ಬೆಳಗಾವಿ: ಸಾರ್ವಜನಿಕ ಸಭೆ ಉದ್ದೇಶಿಸಿ ಬೆಳಗಾವಿಯಲ್ಲಿ ಏಪ್ರಿಲ್ 28ರಂದು ಬೆಳಗ್ಗೆ 10 ಗಂಟೆಗೆ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಒಂದು ಗಂಟೆ ಮೊದಲೇ ಎಲ್ಲರೂ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಪ್ರತಿಯೊಬ್ಬರು ಆಗಮಿಸಿ ಮೋದಿ ಅವರಿಗೆ ಶಕ್ತಿ ತುಂಬಬೇಕು ಎಂದು ಬೆಳಗಾವಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಮನವಿ ಮಾಡಿದರು.
ನಗರದ ಯಡಿಯೂರಪ್ಪ ಮಾರ್ಗದಲ್ಲಿರುವ ಮಾಲಿನಿ ಸಿಟಿ ಮೈದಾನದಲ್ಲಿ ವೇದಿಕೆ ಸಿದ್ಧತೆ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹಸ್ರಾರು ಸಂಖ್ಯೆಯಲ್ಲಿ ಜನ ಆಗಮಿಸಲಿದ್ದಾರೆ. ಏ. 27ರಂದು ಬೆಳಗಾವಿ ಖಾಸಗಿ ಹೋಟೆಲ್ನಲ್ಲಿ ಪ್ರಧಾನಿ ಮೋದಿ ವಾಸ್ತವ್ಯ ಹೂಡಲಿದ್ದಾರೆ. ಅದೇ ರೀತಿ ಯಾವುದೇ ರೋಡ್ ಶೋ ಇಲ್ಲ. ರಾಜ್ಯ ನಾಯಕರು ಎಲ್ಲರೂ ಬರ್ತಾರೆ. ಸಹಸ್ರಾರು ಸಂಖ್ಯೆಯಲ್ಲಿ ಜನ ಬರುತ್ತಿದ್ದು, ಅಂದಾಜು ಲೆಕ್ಕ ಹಾಕಿಲ್ಲ. ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭೆ ಕ್ಷೇತ್ರಗಳ ಜನರನ್ನು ಉದ್ದೇಶಿಸಿ ಮೋದಿ ಪ್ರಚಾರ ನಡೆಸಲಿದ್ದಾರೆ. ಇಡೀ ಲೋಕಸಭಾ ಕ್ಷೇತ್ರದಿಂದ ಬರಬೇಕು ಎಂದು ಕರೆಕೊಟ್ಟಿದ್ದೇವೆ ಎಂದು ವಿವರಿಸಿದರು.
ಬೆಳಗ್ಗೆ 9 ಗಂಟೆಗೆ ಜನ ಬರ್ತಾರಾ ಇದು ಚಾಲೆಂಜ್ ಆಗುವುದಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಜಕೀಯದಲ್ಲಿ ಚಾಲೆಂಜ್ ಇದ್ದೇ ಇರುತ್ತೆ. ಆದರೆ ಎಲ್ಲರೂ ಬರ್ತಾರೆ. ಕೆಲಸ ಕಾರ್ಯಗಳನ್ನು ಬದಿಗೊತ್ತಿ ಜನ ಬರ್ತಾರೆ ಎಂದ ಶೆಟ್ಟರ್, ಈವರೆಗೆ ಸಭೆ ಮಾಡುವುದರ ಬಗ್ಗೆ ನಿರ್ಧಾರ ಆಗಿಲ್ಲ. ಮೋದಿಯವರು ಬಂದ ಮೇಲೆಯೇ ನಿರ್ಧಾರ ಆಗುತ್ತದೆ. ಇನ್ನು ನೇಹಾ ತಂದೆ ತಾಯಿಯನ್ನು ಸಭೆಗೆ ಕರೆಸುವ ಬಗ್ಗೆ ಸದ್ಯ ಚರ್ಚೆ ಆಗಿಲ್ಲ ಎಂದು ಮಾಧ್ಯಮಗಳಿಗೆ ಉತ್ತರಿಸಿದರು.
