ಬೆಂಗಳೂರು: ಸರ್ಕಾರದ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು, ನಿಗಮಗಳು, ಮಂಡಳಿಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಹಾಗೂ ಮತ್ತಿತರ ಸಂಸ್ಥೆಗಳು, ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ)ನಲ್ಲಿ ಹೊಂದಿರುವ ಖಾತೆಗಳನ್ನು ರದ್ದು ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಠೇವಣಿಗಳನ್ನು ತಕ್ಷಣದಿಂದ ಹಿಂದಕ್ಕೆ ಪಡೆಯುವುದು ಹಾಗೂ ಇನ್ನು ಮುಂದೆ ಈ ಬ್ಯಾಂಕುಗಳಲ್ಲಿ ಯಾವುದೇ ರೀತಿಯ ಠೇವಣಿಗಳ ಹೂಡಿಕೆಗಳನ್ನು ಮಾಡದಿರುವ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆಯಂತೆ ಆರ್ಥಿಕ ಇಲಾಖೆ ಕಾರ್ಯದರ್ಶಿ ಡಾ.ಪಿ.ಸಿ.ಜಾಫರ್ (ಅಯವ್ಯಯ ಮತ್ತು ಸಂಪನ್ಮೂಲ) ಸುತ್ತೋಲೆ ಹೊರಡಿಸಿದ್ದಾರೆ. ಎಲ್ಲ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳಿಗೆ ಕ್ರಮವಹಿಸಲು ತಿಳಿಸಿದ್ದಾರೆ.
![Karnataka govt orders state departments to close accounts in State Bank of India, Punjab National Bank](https://etvbharatimages.akamaized.net/etvbharat/prod-images/14-08-2024/kn-bng-10-decision-to-cancel-government-accounts-in-sbi-punjab-national-banks-script-7208083_14082024210744_1408f_1723649864_1023.jpg)
ಗಡುವು: ಎರಡೂ ಬ್ಯಾಂಕ್‌ಗಳ ಶಾಖೆಗಳಲ್ಲಿನ ವಾಪಸ್ ಪಡೆದ ಠೇವಣಿಗಳು, ಖಾತೆ ಮುಕ್ತಾಯಗೊಳಿಸಿದ ವಿವರಗಳ ದೃಢೀಕರಣ ಸಹಿತ ನಿಗದಿತ ಅನುಬಂಧದಲ್ಲಿ ಭರ್ತಿ ಮಾಡಿ ಸೆ.20ರೊಳಗೆ ಆರ್ಥಿಕ ಇಲಾಖೆಗೆ ಸಲ್ಲಿಸಬೇಕು ಎಂಬ ಬಗ್ಗೆ ಗಡುವು ವಿಧಿಸಲಾಗಿದೆ.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಪಂಜಾಬ್ ನ್ಯಾಷನಲ್ ಬ್ಯಾಂಕ್, ರಾಜಾಜಿನಗರ ಶಾಖೆಯಲ್ಲಿ ಒಂದು ವರ್ಷ ಅವಧಿಯ ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಮಾಡಲು ದಿನಾಂಕ: 14.09.20211 ರಲ್ಲಿ ಚೆಕ್ ಮೂಲಕ ರೂ. 25 ಕೋಟೆ ರೂ.