ಬೆಳಗಾವಿ: ಕಳೆದ ಲೋಕಸಭೆ ಚುನಾವಣೆಗಿಂತ ಈ ಬಾರಿ ಬೆಳಗಾವಿ ಜಿಲ್ಲೆಯಲ್ಲಿ ಉತ್ತಮ ಮತದಾನ ದಾಖಲಾಗಿದ್ದು, ಪ್ರಜಾಪ್ರಭುತ್ವದ ಹಬ್ಬದಲ್ಲಿ ಈ ಸಲ ಜನರ ಉತ್ಸಾಹ ಕಂಡು ಬಂತು. ಮೂರು ಲೋಕಸಭಾ ಮತ ಕ್ಷೇತ್ರಗಳ ವ್ಯಾಪ್ತಿಯನ್ನು ಒಳಗೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟಾರೆ ಶೇ.74.87 ರಷ್ಟು ಮತದಾನವಾಗಿದೆ.

01- ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಶೇ.78.51 ಮತ್ತು 02-ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಶೇ.71.38 ರಷ್ಟು ಮತದಾನವಾಗಿದೆ. ಅದೇ ರೀತಿ ಕೆನರಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಬೆಳಗಾವಿ ಜಿಲ್ಲೆಯ ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇ.73.87 ಮತ್ತು ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ. 76.25 ರಷ್ಟು ಮತದಾನವಾಗಿದೆ.

ಹೌದು, ರಣ ರಣ ಬಿಸಿಲಿನಲ್ಲೂ ಇಂದು ನಡೆದ ಚುನಾವಣೆಯಲ್ಲಿ ಬೆಳಗ್ಗೆಯಿಂದಲೂ ಮತಗಟ್ಟೆಗಳಲ್ಲಿ ಜನರು ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಿನ ಮತದಾನವಾಗಿದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ 2019 ರಲ್ಲಿ ಶೇ.75.52 ರಷ್ಟು ಮತದಾನವಾಗಿದ್ದರೆ, 2024 ರಲ್ಲಿ ಶೇ.78.51 ರಷ್ಟು ಮತದಾನವಾಗುವ ಮೂಲಕ ಶೇ.3ರಷ್ಟು ಹೆಚ್ಚಳವಾಗಿದೆ. ಅದೇ ರೀತಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 2019ರ ಚುನಾವಣೆಯಲ್ಲಿ ಶೇ. 67.70 ರಷ್ಟು ಮತದಾನವಾಗಿತ್ತು. ಈ ಬಾರಿ 2024ರಲ್ಲಿ ಶೇ.71.38 ರಷ್ಟು ಮತದಾನವಾಗುವ ಮೂಲಕ ಪ್ರತಿಶತ 4 ರಷ್ಟು ಹೆಚ್ಚಳವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಬೆಳಗಾವಿ ಲೋಕಸಭೆ ಕ್ಷೇತ್ರದ ವಿಧಾನಸಭಾ ಕ್ಷೇತ್ರವಾರು ಮತದಾನ ವಿವರ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶೇ.76.87, ಸವದತ್ತಿ ಯಲ್ಲಮ್ಮ ಶೇ.76.73, ರಾಮದುರ್ಗ ಶೇ.73.06, ಬೈಲಹೊಂಗಲ ಶೇ.73.05, ಅರಭಾವಿ ಶೇ.71.92, ಗೋಕಾಕ್ ಶೇ.71.06, ಬೆಳಗಾವಿ ದಕ್ಷಿಣ ಶೇ.66.52 ಮತ್ತು ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಶೇ.63.42 ಮತದಾನವಾಗಿದೆ.
