ಮೈಸೂರು: "ಮುಡಾದಲ್ಲಿ ನಾನು ಅಕ್ರಮವಾಗಿ ಯಾವುದೇ ಸೈಟ್ ಪಡೆದಿಲ್ಲ. ಒಂದು ವೇಳೆ ನಾನು ತಪ್ಪು ಮಾಡಿದ್ದೇನೆ ಎಂದು ಸಾಬೀತು ಮಾಡಿದರೆ, ನನ್ನ ಸ್ವಂತ ಹಣದಲ್ಲಿ ಸೈಟ್ ಅನ್ನು ಮುಡಾಗೆ ವಾಪಸ್ ಕೊಡುತ್ತೇನೆ" ಎಂದು ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ನ ಮಾಜಿ ಸಚಿವ ಸಾ.ರಾ. ಮಹೇಶ್ ಸವಾಲು ಹಾಕಿದ್ದಾರೆ.
ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಮುಡಾದಲ್ಲಿ 50:50 ಅನುಪಾತದ ಬದಲಿ ನಿವೇಶನ ಹಗರಣದಲ್ಲಿ ಬೆಂಗಳೂರಿನ ಸುದ್ದಿಗೋಷ್ಠಿಯಲ್ಲಿ ನಗರಾಭಿವೃದ್ಧಿ ಸಚಿವರು ಎರಡು ಬಾರಿ ನನಗೆ ಸೈಟ್ ಕೊಟ್ಟಿದ್ದೇನೆ ಎಂದು ಜೋರಾಗಿ ನನ್ನ ಹೆಸರು ಹೇಳಿದ್ದಾರೆ. ನನ್ನ ಹೆಸರಿನಲ್ಲಿ ಸೈಟ್ ಇರುವುದನ್ನು ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ ರುಜುವಾತು ಮಾಡಲಿ" ಎಂದು ಸವಾಲು ಹಾಕಿದರು.
"ದಟ್ಟಗಳ್ಳಿಯ ನಂಬರ್ 133/3 ಅಲ್ಲಿ 9 ಗುಂಟೆ, ಬೋಗಾದಿಯಲ್ಲಿ 2.11 ಎಕರೆ ಜಾಗವನ್ನು ಕೊಟ್ಟಿದ್ದೇನೆ ಎಂದು ಸಚಿವರು ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ. ಹಾಗಾದರೇ ಆ ಎರಡು ಜಾಗ ಯಾರ ಹೆಸರಿನಲ್ಲಿದೆ ಎಂಬುದನ್ನು ಸಚಿವರು ಹೇಳಲಿ. ಜನ ಈ ಬಾರಿ ನನಗೆ ವಿಶ್ರಾಂತಿ ಕೊಟ್ಟಿದ್ದಾರೆ. ಶಿಫಾರಸು ಮಾಡಲು ನಾನು ಶಾಸಕನಲ್ಲ. ಜತೆಗೆ ಮುಡಾ ಸದಸ್ಯನೂ ಅಲ್ಲ. ಯಾರಿಗೆ ಎಷ್ಟು ಸೈಟ್ ಕೊಟ್ಟಿದ್ದಾರೆ ಅಂತಾ ತನಿಖೆಯಾಗಲಿ."
"ಸುಮಾರು 1,100 ಸೈಟ್ಗಳೂ 50:50 ಅನುಪಾತದಲ್ಲಿ ಹಂಚಿಕೆಯಾಗಿವೆ. 500 ಸೈಟ್ಗಳು ಪ್ರೋತ್ಸಾಹದಾಯಕ ನಿವೇಶನವಾಗಿ ಕೊಟ್ಟಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಮುಡಾ ಆಯುಕ್ತರಾಗಿದ್ದ ಕಾಂತರಾಜ್ ಸುಮಾರು 10 ಸಾವಿರ ಸೈಟ್ಗಳನ್ನು ಮುಡಾ ವ್ಯಾಪ್ತಿಯಲ್ಲಿ ಗುರುತಿಸಿದ್ದರು. ಆ ಸೈಟ್ಗಳು ಏನಾಗಿವೆ ಎಂಬುದು ತನಿಖೆಯಾಗಲಿ. ಕಾಂಗ್ರೆಸ್ನವರು ಕೋತಿ ತಿಂದು ಮೇಕೆ ಬಾಯಿಗೆ ಒರಸಿದಂತೆ ಮಾಡುತ್ತಿದ್ದಾರೆ. ನಾನು ನನ್ನ ಸವಾಲಿನಿಂದ ನುಣಿಚಿಕೊಳ್ಳುವ ವ್ಯಕ್ತಿಯಲ್ಲ. ನನಗೆ ಮತ್ತು ನನ್ನ ಕುಟುಂಬಕ್ಕೆ ಮುಡಾದಿಂದ ಸೈಟ್ ಕೊಟ್ಟಿದ್ದಾರೆ ಎನ್ನುವುದನ್ನು ತೋರಿಸಲಿ" ಎಂದು ಹೇಳಿದರು.
"ಯಾರು ಯಾರಿಗೆ ಎಷ್ಟು ಸೈಟ್ ಕೊಟ್ಟಿದ್ದಾರೆ ಎಂಬುದು ನನಗೂ ಗೊತ್ತು. ನಗರಾಭಿವೃದಿ ಸಚಿವರು ಕೇಳಿದರೆ ನಾನೇ ಲಿಸ್ಟ್ ಕೊಡುತ್ತೇನೆ. ಕೇವಲ ಜೆಡಿಎಸ್, ಬಿಜೆಪಿ ಅವರ ಹೆಸರನ್ನು ಹೇಳುತ್ತಿದ್ದೀರಿ. ಕಾಂಗ್ರೆಸ್ನವರು ಯಾರು ಇಲ್ಲವಾ? ಕಾಂಗ್ರೆಸ್ನ ನಮ್ಮ ಸ್ನೇಹಿತ ಶಾಸಕ ತನ್ವೀರ್ ಸೇಠ್ ಈ ವಿಚಾರದಲ್ಲಿ ಬಾಯಿ ಬಿಡಬೇಕು" ಎಂದು ಟಾಂಗ್ ನೀಡಿದರು.
"ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮುಡಾದಲ್ಲಿ ಸೈಟ್ ಪಡೆಯಲು 40 ವರ್ಷಗಳ ಹಿಂದೆ ಹಣ ಕಟ್ಟಿದ್ದರು. ಅವರಿಗೆ ನಿಗದಿಯಾದ ಆದ ಸೈಟ್ ಕಡಿಮೆ ಚದರ ಇತ್ತು ಎಂದು ಆ ಸೈಟ್ ಅನ್ನು ವಾಪಾಸ್ ಕೊಟ್ಟು ಬದಲಿ ನಿವೇಶನ ಕೊಡಿ ಎಂದು ಅರ್ಜಿ ಸಲ್ಲಿಸಿದ್ದಾರೆ" ಎಂದು ಕುಮಾರಸ್ವಾಮಿ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: ಬಿಜೆಪಿ - ಜೆಡಿಎಸ್ ಮುಖಂಡರಿಗೂ ಮುಡಾ ಬದಲಿ ನಿವೇಶನ ಹಂಚಿಕೆ : ಸಚಿವ ಬೈರತಿ ಸುರೇಶ್ - Muda site allotment