ಗಳನ್ನು ಪಾವತಿಸಿತು. ಇದಕ್ಕೆ ಪ್ರತಿಯಾಗಿ ಇದೇ ಬ್ಯಾಂಕಿನ ಮತ್ತೊಂದು ಶಾಖೆಯಾದ ಶಂಕ್ರೀ ಬ್ಯಾಂಕ್, ಸೇಲಂನಿಂದ 12 ಕೋಟೆ ರೂ.ಗಳ ಒಂದು ನಿಶ್ಚಿತ ಠೇವಣಿಯ ರಸೀದಿಯನ್ನು ಮತ್ತು 13 ಕೋಟಿ ರೂ.ಗಳ ಇನ್ನೊಂದು ನಿಶ್ಚಿತ ಠೇವಣಿಯ ರಸೀದಿಯನ್ನು ನೀಡಿದರು. ಅವಧಿ ಮುಕ್ತಾಯದ ನಂತರ 13 ಕೋಟಿ ರೂ.ಗಳ ಠೇವಣಿಯು ನಗದೀಕರಣವಾಯಿತು. ಆದರೆ, ಎರಡನೇ ಠೇವಣಿ ಖಾತೆಗೆ ಸಂಬಂಧಪಟ್ಟ ಹಾಗೆ ಬ್ಯಾಂಕ್ ಅಧಿಕಾರಿಗಳಿಂದ ನಡೆದಿದೆ ಎನ್ನಲಾದ ವಂಚನೆ ಪ್ರಕರಣದ ಕಾರಣದಿಂದಾಗಿ ಈ ಹಣವನ್ನು ಬ್ಯಾಂಕ್ ಇದುವರೆಗೂ ಮರುಪಾವತಿಸಿರುವುದಿಲ್ಲ. ಈ ವಿಷಯದ ಬಗ್ಗೆ ಬ್ಯಾಂಕ್ ಅಧಿಕಾರಿಗಳ ಜೊತೆ ಪತ್ರ ವ್ಯವಹಾರ ಮತ್ತು ಸಭೆಗಳನ್ನು ನಡೆಸಿದರೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಈ ಪ್ರಕರಣವು ನ್ಯಾಯಾಲಯಗಳಲ್ಲಿ 10 ವರ್ಷಗಳಿಂದಲೂ ವಿಚಾರಣೆ ಹಂತದಲ್ಲಿದೆ.
![Karnataka govt orders state departments to close accounts in State Bank of India, Punjab National Bank](https://etvbharatimages.akamaized.net/etvbharat/prod-images/14-08-2024/kn-bng-10-decision-to-cancel-government-accounts-in-sbi-punjab-national-banks-script-7208083_14082024210744_1408f_1723649864_378.jpg)
ಇದೇ ರೀತಿಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ಆಗಿನ ಸ್ಪೇಟ್ ಬ್ಯಾಂಕ್ ಆಫ್ ಮೈಸೂರು, ಅವೆನ್ಯೂ ರಸ್ತೆ, ಬೆಂಗಳೂರು ಇದರಲ್ಲಿ ಆಗಸ್ಟ್ 2013ರಲ್ಲಿ 10 ಕೋಟಿ ರೂ.ಗಳನ್ನು ನಿಶ್ಚಿತ ಠೇವಣಿಯಲ್ಲಿ ಹೂಡಿದ್ದರು. ಅವಧಿ ಮುಕ್ತಾಯವಾಗುವುದಕ್ಕಿಂತ ಮೊದಲೇ ಬ್ಯಾಂಕ್ ಅಧಿಕಾರಿಗಳಿಂದ ಸದರಿ ಠೇವಣಿಗೆ ಸಂಬಂಧಪಟ್ಟ ಹಣವನ್ನು ನಕಲಿ ದಾಖಲೆಗಳ ಆಧಾರದ ಮೇಲೆ ಒಂದು ಖಾಸಗೀ ಕಂಪನಿಯ ಸಾಲಕ್ಕೆ ಹೊಂದಾಣಿಕೆ ಮಾಡಲಾಯಿತು. ಈ ವಂಚನೆಯ ಪ್ರಕರಣದಲ್ಲೂ ಬ್ಯಾಂಕಿನವರ ಜೊತೆ ಪತ್ರ ವ್ಯವಹಾರ ಮತ್ತು ಸಭೆಗಳನ್ನು ನಡೆಸಿದರೂ ಸಹಾ ಹಣವನ್ನು ಮರುಪಾವತಿಸಲು ಬ್ಯಾಂಕ್ನವರು ಒಪ್ಪಲಿಲ್ಲ. ಈ ಪ್ರಕರಣವೂ ಸಹ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.
