ಕೊಪ್ಪಳ: ಗವಿಮಠದ ಶ್ರೀ ಗವಿಸಿದ್ಧೇಶ್ವರ ಜಾತ್ರೆ ವಿಭಿನ್ನ ವಿಶಿಷ್ಟವಾಗಿದೆ. ಕೇವಲ ಭಕ್ತಿ ಭಾವನೆ, ರಥೋತ್ಸವಕ್ಕೆ ಅಷ್ಟೇ ಗವಿಸಿದ್ಧೇಶ್ವರ ಜಾತ್ರೆ ಸೀಮಿತವಾಗಿಲ್ಲ, ಇಲ್ಲಿ ಮಹಾದಾಸೋಹವು ಅತ್ಯಂತ ವಿಶಿಷ್ಟವಾಗಿ ಪ್ರತಿವರ್ಷವೂ ಜರುಗುತ್ತದೆ. ಲಕ್ಷಾಂತರ ಭಕ್ತರಿಗೆ 15 ದಿನಗಳ ಕಾಲ ನಿರಂತರ ದಾಸೋಹ ನಡೆಯುತ್ತದೆ. ಅದು ಕೇವಲ ಪ್ರಸಾದ ಅಷ್ಟೇ ಅಲ್ಲ, ಭಕ್ತರಿಗೆ ಪ್ರಸಾದದಲ್ಲಿ ವಿಭಿನ್ನ ಆಹಾರ ಪದಾರ್ಥ ಸವಿಯುವ ಅವಕಾಶ ಈ ಜಾತ್ರೆಯಲ್ಲಿ ಸಿಗುತ್ತೆ ಅನ್ನೋದು ವಿಶೇಷ.
ಭಾನುವಾರ ಜಾತ್ರೆಯ ಎರಡನೇ ದಿನ ಉತ್ತರ ಕರ್ನಾಟಕದ ಪ್ರಸಿದ್ಧ ತಿನಿಸುಗಳಲ್ಲಿ ಒಂದಾದ ಮಿರ್ಚಿ ತಯಾರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿವರ್ಷದಂತೆ ಈ ಬಾರಿಯೂ 250ಕ್ಕಿಂತ ಹೆಚ್ಚು ಬಾಣಸಿಗರು ಬೆಳಗಿನಿಂದ ನಾಲ್ಕು ಲಕ್ಷದ ಐವತ್ತು ಸಾವಿರ ಮಿರ್ಚಿ ತಯಾರಿಸುವ ಸೇವೆಯಲ್ಲಿ ನಿರತರಾಗಿದ್ದಾರೆ. ಮಹಾದಾಸೋಹಕ್ಕೆ ಆಗಮಿಸುವ ಭಕ್ತರಿಗೆ ಮಿರ್ಚಿ ರುಚಿ ಘಮಲು ಸಿಗಲಿದೆ.
ಮಿರ್ಚಿ ತಯಾರಿಕೆ: ಕೊಪ್ಪಳದ ಗವಿಸಿದ್ದೇಶ್ವರ ಗೆಳೆಯರ ಬಳಗದ ತಂಡ ಎಂಟು ವರ್ಷಗಳ ಹಿಂದೆ ಮಿರ್ಚಿ ತಯಾರಿಕೆ ಆರಂಭಿಸಿದರು. ಅಂದಿನಿಂದ ಹೈದರಾಬಾದ ಕರ್ನಾಟಕ ಹೋರಾಟದ ಸದಸ್ಯರು, ದಾನಿಗಳು ಸ್ನೇಹಿತರು ಸೇರಿಕೊಂಡು ಪ್ರತಿವರ್ಷ ಜಾತ್ರೆಯ ಎರಡನೆಯ ದಿನ ಮಿರ್ಚಿ ತಯಾರಿಸಿ, ದಾಸೋಹಕ್ಕಾಗಿ ಬರುವ ಲಕ್ಷಾಂತರ ಭಕ್ತರಿಗೆ ಉಣಬಡಿಸುತ್ತಿದ್ದಾರೆ.
