ಬೆಂಗಳೂರು: ಡಾ.ಸಿ.ಎನ್. ಮಂಜುನಾಥ್ ಅವರನ್ನು ಬಿಜೆಪಿ ಚಿಹ್ನೆ ಮೇಲೆ ಚುನಾವಣೆಗೆ ನಿಲ್ಲುವಂತೆ ಒತ್ತಡ ಹಾಕಿದ್ದು ನಾನೇ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಪಕ್ಷದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎರಡು ಗಂಟೆಗಳ ಕಾಲ ತಂದೆಯವರ ಮೇಲೆ ಒತ್ತಡ ಹಾಕಿ ಮಂಜುನಾಥ್ ಅವರನ್ನು ಒಪ್ಪಿಸಿದ್ದು ನಾನೇ ಎಂದು ಸ್ಪಷ್ಟಪಡಿಸಿದ್ದಾರೆ.
![ಮಹಿಳಾ ದಿನಾಚರಣೆ ಕಾರ್ಯಕ್ರಮ](https://etvbharatimages.akamaized.net/etvbharat/prod-images/14-03-2024/kn-bng-07-jds-office-hdk-talk-script-7208083_14032024175722_1403f_1710419242_630.jpg)
ಡಿ.ಕೆ ಸುರೇಶ್ ವಿರುದ್ದ ಕಿಡಿ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಜೆಡಿಎಸ್ ಅಭ್ಯರ್ಥಿಯಾಗಿರುವ ಡಾ.ಸಿ.ಎನ್.ಮಂಜುನಾಥ್ ಬಗ್ಗೆ ಟೀಕೆ ಮಾಡಿರುವ ಸಂಸದ ಡಿ.ಕೆ.ಸುರೇಶ್ ವಿರುದ್ಧ ಕುಮಾರಸ್ವಾಮಿ ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಾ.ಮಂಜುನಾಥ್ ಅವರ ಸಾಧನೆಯನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಆದರೆ, ಈ ವ್ಯಕ್ತಿ ನಾಲಿಗೆ ಹರಿಬಿಟ್ಟಿದ್ದಾರೆ. ಈ ವ್ಯಕ್ತಿ ಮಂಜುನಾಥ್ ಅವರ ಸಾಧನೆಗೆ ಸಮನಲ್ಲ ಎಂದು ಕಿಡಿಕಾರಿದರು. ಅವರು ಚುನಾವಣೆಗಳಲ್ಲಿ ಗೆದ್ದಿರಬಹುದು. ಆದರೆ, ಮಂಜುನಾಥ್ ಅವರ ಸಾಧನೆ ಏನು? ಎಂಬುದನ್ನು ಅವರು ಮೊದಲು ಅರಿತುಕೊಳ್ಳಬೇಕು. ಈ ಬಗ್ಗೆ ಡಿ ಕೆ ಸುರೇಶ್ ಇಂದು ಬೆಳಗ್ಗೆ ಹೇಳಿಕೆ ಕೊಟ್ಟಿದ್ದು, ನನ್ನ ಮನಸಿಗೆ ನೋವುಂಟು ಮಾಡಿದೆ ಎಂದು ಹೇಳಿದರು.
![ಮಹಿಳಾ ದಿನಾಚರಣೆ ಕಾರ್ಯಕ್ರಮ](https://etvbharatimages.akamaized.net/etvbharat/prod-images/14-03-2024/kn-bng-07-jds-office-hdk-talk-script-7208083_14032024175722_1403f_1710419242_97.jpg)
ಬೇಕಾದರೆ ನಮ್ಮ ಬಗ್ಗೆ ಮಾತನಾಡಲಿ, ರಾಜಕೀಯವಾಗಿ ಎದುರಿಸುತ್ತೇವೆ. ಉತ್ತರ ಕೊಡುತ್ತೇವೆ. ಮಂಜುನಾಥ್ ಅವರ ಬಗ್ಗೆ ಮಾತನಾಡಿದರೆ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಕೆ ನೀಡಿದರು. ಅವರ ಬಗ್ಗೆ ಮಾತನಾಡುವ ಯೋಗ್ಯತೆ ನಿಮಗಿಲ್ಲ, ನೀವು ಮಾಡಬಾರದ್ದು ಮಾಡಿದ್ದೀರಿ ಎಂದು ಡಿಕೆ ಸುರೇಶ್ ವಿರುದ್ಧ ಹರಿಹಾಯ್ದರು.
