ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕು ಗುಡ್ಡದಮಲ್ಲಾಪುರ ಗ್ರಾಮದಲ್ಲಿ ವಿಶಿಷ್ಠವಾದ 'ಹುಚ್ಚೇಶ್ವರಮಠ'ವಿದೆ. ಎಲ್ಲ ಮಠಗಳಲ್ಲಿ ಜಂಗಮರೂಪಿ ಪೀಠಾಧಿಪತಿಗಳಿದ್ದರೆ ಇಲ್ಲಿ ವೃಷಭರೂಪಿ ಪೀಠಾಧಿಪತಿಗಳಿರುವುದು ವಿಶೇಷ. ಮಠದಲ್ಲಿ ಹಿರಿಯ ಶ್ರೀ ಮತ್ತು ಕಿರಿಯ ಶ್ರೀಗಳಿದ್ದು, ಇವರನ್ನು ಚರಪಟ್ಟಾಧ್ಯಕ್ಷರು ಮತ್ತು ಸ್ಥಿರ ಪಟ್ಟಾಧ್ಯಕ್ಷರು ಎಂದು ಕರೆಯಲಾಗುತ್ತದೆ.
16ನೇ ಶತಮಾನದಲ್ಲಿ ಕಾಶಿಯಿಂದ ಆಗಮಿಸಿದ್ದ ಶ್ರೀಗಳ ಅಣತಿಯಂತೆ ಇಲ್ಲಿ ವೃಷಭರೂಪಿ ಅಂದರೆ ಎತ್ತುಗಳನ್ನು ಮಠಾಧೀಶರನ್ನಾಗಿ ಮಾಡಲಾಗಿದೆ. ಶ್ರಾವಣ ಮಾಸ ಬಂದರೆ ಸಾಕು, ಮಠಾಧೀಶರಿಗೆ ಎಲ್ಲಿಲ್ಲದ ಬೇಡಿಕೆ ಬರುತ್ತೆ. ಭಕ್ತರು ಜಂಗಮರೂಪಿ ಸ್ವಾಮೀಜಿಗಳನ್ನು ಮನೆಗಳಿಗೆ ಕರೆದು ಪಾದಪೂಜೆ ನೆರವೇರಿಸುವ ಮೂಲಕ ಕೃತಾರ್ಥರಾಗುತ್ತಾರೆ.
ಆದರೆ ಈ ಬೇಡಿಕೆಗೆ ಮೂಕಪ್ಪ ಶ್ರೀಗಳು ಹೊರತಾಗಿಲ್ಲಾ. ಈ ಸ್ವಾಮೀಜಿಗಳ ಪಾದಪೂಜೆಗೆ ಭಕ್ತರು ಸರತಿಯಲ್ಲಿ ನಿಂತು ಪಾದಪೂಜೆ ನಿಗದಿ ಮಾಡಿಕೊಳ್ಳುತ್ತಾರೆ. ಮಠಕ್ಕೆ ತೆರಳುವ ಭಕ್ತರು ಶ್ರಾವಣ ಮಾಸದಲ್ಲಿ ತಮ್ಮ ಮನೆಗಳಿಗೆ ಆಗಮಿಸಿ ಪಾದಪೂಜೆ ಸ್ವೀಕರಿಸುವಂತೆ ಮಠದ ಧರ್ಮದರ್ಶಿಗಳ ಹತ್ತಿರ ದಿನಾಂಕ ನಿಗದಿ ಮಾಡಿಕೊಳ್ಳುತ್ತಾರೆ. ವರ್ಷಪೂರ್ತಿ ಮೂಕಪ್ಪಶ್ರೀಗಳು ಭಕ್ತರ ಮನೆಗಳಿಗೆ ತೆರಳಿ ಬಿನ್ನಹ ಮಾಡಿದರೆ, ಶ್ರಾವಣ ಮಾಸದಲ್ಲಿ ಮಾತ್ರ ಭಕ್ತರ ಮನೆಗೆ ತೆರಳಿ ಪಾದಪೂಜೆ ಸ್ವೀಕರಿಸುತ್ತಾರೆ.
ಹೀಗಾಗಿ ಗುಡ್ಡದಮಲ್ಲಾಪುರ ಮೂಕಪ್ಪಶ್ರೀಗಳ ಪಾದಪೂಜೆಗೆ ಶ್ರಾವಣದಲ್ಲಿ ಎಲ್ಲಿಲ್ಲದ ಬೇಡಿಕೆ. ಭಕ್ತರ ಮನೆಗೆ ಆಗಮಿಸುವ ಶ್ರೀಗಳನ್ನು ಭಕ್ತಿಯಿಂದ ಬರಮಾಡಿಕೊಳ್ಳುತ್ತಾರೆ. ಅವರಿಗಾಗಿ ವಿಶೇಷವಾದ ವಾಹನವಿದ್ದು ಆ ವಾಹನದಲ್ಲಿ ಶ್ರೀಗಳು ದಿನನಿತ್ಯ ನೂರಾರು ಕಿಲೋ ಮೀಟರ್ ಸಂಚರಿಸುತ್ತಾರೆ. ಮನೆಯಲ್ಲಿ ವಿಶೇಷವಾದ ಕೊಠಡಿಯನ್ನು ಶ್ರೀಗಳಿಗೆ ನೀಡಲಾಗುತ್ತದೆ. ಶ್ರೀಗಳಿಗೆ ಮೂರು ಹೊತ್ತು ಅಂದರೆ ತ್ರಿಕಾಲ ಸ್ನಾನ ಮಾಡಿಸಿ ಲಿಂಗಪೂಜೆ ಮಾಡಿಸಲಾಗುತ್ತದೆ. ನಂತರ ಉಭಯಶ್ರೀಗಳ ನಡುವೆ ರುದ್ರಾಭಿಷೇಕ ಸೇರಿದಂತೆ ವಿವಿಧ ಕೈಂಕರ್ಯಗಳನ್ನು ನಡೆಸಲಾಗುತ್ತದೆ.
