ಹುಬ್ಬಳ್ಳಿ: ರಾಜ್ಯದಲ್ಲಿ ಒಂದು ಕಡೆ ಲೋಕಾಯುಕ್ತರ ದಾಳಿಯಾದರೆ, ಮತ್ತೊಂದು ಕಡೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ದಿಢೀರ್ ಹುಬ್ಬಳ್ಳಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಶಾಕ್ ನೀಡಿದರು.
ನಿಗದಿಯಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಬೆಳಗಾವಿ ಪ್ರವಾಸ ಇತ್ತು. ಆದ್ರೆ ಸಚಿವರು ಬೆಳಗಾವಿಗೆ ಹೋಗುವಾಗ ದಾರಿ ಮಧ್ಯೆ ಹುಬ್ಬಳ್ಳಿ ತಹಶೀಲ್ ಕಚೇರಿ ಹಾಗೂ ಸಬ್ ರಿಜಿಸ್ಟ್ರಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.
ತಹಶೀಲ್ ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿ ಸೇರಿದಂತೆ ವಿವಿಧ ಕಡೆ ಪರಿಶೀಲನೆ, ಅಧಿಕಾರಿಗಳ ಹಾಜರಾತಿ, ಕೆಲಸದ ಬಗ್ಗೆ ಮಾಹಿತಿ ಪಡೆದ ಬಳಿಕ ಮಾತನಾಡಿದ ಸಚಿವರು, ನಮ್ಮ ಇಲಾಖೆ ಕಾರ್ಯವೈಖರಿ ತಿಳಿಯುವ ನಿಟ್ಟಿನಲ್ಲಿ ಆಕಸ್ಮಿಕ ಭೇಟಿ ನೀಡಿದ್ದೇನೆ. ಯಾರೇ ತಪ್ಪು ಮಾಡಿದ್ದರು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಕಂದಾಯ ಇಲಾಖೆಯಲ್ಲಿ ಏಜೆಂಟರ್ ಹಾವಳಿ ತಪ್ಪಿಸಲು ಸಹ ಕ್ರಮ ತೆಗೆದುಕೊಳ್ಳುವ ಪ್ಲಾನ್ ಮಾಡಿದ್ದೇವೆ. ಏಕಗವಾಕ್ಷಿ ಮೂಲಕ ವಿದ್ಯಾರ್ಥಿಗಳಿಗೆ ವಿವಿಧ ದಾಖಲೆಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಸಂಪೂರ್ಣ ಆನ್ಲೈನ್: ಕಳೆದ ಬಾರಿ ಬಂದಾಗ ಆನ್ಲೈನ್ನಲ್ಲಿ ಕಡತ ವಿಲೇವಾರಿ ಆಗ್ತಾ ಇರಲಿಲ್ಲ. ಜನ ಹೇಳುವ ಹಾಗೇ ಬೇಕಾದವರದ್ದು ಮಾತ್ರ ಕೆಲಸ ಆಗುತ್ತೆ. ಹೀಗಾಗಿ ನಮಗೆ ತೊಂದರೆ ಆಗ್ತಿದೆ, ಅನ್ನೋ ದೂರು ನೀಡಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಕೂಡ ನಮಗೆ ತಾಕೀತು ಮಾಡಿದ್ದಾರೆ. ಈಗ ಸಂಪೂರ್ಣ ಆನ್ಲೈನ್ ಮೂಲಕ ಕಡತ ವಿಲೇವಾರಿ ಆಗುತ್ತಿದೆ. ಕಾವೇರಿ 2.0 ನೋಂದಣಿ ಬಗ್ಗೆ ಕೂಡ ದೂರು ಬಂದಿದ್ದವು. ಈಗ ಜೆ ಸ್ಲಿಮ್ನಿಂದ ಆಗುತ್ತಿದ್ದ ಸಮಸ್ಯೆ ಆಗ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ವರ್ ಸಮಸ್ಯೆ ಇಲ್ಲ :ಸರ್ವರ್ ಸಮಸ್ಯೆ ಕೂಡ ಕಾವೇರಿ 2.0 ನೋಂದಣಿಗೆ ಆಗ್ತಿಲ್ಲ. ಮೊದಲು ಗಂಟೆಗಟ್ಟಲೆ ಸಮಯ ತೆಗೆದುಕೊಳ್ಳುತ್ತಿತ್ತು, ಈಗ 15 ನಿಮಿಷದಲ್ಲಿ ಆಗುತ್ತೆ. ಭೂದಾಖಲೆಗಳು ಇವೆ, ದಾಖಲೆಗಳ ತಿದ್ದುಪಡಿ, ಮಿಸ್ಸಿಂಗ್ ಸೇರಿ ಹಲವು ಸಮಸ್ಯೆ ಆಗಿದ್ದವು. ಈಗಾಗಲೇ ಸ್ಕ್ಯಾನರ್, ಕಂಪ್ಯೂಟರ್ ಈಗಾಗಲೇ ಬಂದಿದೆ. ಕೆಲಸ ಆರಂಭ ಆಗುತ್ತೆ. ಭೂ ಸುರಕ್ಷಾ ಕಾರ್ಯಕ್ರಮ ಹಿನ್ನೆಲೆ 31 ಜಿಲ್ಲೆಯ ಒಂದು ತಾಲೂಕಿಗೆ ಕೊಡಲಾಗುತ್ತೆ. ಹುಬ್ಬಳ್ಳಿಯಲ್ಲಿ ಇನ್ನು ಎರಡು ದಿನಗಳಲ್ಲಿ ಆರಂಭ ಆಗುತ್ತೆ ಎಂದು ಹೇಳಿದರು.
