದ್ದರೆ, 3,728 ಚಾರ್ಜಿಂಗ್ ಸ್ಟೇಷನ್ ಹೊಂದಿರುವ ಮಹಾರಾಷ್ಟ್ರ 2ನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶ 1,989 ಮತ್ತು ದಿಲ್ಲಿ 1,941 ಚಾರ್ಜಿಂಗ್ ಸ್ಟೇಷನ್ ಗಳೊಂದಿಗೆ ನಂತರದ ಸ್ಥಾನದಲ್ಲಿವೆ. ತಮಿಳುನಾಡಿನಲ್ಲಿ 1,413, ಕೇರಳ 1,212 ಮತ್ತು ರಾಜಸ್ಥಾನ 1,129, ಗುಜರಾತ್ 992, ತೆಲಂಗಾಣ 956, ಪಶ್ಚಿಮ ಬಂಗಾಳ 763, ಹರಿಯಾಣ 709, ಮತ್ತು ಆಂಧ್ರಪ್ರದೇಶ 601 ಸ್ಟ್ರೇಷನ್‌ಗಳನ್ನು ಹೊಂದಿವೆ.
ಇವಿ ಚಾರ್ಜಿಂಗ್ ಸ್ಟೇಷನ್‌ಗಳಿಗೆ ವಿವಿಧ ಮೂಲಗಳಿಂದ ಆರ್ಥಿಕ ಬೆಂಬಲ ದೊರೆತಿದ್ದು, ಇವುಗಳಲ್ಲಿ ಕೇಂದ್ರ ಸರ್ಕಾರದ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವೆಹಿಕಲ್ಸ್ (FAME) ಯೋಜನೆ, ಬೆಸ್ಕಾಂನ ಹೂಡಿಕೆ, ರಾಜ್ಯ ಸಾರಿಗೆ ಇಲಾಖೆಯಿಂದ ಹಸಿರು ಸೆಸ್ ನಿಧಿ ಮತ್ತು ಸಾರ್ವಜನಿಕ - ಖಾಸಗಿ ಸಹಭಾಗಿತ್ವದ ಹೂಡಿಕೆಗಳು ಸೇರಿವೆ.
ಎಲೆಕ್ಟ್ರಿಕ್ ವಾಹನ ಪರಿಸರ ವ್ಯವಸ್ಥೆಗೆ ಒತ್ತು ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ 2024ರ ರಾಜ್ಯ ಬಜೆಟ್‌ನಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ರಾಜ್ಯಾದ್ಯಂತ ಸುಮಾರು 2,500 ಹೊಸ ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಪ್ರಸ್ತಾವನೆ ಇದೆ. ಇದಲ್ಲದೇ, ವಿದ್ಯುತ್ ಸರಬರಾಜು ಕಂಪನಿಗಳ ಸಹಯೋಗದೊಂದಿಗೆ 100 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರವು 35 ಕೋಟಿ ರೂ. ಹೂಡಿಕೆ ಮಾಡಲು ಯೋಜಿಸಿದೆ.
ಈ ಬಗ್ಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಪ್ರತಿಕ್ರಿಯಿಸಿ, "ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ ಅಂಕಿ ಅಂಶಗಳ ಪ್ರಕಾರ, 5,765 ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳಿರುವ ಕರ್ನಾಟಕವು ರಾಷ್ಟ್ರದಲ್ಲಿ ಮೊದಲ ಸ್ಥಾನದಲ್ಲಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಇವಿ ವಾಹನಗಳ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯದ ಬದ್ಧತೆಯನ್ನು ಈ ಸಾಧನೆ ಎತ್ತಿ ತೋರಿಸುತ್ತದೆ. ಜತೆಗೆ ರಾಜ್ಯದ ಇವಿ ನೀತಿಯು ಇವಿ ಬಳಕೆದಾರರು, ವಾಹನ ಉತ್ಪಾದಕರಿಗೆ ಪೂರಕವಾಗಿದೆ" ಎಂದು ತಿಳಿಸಿದ್ದಾರೆ.
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ, "ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ದೂರದೃಷ್ಟಿಯ ಫಲವಾಗಿ, ಪರಿಸರ ಸ್ನೇಹಿ ಎಲೆಕ್ಟ್ರಿಕಲ್ ವಾಹನಗಳಿಗೆ ಚಾರ್ಚಿಂಗ್ ಸೌಲಭ್ಯ ಕಲ್ಪಿಸುವಲ್ಲಿ ಕರ್ನಾಟಕ ದೇಶದಲ್ಲೇ ಅಗ್ರ ಸ್ಥಾನದಲ್ಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತವು ರಾಜ್ಯದಲ್ಲಿ ಇವಿ ಚಾರ್ಜಿಂಗ್ ಮೂಲಸೌಕರ್ಯವನ್ನು ಕಲ್ಪಿಸುವ ನೋಡೆಲ್ ಏಜೆನ್ಸಿಯಾಗಿದೆ. ಇವಿ ಚಾರ್ಜಿಂಗ್ ಸ್ಟೇಷನ್‌ಗಳ ಜಾಲ ವಿಸ್ತರಣೆ ಮತ್ತು ಉತ್ತಮ ನಿರ್ವಹಣೆಗೆ ಶ್ರಮಿಸುತ್ತಿರುವ ಬೆಸ್ಕಾಂನ ಜವಾಬ್ದಾರಿಯನ್ನು ಈ ವರದಿ ಮತ್ತಷ್ಟು ಹೆಚ್ಚಿಸಿದೆ" ಎಂದು ಹೇಳಿದ್ದಾರೆ
ಇದನ್ನೂ ಓದಿ: 'ನಮ್ಮ ಮೆಟ್ರೋ' ಹಸಿರು ಮಾರ್ಗದ ರೈಲು ಸೇವೆಯಲ್ಲಿ ವ್ಯತ್ಯಯ - Namma Metro Green Line