ಮಠದಿಂದಲೇ ಆಗಮಿಸುವ ವಟುಗಳು ಈ ಪೂಜಾ ಕಾರ್ಯಗಳನ್ನು ನಡೆಸುತ್ತಾರೆ. ಗ್ರಾಮದಲ್ಲಿ ಯಾರಾದರೂ ಭಕ್ತರು ಶ್ರೀಗಳನ್ನು ಪಾದಪೂಜೆಗೆ ಕರೆದರೆ ಗ್ರಾಮಸ್ಥರು ಹಣ್ಣುಕಾಯಿ ನೈವೇದ್ಯ ಸಲ್ಲಿಸಿ ಪೂಜೆ ಸಲ್ಲಿಸುತ್ತಾರೆ. ಪೂಜೆ ಮುಗಿದ ನಂತರ ಸರತಿಯಲ್ಲಿ ನಿಂತು ಶ್ರೀಗಳ ಆಶೀರ್ವಾದ ಪಡೆಯುತ್ತಾರೆ. ಶ್ರೀಗಳ ಕಾಲಿಗೆರಗುವ ಭಕ್ತರಿಗೆ ಮೂಕಪ್ಪಶ್ರೀಗಳು ಪಾದ ಇಟ್ಟು ಆಶೀರ್ವಾದ ಮಾಡುತ್ತಾರೆ. ಈ ರೀತಿ ಪೂಜೆ ಸಲ್ಲಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತವೆ ಎನ್ನುತ್ತಾರೆ ಭಕ್ತರು.
"ಕಳೆದ ಹಲವು ವರ್ಷಗಳಿಂದ ಮೂಕಪ್ಪಶ್ರೀಗಳಲ್ಲಿ ನಡೆದುಕೊಳ್ಳುತ್ತಿದ್ದೇವೆ. ನಾವು ಮನಸ್ಸಿನಲ್ಲಿ ಮಾಡಿಕೊಂಡು ಸಂಕಲ್ಪಗಳು ಈಡೇರಿವೆ. ಮನೆ ಕಟ್ಟಿಸಿದ್ದೇವೆ, ಜಮೀನು ಖರೀದಿಸಿದ್ದೇವೆ. ಪುತ್ರ ಸಂತಾನಫಲ ಪಡೆದುಕೊಂಡಿದ್ದೇವೆ. ಒಟ್ಟಾರೆಯಾಗಿ ಮೂಕಪ್ಪಶ್ರೀಗಳ ಆಶೀರ್ವಾದದಿಂದ ನಮಗೆ ಒಳ್ಳೆಯದಾಗಿದೆ. ಹೀಗಾಗಿ ಪ್ರತಿವರ್ಷ ಶ್ರಾವಣ ಮಾಸದಲ್ಲಿ ಮೂಕಪ್ಪಶ್ರೀಗಳನ್ನು ಮನೆಗೆ ಕರೆದು ಪಾದಪೂಜೆ ಮಾಡುತ್ತೇವೆ" ಎನ್ನುತ್ತಾರೆ ನಾಗನೂರಿನ ಭಕ್ತ ಮಹೇಶ ಆವಕ್ಕನವರ್.
ಈ ಮಠಕ್ಕೆ ಪೀಠಾಧಿಪತಿಗಳ ಆಯ್ಕೆಗೆ ವಿಶೇಷವಾದ ವಿಧಾನಗಳಿವೆ. ಅಲ್ಲದೆ ಶ್ರೀಗಳ ಪಟ್ಟಾಧಿಕಾರ ಸಹ ನಡೆಯುತ್ತೆ. ಈ ಪಟ್ಟಾಧಿಕಾರಕ್ಕೆ ಕಾಶಿಶ್ರೀಗಳು ಶ್ರಿಶೈಲಶ್ರೀಗಳು ಸಾನಿಧ್ಯ ವಹಿಸುವುದು ವಿಶೇಷ. ಮೂಕಪ್ಪಶ್ರೀಗಳು ಅಮಾವಾಸೆಯ ದಿನ ಮಾತ್ರ ಮಠದಲ್ಲಿರುತ್ತಾರೆ. ವರ್ಷಪೂರ್ತಿ ಭಕ್ತರ ಮನೆಗೆ ತೆರಳಿ ಮಠದ ದಾಸೋಹಕ್ಕೆ ಮಠದಿಂದ ನಡೆಯುವ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಕಾಣಿಕೆ ಪಡೆಯುತ್ತಾರೆ.