ಏಜೆಂಟರ್ ಹಾವಳಿ ತಡೆಗೆ ಡಿಜಿಟಲ್ ಅನುಷ್ಠಾನ: ತಹಶೀಲ್ದಾರ್, ಸರ್ವೇ, ಸಬ್ ರಿಜಿಸ್ಟ್ರಾರ್ ಇಲಾಖೆಗಳ ಎಲ್ಲ ದಾಖಲೆಗಳನ್ನು ಡಿಜಿಟಲ್ ಮಾಡ್ತಾ ಇದ್ದೇವಿ. ಏಜೆಂಟರ್ ಹಾವಳಿ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲೆಲ್ಲಿ ಏಜೆಂಟರ್ಗಳ ಹಾವಳಿ ಇದೆ. ಅಂತಾ ನಾವು ಪರಿಶೀಲನೆ ಮಾಡ್ತಾ ಇದ್ದೀವಿ. ಯಾವ ಯಾವ ಅಧಿಕಾರಿಗಳ ಹತ್ತಿರ ಕಡತ ಎಷ್ಟು ದಿನಗಳು ಇವೆ ಅನ್ನೋದನ್ನು ತಹಶೀಲ್ದಾರ್ಗೆ ತಿಳಿಯುವಂತೆ ಮಾಡಿದ್ದೇವೆ. ನಾನು ಇಲ್ಲಿ ಬಂದು ನಿಂತರೂ, ಏಜೆಂಟ್ ಹಾವಳಿ ತಪ್ಪಿಸಲು ಆಗಲ್ಲ. ಆದರೆ ಆದಾಗದಂತೆ ಡಿಜಿಟಲೀಕರಣ ಮಾಡ್ತಾ ಇದ್ದೀವಿ ಎಂದು ಮಾಹಿತಿ ನೀಡಿದರು.
ಸರ್ವೇ ಕೆಲಸ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಬಾಕಿ ಇವೆ. ಈಗಿನ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಕಾರ್ಯ ವೇಗ ಹೆಚ್ಚಿಸಲಿದ್ದೇವೆ. 20 ಕೋಟಿ ವೆಚ್ಚ ಮಾಡಿ ಆಧುನೀಕರಣ ಉಪಕರಣ ಕೊಡ್ತಾ ಇದ್ದೀವೆ. 750 ಪರವಾನಗಿ ಸರ್ವೇ ಮಾಡುವವರಿಗೆ ಹಂಚಿಕೆ ಮಾಡ್ತಾ ಇದ್ದೀವಿ. 357 ಸರ್ವೇಸ್ ಎಡಿಎಲ್ಆರ್ ಪೋಸ್ಟ್ ಭರ್ತಿ ಮಾಡಲು ಅರ್ಜಿ ಕರೆದಿದ್ದೇವೆ. 596 ಖಾಲಿ ಹುದ್ದೆಗಳಿವೆ. ಸಿಎಂ ಅದನ್ನ ಭರ್ತಿ ಮಾಡಲು ಸೂಚಿಸಿದ್ದಾರೆ ಎಂದು ತಿಳಿಸಿದರು.
ಇದನ್ನೂಓದಿ:ಗ್ಯಾರಂಟಿ ಯೋಜನೆ ಸ್ಥಗಿತದ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