ರಾಮನಗರ: ಚನ್ನಪಟ್ಟಣದಲ್ಲಿ ಆಯೋಜಿಸಿದ್ದ 78ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದ ವೇದಿಕೆ ಮೇಲೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಒಟ್ಟಿಗೆ ವೇದಿಕೆಯಲ್ಲಿ ಕಾಣಿಸಿಕೊಂಡರು. ರಾಜಕೀಯ ಬದ್ಧ ವೈರಿಗಳಾದ ಇಬ್ಬರು ಪರಸ್ಪರ ಕೈ ಮುಗಿದು ನಮಸ್ಕರಿಸಿದರು.
ವಿಶೇಷವೆಂದರೆ ಭಾಷಣದ ವೇಳೆ, "6 ವರ್ಷಗಳ ಕಾಲ ಶಾಸಕರಾಗಿದ್ದರೂ ಒಂದು ಬಾರಿಯೂ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ" ಎಂದು ಡಿ.ಕೆ. ಶಿವಕುಮಾರ್ ಹಾಗೂ ಸಿ.ಪಿ. ಯೋಗೇಶ್ವರ್ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಡಿ.ಕೆ. ಶಿವಕುಮಾರ್ ಮಾತನಾಡಿ, "ನಮ್ಮ ಸರ್ಕಾರ ಜನತೆಯ ಮನೆ ಬಾಗಿಲಿಗೆ ಬಂದಿದೆ. ನಿಮ್ಮ ಸಮಸ್ಯೆ ಆಲಿಸಲು ಬಂದಿದ್ದೇನೆ. ಕಳೆದ ಒಂದು, ಒಂದೂವರೆ ತಿಂಗಳಿಂದ ಸಾವಿರಾರು ಜನರ ಸಮಸ್ಯೆ ಆಲಿಸಿದ್ದೇನೆ. ಅನೇಕ ಸಮಸ್ಯೆ ಬಗೆಹರಿಸಲು ಯತ್ನಿಸಿದ್ದೇನೆ. ನಾನು ರಾಜಕಾರಣ ಮಾಡಲು ಬಂದಿಲ್ಲ. ಸ್ವಾತಂತ್ರ್ಯೋತ್ಸವದ ಬಳಿಕ ತಾಲೂಕಿನ ಭವಿಷ್ಯ ಉಜ್ವಲವಾಗಿದೆ. ನಡುವೆಯೇ ಕ್ಷೇತ್ರವನ್ನು ಬಿಟ್ಟು ಹೋದರೆ ಜನರಿಗೆ ಅವಮಾನ ಮಾಡಿದಂತಾಗುತ್ತದೆ. ನಮ್ಮ ಜಿಲ್ಲೆಗೆ ಬಂದು ಧ್ವಜಾರೋಹಣ ಮಾಡಲು ಸರ್ಕಾರದ ವತಿಯಿಂದ ನನಗೆ ಅವಕಾಶ ಸಿಕ್ಕಿರುವುದು ಬಹಳ ಸಂತಸದ ವಿಚಾರ. ಇದರ ಬಗ್ಗೆ ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ" ಎಂದು ಪರೋಕ್ಷವಾಗಿ ಹೆಚ್ಡಿಕೆ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಧ್ವಜಾರೋಹಣದ ಬಳಿಕ ಡಿ ಕೆ ಶಿವಕುಮಾರ್ ವಿವಿಧ ಕವಾಯತುಗಳಿಂದ ಗೌರವ ವಂದನೆ ಸ್ವೀಕರಿಸಿದರು.
ಇದನ್ನೂ ಓದಿ: ಅಂದು ಬ್ರಿಟಿಷರ ಪರ ನಿಂತವರನ್ನು ತಿರಸ್ಕಾರ ಮಾಡಬೇಕಿದೆ: ಡಿಸಿಎಂ ಡಿ.ಕೆ.ಶಿವಕುಮಾರ್ ಕರೆ - 78th Independence Day