ಕಾಂಗ್ರೆಸ್ ಸ್ಪರ್ಧಿಸಿದ್ದೇ 230 ಕ್ಷೇತ್ರಗಳಲ್ಲಿ: ಕಾಂಗ್ರೆಸ್ ನವರಿಗೆ ಶೆಟ್ಟರ್ ವಿರುದ್ಧ ಮಾತನಾಡಲು ಯಾವುದೇ ವಿಷಯ ಇಲ್ಲ. ಇದು ಪಾರ್ಲಿಮೆಂಟ್ ಎಲೆಕ್ಷನ್, ಇದು ಎಂಎಲ್ ಎ, ನಗರಸಭೆ, ಪುರಸಭೆ, ಪಂಚಾಯಿತಿ ಚುನಾವಣೆ ಅಲ್ಲ. ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ನಿಂದ ಪ್ರಧಾನಿ ಅಭ್ಯರ್ಥಿ ಯಾರು ಎಂದು ಹೇಳಲಿ. ಕಾಂಗ್ರೆಸ್ ಚುನಾವಣೆಗೆ ಸ್ಪರ್ಧಿಸಿದ್ದೇ ಕೇವಲ 230 ಕ್ಷೇತ್ರಗಳಲ್ಲಿ. ಅದೇಗೆ ಅಧಿಕಾರಕ್ಕೆ ಬರುತ್ತೀರಿ ಎಂದು ಪ್ರಶ್ನಿಸಿದರು.
ನೇಹಾ ಪ್ರಕರಣದಲ್ಲಿ ಮುನವಳ್ಳಿಗೆ ಮತ್ತು ನೇಹಾ ಮನೆಗೂ ಭೇಟಿ ನೀಡಿದ್ದೇನೆ. ಸಿಎಂ ಹಾಗೂ ಗೃಹಸಚಿವರು ವೈಯಕ್ತಿಕ ವಿಚಾರ ಎಂದಿದ್ದಕ್ಕೆ ಕುಟುಂಬದ ಮರ್ಯಾದೆ ಕಳೆದರು ಎಂದು ನೇಹಾ ತಂದೆ ಸರಿಯಾಗಿ ಜಾಡಿಸಿದ್ದಾರೆ. ಅಲ್ಪಸಂಖ್ಯಾತರ ತುಷ್ಟೀಕರಣದಲ್ಲಿ ಸರ್ಕಾರ ತೊಡಗಿದೆ. ಕೂಡಲೇ ಅವರ ಮನೆಗೆ ಭೇಟಿ ನೀಡಿ, ಅವರಿಗೆ ಸಾಂತ್ವನ ಹೇಳಬೇಕಿತ್ತು. ಅದನ್ನು ಮಾಡದೇ ಈಗ ಮನೆಗೆ ಭೇಟಿ ನೀಡಿ ತಪ್ಪಾಯ್ತು ಎಂದು ಹೇಳುವುದು ಎಷ್ಟು ಸರಿ ಎಂದು ಶೆಟ್ಟರ್ ಪ್ರಶ್ನಿಸಿದರು.
ಬಿಜೆಪಿಯವರು ಸಾವಿನ ಮನೆಯಲ್ಲಿ ರಾಜಕೀಯ ಮಾಡ್ತಿದ್ದಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿ, ಮುಂಜಾನೆ, ಸಾಯಂಕಾಲ ಇವ್ರು ತಪ್ಪು ಮಾಡುವುದು. ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಾರೆ. ಈ ಬಗ್ಗೆ ರಾಜಕೀಯ ಬಿಟ್ಟು ಜನರು ಜಾಗೃತರಾಗಿದ್ದಾರೆ. ಮುನವಳ್ಳಿಯಲ್ಲಿ ಮೂರು ದಿನ ಎಲ್ಲರೂ ಕೂಡ ಅಂಗಡಿ ಮುಂಗಟ್ಟು ಬಂದ್ ಮಾಡಿ ಪ್ರತಿಭಟನೆ ನಡೆಸಿದರು ಎಂದು ತಿಳಿಸಿದರು.