ಭಕ್ತರು ಮಿರ್ಚಿಗಳನ್ನು ತಿನ್ನುತ್ತ ಲಕ್ಷಾಂತರ ಪ್ರಮಾಣದಲ್ಲಿ ಮಿರ್ಚಿ ತಯಾರಿ ಹೇಗೆ ಮಾಡಲಾಗುತ್ತದೆ ಎನ್ನುವದನ್ನು ದಾಸೋಹ ಅಡುಗೆ ಕೋಣೆಗೆ ಭೇಟಿ ನೀಡಿ ಕುತೂಹಲದಿಂದ ವೀಕ್ಷಣೆ ಮಾಡಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಮಿರ್ಚಿ ತಯಾರಿಸುವುದಕ್ಕಾಗಿ 25 ಕ್ವಿಂಟಲ್ ಕಡ್ಲಿ ಹಿಟ್ಟು, 10 ಬ್ಯಾರಲ್ನಷ್ಟು ಅಡುಗೆ ಎಣ್ಣೆ, 20 ಕ್ವಿಂಟಾಲ್ನಷ್ಟು ಹಸಿ ಮೆಣಸಿನಕಾಯಿ, 60 ಕೆ.ಜಿ ಅಜಿವಾನ, 60 ಕೆಜಿ ಉಪ್ಪು, ಸೋಡಾಪುಡಿ ಮತ್ತು ಕೊತ್ತಂಬರಿ ಬಳಕೆ ಮಾಡಲಾಗಿದೆ.
ಇಷ್ಟೊಂದು ನಾಲ್ಕು ಲಕ್ಷ ಐವತ್ತು ಸಾವಿರ ಮಿರ್ಚಿ ತಯಾರಿಸಿ ಭಕ್ತರಿಗೆ ನೀಡಲು ಕೊಪ್ಪಳ ಜಿಲ್ಲೆ ಸೇರಿದಂತೆ ಸುತ್ತಲಿನ ಊರಿನ ಜನರು ಬಾಣಸಿಗರಾಗಿ ಅಜ್ಜನ ಸೇವೆಯೆಂದು ಕಾರ್ಯನಿರ್ವಹಿಸುತ್ತಿದ್ದಾರೆ. ಮಿರ್ಚಿ ತಯಾರಿಸುವ ತಂಡದ ಜಯಶ್ರೀ ಈಟಿವಿ ಭಾರತದೊಂದಿಗೆ ಮಾತನಾಡಿ, ಜಾತ್ರೆಯಲ್ಲಿ ಸೇವೆ ಮಾಡಲಿಕ್ಕೆ ಬಂದಿದ್ದೇವೆ. ಗವಿಸಿದ್ಧೇಶ್ವರ ಗೆಳೆಯರ ಬಳಗದ ನೇತೃತ್ವದಲ್ಲಿ ತಂಡದ ಬಾಣಸಿಗರು ಏಳೆಂಟು ವರ್ಷಗಳಿಂದ ಮಿರ್ಚಿ ತಯಾರಿಸಿ ಭಕ್ತರಿಗೆ ನೀಡುತ್ತಿದ್ದೇವೆ. ಇದೊಂದು ಸೇವೆ, ಅಂದಾಜು ಎರಡು ನೂರಕ್ಕಿಂತ ಹೆಚ್ಚು ಜನರು ಮಿರ್ಚಿ ಸೇವೆ ನಿರ್ವಹಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಮಿರ್ಚಿ ತಯಾರಿಸುವ ತಂಡದ ಶ್ರೀನಿವಾಸ ರೆಡ್ಡಿ ಮಾತನಾಡಿ, ಪ್ರಥಮ ಬಾರಿಗೆ ಹೈದರಾಬಾದ್ ಕರ್ನಾಟಕ ಹೋರಾಟದ ಯುವಕರು ಸೇರಿ ಉತ್ತರ ಕರ್ನಾಟಕದ ಸ್ಪೆಷಲ್ ಮಿರ್ಚಿ ಮಾಡಬೇಕೆಂದು ತೀರ್ಮಾನ ತೆಗೆದುಕೊಂಡೆವು. ಮಿರ್ಚಿ ತಯಾರಿಸಲು ಆರಂಭಿಸಿದಾಗ ಶ್ರೀಗಳಿಗೆ ಬಹಳ ಇಷ್ಟ ಆಯಿತು. ಅದೂ ಭಕ್ತರಿಗೂ ಇಷ್ಟ ಆಯಿತು. ಪ್ರತಿವರ್ಷವೂ ಹೆಚ್ಚು ಮಿರ್ಚಿ ತಯಾರಿಕೆಯೂ ಏರುತ್ತ ಬರುತ್ತಿದೆ. ಹಿಂದಿನ ವರ್ಷ 20 ಕ್ವಿಂಟಾಲ್ ಕಡ್ಲಿ ಹಿಟ್ಟಿನಲ್ಲಿ ಮಿರ್ಚಿ ಮಾಡಿದ್ದೆವು, ಈ ವರ್ಷ 25 ಕ್ವಿಂಟಾಲ್ ಕಡ್ಲಿ ಹಿಟ್ಟಿನಲ್ಲಿ ನಾಲ್ಕು ಲಕ್ಷಕ್ಕಿಂತ ಹೆಚ್ಚು ಮಿರ್ಚಿ ತಯಾರು ಮಾಡಲಾಗುತ್ತಿದೆ. ಗಮಿಮಠದ ಶ್ರೀ ಗವಿಸಿದ್ಧೇಶ್ವರ ಜಾತ್ರೆ ಮಿರ್ಚಿ ಜಾತ್ರೆ ಅನ್ನುವ ಮಟ್ಟಿಗೆ ಪ್ರಸಿದ್ಧಿ ಪಡೆಯುತ್ತಿದೆ. ಎಲ್ಲಾ ಭಕ್ತರು ಸೇರಿ ಖರ್ಚು ವೆಚ್ಚ ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು.