ಪಕ್ಷದಲ್ಲಿ ಮಹಿಳೆಯರಿಗೆ ಹೆಚ್ಚು ಆದ್ಯತೆ: ಜೆಡಿಎಸ್ ಪಕ್ಷದಲ್ಲಿ ಮಹಿಳೆಯರಿಗೆ ಹೆಚ್ಚು ಶಕ್ತಿ ತುಂಬಲಾಗುವುದು. ಶೇ33ರಷ್ಟು ಮಹಿಳಾ ಮೀಸಲು ಜಾರಿಯಾದ ಮೇಲೆ ಮಹಿಳೆಯರಿಗೆ ಹೆಚ್ಚೆಚ್ಚು ಅವಕಾಶಗಳು ಸಿಗಲಿವೆ. ಆದ್ದರಿಂದಲೇ ಈಗಿನಿಂದಲೇ ಸಂಘಟನೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಮಹಿಳಾ ಮುಖಂಡರಿಗೆ ಕುಮಾರಸ್ವಾಮಿ ಅವರು ಸಲಹೆ ನೀಡಿದರು. ಮಹಿಳಾ ಸಬಲೀಕರಣಕ್ಕೆ ದೇವೇಗೌಡರ ಕೊಡುಗೆ ಸ್ಮರಣೀಯ. ಸರಕಾರಿ ನೌಕರಿಯಲ್ಲಿ ಶೇ50ರಷ್ಟು ಮಹಿಳಾ ಮೀಸಲು ಅವರ ಕೊಡುಗೆ ಇದೆ. ಮುಂದಿನ ವಿಧಾನಸಭೆಗೆ 80-90 ಜನ ಮಹಿಳೆಯರು ಶಾಸಕರಾಗಿ ಆಯ್ಕೆಯಾಗಿ ಬರುತ್ತಾರೆ. ರಾಜಕೀಯ ಹಿನ್ನೆಲೆಯ ಕುಟುಂಬ, ಶ್ರೀಮಂತ ಕುಟುಂಬಗಳಿಂದ ಬಂದ ಹೆಣ್ಣು ಮಕ್ಕಳಷ್ಟೇ ಶಾಸಕರಾಗಬಹುದು ಎನ್ನುವುದು ಸುಳ್ಳು. ಸಾಮಾನ್ಯ ಮಹಿಳೆಯರು ಕೂಡ ಶಾಸಕರಾಗಬಹುದು ಎನ್ನುವುದಕ್ಕೆ ಶಾರದಾ ಪೂರ್ಯ ನಾಯಕ್, ಕರೆಮ್ಮ ನಾಯಕ್ ಅವರೇ ಉತ್ತಮ ಉದಾಹರಣೆ. ಈ ಇಬ್ಬರು ಮಹಿಳೆಯರು ಅತ್ಯಂತ ಕಠಿಣ ಕ್ಷೇತ್ರಗಳಿಂದ ಆಯ್ಕೆ ಆಗಿದ್ದಾರೆ. ಇವರಿಬ್ಬರ ಯಶೋಗಾಥೆ ನಮ್ಮ ಪಕ್ಷದ ಇತರ ಮಹಿಳಾ ಮುಖಂಡರಿಗೆ ಮಾದರಿ ಎಂದು ಹೇಳಿದರು.
ಇದನ್ನೂ ಓದಿ: ಜೆಡಿಎಸ್ ಸರಿಯಿಲ್ಲವೆಂದು ದೇವೇಗೌಡರ ಅಳಿಯ ಬೇರೆ ಪಕ್ಷದಿಂದ ಸ್ಪರ್ಧೆಗೆ ಇಳಿಯುತ್ತಿದ್ದಾರೆ: ಸಂಸದ ಡಿ ಕೆ ಸುರೇಶ್