ಅಲ್ಪಸಂಖ್ಯಾತರ ತುಷ್ಟೀಕರಣದಿಂದ ಅರಾಜಕತೆ ಸೃಷ್ಟಿ: ಬಿಜೆಪಿ ಯಾವ ಸಂದರ್ಭದಲ್ಲಿ ಯಾರಿಗೆ ಅನ್ಯಾಯ ಆಗಿದೆ. ಆಗ ಪ್ರತಿಭಟನೆ ಮಾಡುತ್ತಾ ಬಂದಿದೆ. ಇಂದು ಅಲ್ಪಸಂಖ್ಯಾತರ ತುಷ್ಟೀಕರಣದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು, ಆಡಳಿತ ಮತ್ತು ಕಾನೂನು ಸುವ್ಯವಸ್ಥೆ ಕುಸಿದುಬಿದ್ದಿದೆ. ಯಾರೂ ಭಯಪಡುವ ಸ್ಥಿತಿ ಇಲ್ಲ. ಹಾಗಾಗಿ, ಮುಸ್ಲಿಂರು ಎಲ್ಲರೂ ಕೆಟ್ಟವರು ಅಂತಾ ನಾವು ಹೇಳುವುದಿಲ್ಲ. ಯಾರು ಈ ರೀತಿ ರಾಕ್ಷಸಿ ಪ್ರವೃತ್ತಿ ಮೂಲಕ ನೇಹಾ ಕೊಂದು ಹಾಕಿದರಲ್ಲ. ಆ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದರೆ ನಿಮ್ಮ ಬದ್ಧತೆ ಗೊತ್ತಾಗುತ್ತದೆ. ಅದನ್ನು ಬಿಟ್ಟು ಬರೀ ಪ್ರತಿಭಟನೆ ಮಾಡಿದರೆ ನಡೆಯೋದಿಲ್ಲ ಎಂದು ಶೆಟ್ಟರ್ ಕಿಡಿಕಾರಿದರು.
ಸುರ್ಜೇವಾಲಾ ಆರೋಪಕ್ಕೆ ತಿರುಗೇಟು: ಮೊಟ್ಟೆಮಾರಿ ಕಟ್ಟಿದ ಹೋಟೆಲ್ನಲ್ಲಿ ಮೋದಿ ವಾಸ್ತವ್ಯ ಮಾಡ್ತಿದ್ದಾರೆ ಎಂಬ ಸುರ್ಜೇವಾಲಾ ಆರೋಪಕ್ಕೆ ತಿರುಗೇಟು ಕೊಟ್ಟ ಜಗದೀಶ ಶೆಟ್ಟರ್, ಅಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರೇ ಇದ್ದರು. ಆಗ ಅದರ ಬಗ್ಗೆ ಯಾಕೆ ಮಾತನಾಡಲಿಲ್ಲ. ವಿಧಾನಸಭೆಯಲ್ಲಿ ನಿಂತು ಭಾಷಣ ಮಾಡಬೇಕಿತ್ತು. ಅದನ್ನ ಯಾಕೆ ಮಾಡಲಿಲ್ಲ. ತನಿಖೆಯಾಗಿ ಕ್ಲಿಯರನ್ಸ್ ಸಿಕ್ಕಿದೆ. ಈಗ ನಿಮ್ಮದೇ ಸರ್ಕಾರ ಬಂದಿದೆ. ಅದರ ಬಗ್ಗೆ ಏನಾದರೂ ತನಿಖೆ ಮಾಡಿದ್ರಾ..? ಸುರ್ಜೇವಾಲಾ ಅವರು ಸುಮ್ಮನೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.
ಭಾಷೆ ನಮಗೆ ಸಮಸ್ಯೆ ಆಗಲ್ಲ. ದೇಶ ಒಂದೇ. ಆದರೆ, ಹಲವು ಭಾಷೆ, ವೈವಿಧ್ಯತೆ ಹೊಂದಿದೆ ಎಂದ ಜಗದೀಶ ಶೆಟ್ಟರ್ ಎಂಇಎಸ್ ಸ್ಪರ್ಧೆಯಿಂದ ಮತ ವಿಭಜನೆ ಆತಂಕ ಇದೆಯಾ ಎಂಬ ಪ್ರಶ್ನೆಗೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ರಾಷ್ಟ್ರೀಯ ವಿಚಾರಗಳಿಗೆ ಜನ ಮಣೆ ಹಾಕ್ತಾರೆ ಎಂದರು.
ಮಾಧ್ಯಮಗೋಷ್ಟಿಯಲ್ಲಿ ಸಂಸದೆ ಮಂಗಳಾ ಅಂಗಡಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಅನಿಲ್ ಬೆನಕೆ, ಎಂ.ಬಿ. ಜೀರಲಿ, ಬೆಳಗಾವಿ ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಸೇರಿ ಮತ್ತಿತರರು ಹಾಜರಿದ್ದರು.