ಮತದಾನದ ವಿವರ | |
ವಿಧಾನಸಭಾ ಕ್ಷೇತ್ರ | ಶೇಕಡಾವಾರು |
ಬೆಳಗಾವಿ ಗ್ರಾಮೀಣ | 76.87 |
ಸವದತ್ತಿ ಯಲ್ಲಮ್ಮ | 76.73 |
ರಾಮದುರ್ಗ | 73.06 |
ಬೈಲಹೊಂಗಲ | 73.05 |
ಅರಭಾವಿ | 71.92 |
ಗೋಕಾಕ್ | 71.06 |
ಬೆಳಗಾವಿ ದಕ್ಷಿಣ | 66.52 |
ಬೆಳಗಾವಿ ಉತ್ತರ | 63.42 |
ಸದಾಶಿವನಗರದಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಮಾತಿನ ಚಕಮಕಿ, ಸವದತ್ತಿ ತಾಲೂಕಿನ ಭಂಡಾರಹಳ್ಳಿಯಲ್ಲಿ ಗಲಾಟೆ ಬಿಟ್ಟರೆ ಬಹುತೇಕ ಕಡೆಗಳಲ್ಲಿ ಶಾಂತಿಯುತ ಮತದಾನ ಆಗಿದೆ. ಯಾವುದೇ ಅಹಿತಕರ ಘಟನೆ ಆಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಸ್ಟ್ರಾಂಗ್ ರೂಮ್ನಲ್ಲಿ ಮತಯಂತ್ರಗಳು ಭದ್ರ: ಮತದಾನದ ಬಳಿಕ ಚುನಾವಣಾ ಸಿಬ್ಬಂದಿಯು ತಮ್ಮ ತಮ್ಮ ಮತಗಟ್ಟೆಗಳಿಂದ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಪೊಲೀಸ್ ಭದ್ರತೆಯೊಂದಿಗೆ ಆಯಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಡಿಮಸ್ಟ ರಿಂಗ್ ಕೇಂದ್ರಗಳಿಗೆ ರಾತ್ರಿಯವರೆಗೆ ತಲುಪಿಸಿದರು. ಡಿಮಸ್ಟರಿಂಗ್ ಕೇಂದ್ರಗಳಿಂದ ಮತ ಎಣಿಕೆ ಕೇಂದ್ರಗಳಲ್ಲಿ ಸ್ಥಾಪಿಸಲಾಗಿರುವ ಸ್ಟ್ರಾಂಗ್ ರೂಮ್ಗಳಿಗೆ ಮಧ್ಯರಾತ್ರಿಯವರೆಗೆ ಮತಯಂತ್ರಗಳನ್ನು ಕಳುಹಿಸಲಾಯಿತು. ಬೆಳಗಾವಿ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರವನ್ನು ಬೆಳಗಾವಿ ನಗರದ ಆರ್.ಪಿ.ಡಿ. ಮಹಾವಿದ್ಯಾಲಯದಲ್ಲಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರವನ್ನು ಚಿಕ್ಕೋಡಿ ನಗರದ ಆರ್.ಡಿ.ಕಾಲೇಜಿನಲ್ಲಿ ಸ್ಥಾಪಿಸಲಾಗಿರುತ್ತದೆ. ಆಯಾ ಮತ ಎಣಿಕೆ ಕೇಂದ್ರಗಳ ಸ್ಟ್ರಾಂಗ್ ರೂಮ್ಗಳಲ್ಲಿ ಮತಯಂತ್ರಗಳನ್ನು ಇರಿಸಲಾಗಿರುತ್ತದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.
ಜಿಲ್ಲೆಯ ಪ್ರತಿಯೊಬ್ಬ ನಾಗರಿಕರಿಗೆ, ಜನಪ್ರತಿನಿಧಿಗಳು, ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ಕಂದಾಯ, ಜಿಲ್ಲಾ ಪಂಚಾಯಿತಿ ಹಾಗೂ ಪೊಲೀಸ್ ಸೇರಿದಂತೆ ಪ್ರತಿಯೊಂದು ಇಲಾಖೆಗಳ ಅಧಿಕಾರಿಗಳು/ಸಿಬ್ಬಂದಿ, ಸ್ವೀಪ್ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ರಾಹುಲ್ ಶಿಂಧೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.