ಮಹಾಲೆಕ್ಕ ಪರಿಶೋಧಕರ ವರದಿಯಲ್ಲಿ ತೀವ್ರವಾದ ಆಕ್ಷೇಪಣೆಗಳು, ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯಲ್ಲಿ ಅನೇಕ ಬಾರಿ ಚರ್ಚೆಯಾಗಿದೆ. ಠೇವಣಿ ವಾಪಸ್, ಹೂಡಿಕೆ ನಿರ್ಬಂಧ ಮತ್ತು ಖಾತೆಗಳ ಮುಕ್ತಾಯ ಕುರಿತು ಸಮಿತಿಯ ಸಭಾ ನಡವಳಿಗಳಲ್ಲಿ ದಾಖಲಾಗಿವೆ. ಈ ಕಾರಣಕ್ಕೆ ರಾಜ್ಯ ಸರ್ಕಾರ ಇಂತಹ ನಿರ್ಧಾರ ಕೈಗೊಂಡಿದೆ.
ಈ ಹಿನ್ನೆಲೆಯಲ್ಲಿ, ಭಾರತೀಯ ಸ್ಪೇಟ್ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಎಲ್ಲಾ ಶಾಖೆಗಳಲ್ಲಿ ರಾಜ್ಯ ಸರ್ಕಾರದ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು, ನಿಗಮಗಳು, ಮಂಡಳಿಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಹಾಗೂ ಮತ್ತಿತರ ಸಂಸ್ಥೆಗಳು ಮಾಡಿರುವ ಎಲ್ಲಾ ರೀತಿಯ ಠೇವಣಿಗಳನ್ನು/ಹೂಡಿಕೆಗಳನ್ನು ತಕ್ಷಣದಿಂದ ಹಿಂದಕ್ಕೆ ಪಡೆಯುವುದು ಹಾಗೂ ಇನ್ನು ಮುಂದೆ ಸದರಿ ಬ್ಯಾಂಕುಗಳಲ್ಲಿ ಯಾವುದೇ ರೀತಿಯ ಠೇವಣಿಗಳನ್ನು/ಹೂಡಿಕೆಗಳನ್ನು ಮಾಡಬಾರದು ಎಂದು ಈ ಸುತ್ತೋಲೆಯ ಮೂಲಕ ತಿಳಿಸಲಾಗಿದೆ.
ತಮ್ಮ ಇಲಾಖೆಯ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಕಚೇರಿಗಳು, ಸಾರ್ವಜನಿಕ ಉದ್ದಿಮೆಗಳು, ನಿಗಮಗಳು, ಮಂಡಳಿಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಹಾಗೂ ಮತ್ತಿತರ ಸಂಸ್ಥೆಗಳು - ಇವುಗಳಿಗೆ ಸಂಬಂಧಿಸಿದ. ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗಳ ಎಲ್ಲಾ ಶಾಖೆಗಳಲ್ಲಿ ಹೂಡಿರುವ ಠೇವಣಿಗಳನ್ನು ಮತ್ತು ಇತರೆ ಎಲ್ಲಾ ಖಾತೆಗಳನ್ನು ಮುಕ್ತಾಯಗೊಳಿಸಿ, ಈ ಬಗ್ಗೆ ದೃಢೀಕರಣವನ್ನು ಮತ್ತು ಠೇವಣಿಗಳ ಹಾಗೂ ಖಾತೆಗಳ ವಿವರಗಳನ್ನು ಲಗತ್ತಿಸಿದ ನಮೂನೆಯಲ್ಲಿ ದಿನಾಂಕ: 20.09.2024 ರೊಳಗೆ ಸರ್ಕಾರದ ಉಪ ಕಾರ್ಯದರ್ಶಿ, ಆಯವ್ಯಯ ಮತ್ತು ಸಂಪನ್ಮೂಲ ಶಾಖೆ, ಆರ್ಥಿಕ ಇಲಾಖೆಗೆ ಸಲ್ಲಿಸಲು ಕೋರಲಾಗಿದೆ.
ಇದನ್ನೂ ಓದಿ: 72 ಲಕ್ಷ ಹಣ ದುರ್ಬಳಕೆ: ಇನ್ಸ್ಪೆಕ್ಟರ್ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಿರಾಕರಣೆ - High Court