ಮಂಡ್ಯ: "ಅದು ನಮ್ಮದೇ ಸ್ವತ್ತು. ನ್ಯಾಯಯುತವಾಗಿ ಹಣ ಕಟ್ಟಿಕೊಂಡು ಬಂದಿದ್ದೇವೆ. ಕುಮಾರಣ್ಣಂಗೆ ಬರಬೇಕಾದಂಥದ್ದು. ಆದರೂ ಬೇಕಾದರೆ ಸಾರ್ವಜನಿಕರಿಗೆ ಬರೆದು ಕೊಡುತ್ತೇವೆ" ಎಂದು ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮುಡಾ ಹಗರಣದಲ್ಲಿ ದಾಖಲೆ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿದರು.
ಮುಡಾ ಹಾಗೂ ವಾಲ್ಮೀಕಿ ಹಗರಣ ಕುರಿತು ಜೆಡಿಎಸ್-ಬಿಜೆಪಿ ಪಾದಯಾತ್ರೆ ಹೋರಾಟದ ಬಗ್ಗೆ ಶನಿವಾರ ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಪೂರ್ವಭಾವಿ ಸಭೆ ನಡೆಸಿದರು. ಈ ವೇಳೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು.
"ಈ ಬಗ್ಗೆ ಈಗಾಗಲೇ ದೆಹಲಿಯಲ್ಲಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಅವರು ಸಿಐಟಿಬಿಯಲ್ಲಿ ಸೈಟ್ ತೆಗೆದುಕೊಂಡಿದ್ದರು. ಅದು 1984ರಲ್ಲಿ ಇಂಡಸ್ಟ್ರಿಯಲ್ ಸೈಟ್ ಆಗಿ ಹಂಚಿಕೆ ಆಗಿತ್ತು. ಆ ಸಮಯದಲ್ಲಿ ಕುಮಾರಸ್ವಾಮಿ ರಾಜಕಾರಣದಲ್ಲಿ ಇರಲಿಲ್ಲ. ಮೈಸೂರಿನಲ್ಲಿ ಒಂದು ಆಫೀಸ್ ಇಟ್ಟುಕೊಂಡಿದ್ದರು. ಸಿನಿಮಾ ಹಂಚಿಕೆದಾರರಾಗಿ ಅದರಿಂದ ಬಂದ ಹಣವನ್ನು ಸಾಮಾನ್ಯ ಪ್ರಜೆಯಾಗಿ ಕಟ್ಟಿ ಅಂದು ಅರ್ಜಿ ಹಾಕಿದ್ದರು" ಎಂದರು.
ನ್ಯಾಯಯುತವಾಗಿ ದುಡ್ಡು ಕಟ್ಟಿದ್ದೇವೆ: ಮುಂದುವರೆದು ಮಾತನಾಡಿ, "ಅರ್ಜಿ ಹಾಕಿದಾಗ ಸೈಟ್ ಹಂಚಿಕೆ ಆಗಿದೆ. ಆದರೆ ಇವತ್ತು ಯಾರೋ ಇಂಡಸ್ಟ್ರಿ ಕಟ್ಟಿಕೊಂಡಿದ್ದಾರೆ. ಕುಮಾರಸ್ವಾಮಿ ಇದನ್ನು ನೋಡಿಕೊಂಡಿಲ್ಲ, ಇದು ನಡೆದಿರುವ ಘಟನೆ. ಇದಕ್ಕೂ ಮುಡಾಗೂ ಸಂಬಂಧವಿಲ್ಲ. 75/280 ಅಂದ್ರೆ 21 ಸಾವಿರ ಅಡಿ ನಿವೇಶನ ಹಂಚಿಕೆ ಆಗಿತ್ತು. ಆದರೂ ಇವತ್ತಿನವರೆಗೂ ಕುಮಾರಣ್ಣನವರ ಕೈಗೆ ಬಂದಿಲ್ಲ. ಮುಡಾದಲ್ಲಿ ಸಿದ್ದರಾಮಯ್ಯನವರು 14 ಸೈಟ್ ಕೊಡುವುದಿಲ್ಲ 62 ಕೋಟಿ ರೂ ಕೊಡಿ ಅಂತಿದಾರಲ್ಲ, ನಾವು ಹಾಗೆ ಕೇಳುವುದಿಲ್ಲ. ನಮ್ಮದೇ ಸ್ವತ್ತು ಅದು. ನ್ಯಾಯಯುತವಾಗಿ ದುಡ್ಡು ಕಟ್ಟಿದ್ದೇವೆ. ಕುಮಾರಣ್ಣಗೆ ಬರಬೇಕು. ಆದರೂ ಬೇಕಿದ್ದರೆ ಸಾರ್ವಜನಿಕರಿಗೆ ಬರೆದುಕೊಟ್ಟು ಬಿಡುತ್ತೇವೆ" ಎಂದು ಹೇಳಿದರು.
ಪಕ್ಷ ಸಂಘಟನೆ ಬಗ್ಗೆ ಮಾತನಾಡುತ್ತಾ, "ಜಿಲ್ಲಾದ್ಯಂತ ಪ್ರವಾಸ ಮಾಡಿ ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದೇವೆ. ಚುನಾವಣೆ ಫಲಿತಾಂಶದ ಬಳಿಕ ಜೆಡಿಎಸ್ ಇರಲ್ಲ ಎಂದು ಕಾಂಗ್ರೆಸ್ ಹೇಳಿತ್ತು. ಆದರೆ ಕುಮಾರಣ್ಣ ಹೆಚ್ಚು ಅಂತರದಲ್ಲಿ ಗೆಲುವು ಸಾಧಿಸಿದರು. ನನ್ನ ಚುನಾವಣೆಯ ಸೋಲು ಮರೆಯಲು ಸಾಧ್ಯವಿಲ್ಲ. ಭಗವಂತನ ಆಶೀರ್ವಾದದಿಂದ ಕುಮಾರಣ್ಣ ಕೇಂದ್ರ ಸಚಿವರಾಗಿದ್ದಾರೆ. ಕುಮಾರಣ್ಣನವರಿಗೆ ಪ್ರಧಾನಿ ಮೋದಿ ಗೌರವ ಕೊಟ್ಟಿದ್ದಾರೆ. ಇನ್ನು ಕೆಲವೇ ದಿನದಲ್ಲಿ ತಂದೆ ರಾಜ್ಯಕ್ಕೆ ಬರುತ್ತಾರೆ. ಅವರ ಅನುಪಸ್ಥಿತಿಯಲ್ಲಿ ನಾನು ಜಿಲ್ಲೆಯಲ್ಲಿ ನಿಮ್ಮ ಜೊತೆ ಇರುತ್ತೇನೆ. ಎಂಪಿ ಕಚೇರಿಯಲ್ಲಿ ಕುಳಿತು ಸಾರ್ವಜನಿಕರ ಸಮಸ್ಯೆ ಕೇಳುತ್ತೇನೆ. ಸಾರ್ವಜನಿಕ ಸಮಸ್ಯೆ ಕೇಳಲು ಶಾಶ್ವತವಾಗಿ ಪಕ್ಷದ ಕಚೇರಿ ಆರಂಭವಾಗಲಿದ್ದು ಪಕ್ಷ ಕಟ್ಟುವ ಕೆಲಸ ಕೂಡಲೇ ಪ್ರಾರಂಭ ಮಾಡುತ್ತೇವೆ" ಎಂದು ತಿಳಿಸಿದರು.