ಹುಬ್ಬಳ್ಳಿ : ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ರಾಜ್ಯದಲ್ಲಿಯೇ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಕ್ಯಾತೆ ಪಡೆದಿದೆ. ಜೊತೆಗೆ ಪಾಲಿಕೆ ಆದಾಯಕ್ಕೂ ಏನು ಕಡಿಮೆ ಇಲ್ಲ. ಆದರೇ ಆಸ್ತಿ ಕರ ವಸೂಲಿ ಮಾಡುವಲ್ಲಿ ಪಾಲಿಕೆ ಹಲವು ಅವಕಾಶಗಳನ್ನು ಕರದಾತರಿಗೆ ನೀಡಿದ್ದರೂ ಪ್ರಸಕ್ತ ವರ್ಷ ಕೋಟ್ಯಂತರ ರೂಪಾಯಿ ಬಾಕಿ ಉಳಿದುಕೊಂಡಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಪ್ರಸ್ತುತ ತೆರಿಗೆಗೆ ಒಳಪಡುವ 1,80,450 ವಸತಿ, 33,732 ವಾಣಿಜ್ಯ ಮಳಿಗೆ ಹಾಗೂ 1,10,926 ಖಾಲಿ ನಿವೇಶನ ಸೇರಿದಂತೆ ಒಟ್ಟು 3 ಲಕ್ಷಕ್ಕೂ ಹೆಚ್ಚು ಆಸ್ತಿಗಳಿವೆ. ಇದರೊಂದಿಗೆ ಪಾಲಿಕೆಗೆ ಸಂಬಂಧಿಸಿದ 1513 ವಾಣಿಜ್ಯ ಬಾಡಿಗೆ ಮಳಿಗೆಗಳಿದ್ದು, ಇವುಗಳು ಪಾಲಿಕೆಯ ತೆರಿಗೆ ಆದಾಯದ ಮೂಲಗಳಾಗಿವೆ. ಇವುಗಳಿಂದ 2023-24ನೇ ಸಾಲಿನಲ್ಲಿ 115 ಕೋಟಿ ತೆರಿಗೆ ಸಂಗ್ರಹ ಗುರಿ ಇತ್ತು. ಈ ವರ್ಷ ಹಾಗೂ ಕಳೆದ ವರ್ಷದ ಅರಿಯರ್ಸ್ ಸೇರಿ 130 ಕೋಟಿ ಕೋಟಿ ತೆರಿಗೆ ಸಂಗ್ರಹವಾಗಬೇಕಿದೆ. ಇಲ್ಲಿಯವರೆಗೆ 107.93 ಕೋಟಿ ತೆರಿಗೆ ಸಂಗ್ರಹವಾಗಿದೆ. ಹಲವು ವರ್ಷಗಳ ಬಾಕಿ ತೆರಿಗೆ ಮತ್ತು ದಂಡ ಸೇರಿ 27 ಕೋಟಿ ರೂ.ಪಾಯಿಗೂ ಅಧಿಕ ತೆರಿಗೆ ಹಣ ಪಾಲಿಕೆಗೆ ಸಂದಾಯವಾಗಬೇಕಿದೆ.
ಇನ್ನೂ ತೆರಿಗೆ ಕಟ್ಟದವರಿಗೆ ಹಣ ಸಂಗ್ರಹಿಸಲು ಪಾಲಿಕೆ ನೋಟಿಸ್ ಜಾರಿ ಮಾಡಿದೆ. ಗಣ್ಯರು, ವಾಣಿಜ್ಯೋದ್ಯಮಿಗಳು ಸೇರಿದಂತೆ ಪ್ರತಿಷ್ಠಿತ ವ್ಯಕ್ತಿಗಳು ಕೋಟ್ಯಂತರ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಇದರ ನೇರ ಪರಿಣಾಮ ಮಹಾನಗರದ 11 ಲಕ್ಷಕ್ಕೂ ಹೆಚ್ಚು ಜನರ ಮೇಲೆ ಬೀಳುತ್ತಿದೆ. ಪಾಲಿಕೆಗೆ ನಿರೀಕ್ಷಿತ ಮೊತ್ತ ಬಾರದ ಕಾರಣ ಅಭಿವೃದ್ಧಿಯೂ ಕುಂಠಿತವಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ್ ಉಳ್ಳಾಗಡ್ಡಿ, ನಮ್ಮ ನಿರೀಕ್ಷೆಯಂತೆ ಪಾಲಿಕೆಯ ಕರ ವಸೂಲಿ ಕಾರ್ಯ ನಡೆಯುತ್ತಿದೆ. ಆದರೇ ಕಳೆದ ವರ್ಷದ ತೆರಿಗೆ ಹಾಗೂ ಬಾಕಿ ಸೇರಿ 27 ಕೋಟಿ ಬಾಕಿ ತೆರಿಗೆ ಇದೆ. ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಈಗಾಗಲೇ ಹಲವರು ಬಾಕಿ ತುಂಬುತ್ತಿದ್ದು, ಫೆಬ್ರವರಿ ಕೊನೆ ಹಾಗೂ ಮಾರ್ಚ್ ವರೆಗೆ ಅವಕಾಶ ನೀಡಲಾಗಿದೆ. ಕೆಲವರು ಕೋಟಿಗಟ್ಟಲೇ ಬಾಕಿ ಉಳಿಸಿಕೊಂಡಿದ್ದು, ಅವರಿಗೂ ಅವಕಾಶ ನೀಡಲಾಗಿದೆ. 50 ಲಕ್ಷದವರೆಗೆ ಪಾರ್ಟ್ ಪೇಮೆಂಟ್ ಮಾಡಲು ಅನುವು ಮಾಡಿಕೊಡಲಾಗಿದೆ. ದೊಡ್ಡ ಉದ್ಯಮಿದಾರರು ತೆರಿಗೆ ತುಂಬುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : 11.51 ಕೋಟಿ ರೂ. ಆಸ್ತಿ ತೆರಿಗೆ ಬಾಕಿ: ರಾಕ್ಲೈನ್ ಮಾಲ್ ಸೀಜ್ ಮಾಡಿದ ಬಿಬಿಎಂಪಿ ಅಧಿಕಾರಿಗಳು