ಗವಿಮಠ ಜಾತ್ರೆಗೆ ಬರುವುದೇ ಒಂದು ಹಬ್ಬ: ಜಾತ್ರೆಯ ಎರಡನೇ ದಿನದ ಪ್ರಸಾದದಲ್ಲಿ ನಾಲ್ಕು ಲಕ್ಷದ ಐವತ್ತು ಸಾವಿರ ಮಿರ್ಚಿ ತಯಾರಿಸಿ ಬಡಿಸಲಾಗುತ್ತಿದೆ. ಗವಿಮಠ ಜಾತ್ರೆಗೆ ಬರುವುದೇ ಒಂದು ಹಬ್ಬ, ಅದರಲ್ಲೂ ಇಲ್ಲಿ ಪ್ರಸಾದ ಸೇವಿಸುವುದು ಮತ್ತೊಂದು ಹಬ್ಬದಂತಿದೆ. ಇಲ್ಲಿ ಮಾದಲಿ, ತುಪ್ಪ, ರೊಟ್ಟಿ ಸೇರಿದಂತೆ ವಿವಿಧ ಪಲ್ಯೆಯನ್ನು ಉಣಬಹುದಾಗಿದೆ. ನಾವು ಮನೆಯವರೆಲ್ಲ ಸೇರಿ ಪ್ರಸಾದ ಸೇವನೆಗೆ ಬಂದಿದ್ದೇವೆ ಎಂದು ಗವಿಮಠದ ಭಕ್ತೆ ಶೋಭಾ ಚಿಕ್ಕಮಠ ಸಂತಸ ವ್ಯಕ್ತಪಡಿಸಿದರು.
ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಆಧ್ಯಾತ್ಮಿಕ ಶಕ್ತಿಯ ವಿರಾಟ್ ದರ್ಶನ: ತೇಜಸ್ವಿನಿ ಅನಂತಕುಮಾರ್
ಗವಿಮಠದಲ್ಲಿ ಅಧ್ಯಾತ್ಮಿಕ ಶಕ್ತಿ, ಜನಸಾಗರ, ಅನ್ನದಾಸೋಹ ಮೂರು ಶಕ್ತಿಗಳು ಒಂದಾಗಿರುವುದನ್ನು ಕಂಡೆ. ಗವಿಮಠ ಜಾತ್ರೆ ನೋಡಿ ಆಧ್ಯಾತ್ಮಿಕ ಶಕ್ತಿಯ ವಿರಾಟ್ ದರ್ಶನವಾಯಿತು ಎಂದು ಅದಮ್ಯ ಚೇತನ ಪೌಂಡೇಶನ್ ಸಂಸ್ಥಾಪಕಿ ತೇಜಸ್ವಿನಿ ಅನಂತಕುಮಾರ್ ಹೇಳಿದರು.
ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ನಾನು ಬಹಳಷ್ಟು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಆದರೆ ಇಷ್ಟೆಲ್ಲ ವಿಶೇಷತೆಗಳು ಒಂದೇ ಕಡೆ ಎಲ್ಲಿಯೂ ಕಾಣಸಿಗಲಿಲ್ಲ. ಗವಿಮಠ ಬಿಟ್ಟು ಬೇರೆ ಯಾರಿಂದಲೂ ಈ ರೀತಿಯ ಜಾತ್ರೆ ಮಾಡಲು ಸಾಧ್ಯವಿಲ್ಲ. ಇಲ್ಲಿನ ಪ್ರಸಾದ ವ್ಯವಸ್ಥೆ ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ ಎಂದು ತಿಳಿಸಿದರು.
ಇದನ್ನೂಓದಿ:ಕೊಪ್ಪಳ ಜಾತ್ರೆಯಲ್ಲಿ ಜನರ ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ... ಹರಿದು ಬಂದ ಭಕ್ತಸಾಗರ!