ಹುಬ್ಬಳ್ಳಿ: ರಾಜಕೀಯ ಪಕ್ಷದಲ್ಲಿ ಎಲ್ಲವೂ ನೂರಕ್ಕೆ ನೂರರಷ್ಟು ಸರಿ ಇರಲ್ಲ. ಎಲ್ಲ ಪಾರ್ಟಿಯಲ್ಲಿಯೂ ಒಂದಿಷ್ಟು ಸಮಾಧಾನ, ಅಸಮಾಧಾನ ಇದ್ದೇ ಇರುತ್ತದೆ ಎಂದು ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಇದೇ ವೇಳೆ ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ಪಕ್ಷಕ್ಕೆ ಬಿಟ್ಟ ವಿಚಾರ. ಬಿಜೆಪಿಯೊಳಗೆ ಏನಿದೆ ಎಂಬುದನ್ನು ಕಾಂಗ್ರೆಸ್ ವಿಚಾರ ಮಾಡುವುದು ಬೇಡ. ನಿಮ್ಮಲ್ಲಿ ಸಿಎಂ ಸ್ಥಾನಕ್ಕೆ ಎಷ್ಟು ಪೈಪೋಟಿ ಇದೆ ಎಂದು ನೋಡಿಕೊಳ್ಳಿ. ಹೊರಗೆ ಸಿದ್ಧರಾಮಯ್ಯರಿಗೆ ಬೆಂಬಲ ಅಂತಾರೆ, ಒಳಗೊಳಗೆ ಪ್ರತ್ಯೇಕ ಸಭೆ, ಯಾರು ಮುಖ್ಯಮಂತ್ರಿಯಾಗಬೇಕು, ಯಾವ ಶಾಸಕರು ಯಾರ ಜೊತೆಗಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ತಮ್ಮ ಪಕ್ಷದ ಬಗ್ಗೆ ಕಾಂಗ್ರೆಸ್ ಶಾಸಕರು ಸಾಕಷ್ಟು ಅಸಮಾಧಾನಗೊಂಡಿದ್ದಾರೆ ಎಂದರು.
ಪಾಟ್ ಹೋಲ್ ತುಂಬಿಸಲೂ ಸಹ ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ. ನಿಮ್ಮ ಮನೆಯನ್ನು ಮೊದಲು ನೀವು ಸರಿಮಾಡಿಕೊಳ್ಳಿ. ಬೇರೆಯವರ ಮನೆಯ ಬಗ್ಗೆ ಚಿಂತೆ ಬಿಡಿ ಎಂದು ಟೀಕಿಸಿದರು.
ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿ ಮುಂದುವರೆಯುತ್ತಾರೆ ಎಂಬ ಜಿ.ಟಿ.ದೇವೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಅವರ ಬಗ್ಗೆ ನಾನೇನು ಹೇಳಲಿ? ಅದು ಅವರ ವಿಚಾರ ಎಂದರು.
ಅಲ್ಪಸಂಖ್ಯಾತರ ಓಲೈಕೆಗಾಗಿ ಸಾವರ್ಕರ್ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ಅವರ ಟೀಕೆ ಮಾಡುವುದರಿಂದ ಅಲ್ಪಸಂಖ್ಯಾತರ ಮತ ಬರುತ್ತವೆ ಎಂದು ಹೇಳಿಕೆ ನೀಡುತ್ತಾರೆ. ಪದೇ ಪದೆ ಸಾವರ್ಕರ್ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡೋದು ಅಕ್ಷಮ್ಯ ಅಪರಾಧ, ಇದನ್ನು ಖಂಡಿಸುತ್ತೇನೆ ಎಂದು ಹೇಳಿದರು.
ಪಕ್ಷಕ್ಕೆ ಮುಜುಗರ ಆಗುವುದು ಬೇಡ-ವಿ.ಸೋಮಣ್ಣ: ಆಪರೇಷನ್ ಮಾಡುವ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ. ಅನಾವಶ್ಯಕವಾಗಿ ಮಾತನಾಡಿ ಯಾರಿಗೂ ನೋವು ಕೊಡೋದು ಬೇಡ. ಪಕ್ಷಕ್ಕೆ ಮುಜುಗರ ಆಗುವುದು ಬೇಡ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.
ಸಾವಿರ ಕೋಟಿ ರೂಪಾಯಿ ಇಟ್ಟುಕೊಂಡು ಮುಖ್ಯಮಂತ್ರಿ ಆಗಲು ಹೊರಟ ಮಹಾನಾಯಕ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಾ, ಆ ಮಹಾನಾಯಕನ ವಿಷಯ ನನಗೆ ಗೊತ್ತಿಲ್ಲ ಎಂದರು.
ಇದನ್ನೂ ಓದಿ: ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಜೈಲಿಗೆ: ಸಂಸದ ಜಗದೀಶ ಶೆಟ್ಟರ್ ಭವಿಷ್ಯ - MUDA Scam