ಹುಬ್ಬಳ್ಳಿ: ನಗರದ ಕಾರವಾರ ರಸ್ತೆಯಲ್ಲಿರುವ ಕೆಂಪಕೆರೆಯನ್ನು ಪ್ರವಾಸಿತಾಣವಾಗಿ ಪುನರಾಭಿವೃದ್ಧಿ ಮಾಡುವ ಕಾಮಗಾರಿ ಬಹುತೇಕ ಪೂರ್ಣವಾಗಿದೆ. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಹೊಸ ರೂಪ ಪಡೆದು ಇನ್ನೇನು ಉದ್ಘಾಟನೆಯಾಗಬೇಕಿದ್ದ ಕೆಂಪಕೆರೆ ಮತ್ತೆ ಕಳೆಗುಂದುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
9 ಕೋಟಿ ರೂ ವೆಚ್ಚ: ಪ್ರವಾಸೋದ್ಯಮ ಇಲಾಖೆ 5 ಕೋಟಿ, ಹು-ಧಾ ಮಹಾನಗರ ಪಾಲಿಕೆ 15ನೇ ಹಣಕಾಸು ಅನುದಾನದಡಿ 1.50 ಕೋಟಿ ಹಾಗೂ ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದಿಂದ 3.50 ಕೋಟಿ ಸೇರಿ ಒಟ್ಟು 9 ಕೋಟಿ ರೂ. ವೆಚ್ಚದಲ್ಲಿ ಇದನ್ನು ಪುನರಾಭಿವೃದ್ಧಿ ಮಾಡಲಾಗುತ್ತಿದೆ.
ಪ್ರವಾಸಿ ತಾಣವಾಗಿ ಕೆಂಪಕೆರೆ ಅಭಿವೃದ್ಧಿ: ಈ ಕೆರೆಯನ್ನು ಪ್ರವಾಸೋದ್ಯಮ ತಾಣವಾಗಿಸುವ ಉದ್ದೇಶದಿಂದ ಈಗಾಗಲೇ ಕೆರೆ ಸ್ವಚ್ಛಗೊಳಿಸಿ ಹೂಳೆತ್ತಲಾಗಿದೆ. ವಾಕಿಂಗ್ ಪಾತ್, ಪ್ರವೇಶ ದ್ವಾರ ನಿರ್ಮಾಣದ ಜೊತೆಗೆ ಹತ್ತಾರು ಬಗೆಯ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ಉದ್ಯಾನದ ಸುತ್ತಲೂ ತಡೆಗೋಡೆ ನಿರ್ಮಾಣ, ವಿದ್ಯುತ್ ದೀಪಗಳು, ಫುಡ್ ಕೋರ್ಟ್ ನಿರ್ಮಿಸಲಾಗಿದೆ. ಅರ್ಬನ್ ಫಾರೆಸ್ಟ್ ಪ್ರದೇಶ ನಿರ್ಮಾಣ, ಚಿಕ್ಕ ಮಕ್ಕಳಿಗೆ ಆಡಲು ವಿವಿಧ ಆಟದ ಸಾಮಗ್ರಿಗಳು, ಪಾರ್ಕಿಂಗ್, ಕೆರೆಯ ಸೌಂದರ್ಯ ಸವಿಯಲು ಮೂರು ಕಡೆ ಸೇತುವೆ, ಬೋಟಿಂಗ್ ವ್ಯವಸ್ಥೆಯನ್ನೂ ಮಾಡಲಾಗಿದೆ.
ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಸಣ್ಣ ಪುಟ್ಟ ಕೆಲಸ ಬಾಕಿ ಇದೆ. ಇದೇ ನವೆಂಬರ್ನಲ್ಲಿ ಉದ್ಘಾಟನೆ ಕೂಡ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಿಲ್ಲ. ಈ ಮಧ್ಯೆ ಸದ್ಯ ಸದ್ಯ ಕೆರೆಯಲ್ಲಿ ಅಂತರಗಂಗೆ ಬೆಳೆದು ಇಡೀ ಕೆರೆಯನ್ನು ಆವರಿಸಿದೆ. ಆವರಣದಲ್ಲಿ ಗಿಡಗಂಟಿಗಳು ಬೆಳೆದಿದ್ದು, ಹಳೆಯ ಕೆರೆಯಂತೆಯೇ ಕಂಡುಬರುತ್ತಿದೆ. ಉದ್ಯಾನದಲ್ಲಿ ಕಸದರಾಶಿ, ವಿದ್ಯುತ್ ಕಂಬಗಳು ತುಕ್ಕು ಹಿಡಿದಿರುವದು, ಹಸಿರಿನಿಂದ ಕಂಗೊಳ್ಳಿಸಬೇಕಾದ ಪಾರ್ಕ್ ಒಣಗುತ್ತಿರುವುದರಿಂದ ಕೆರೆ ಕಳೆದುಕೊಳ್ಳುತ್ತಿದೆ.
ಈ ಕುರಿತಂತೆ ಮಹಾನಗರ ಪಾಲಿಕೆ ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ವಿಜಯಕುಮಾರ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದು, ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿಪಡಿಸಲಾಗಿದೆ. ಪ್ರವಾಸಿಗರನ್ನು ಸೆಳೆಯಲು ಎಲ್ಲಾ ಸೌಲಭ್ಯ ಕಲ್ಪಿಸಲಾಗಿದೆ. ಬೋಟಿಂಗ್, ವ್ಯೂ ಪಾಯಿಂಟ್, ಫುಡ್ ಕೋರ್ಟ್, ಒಂದು ಕಿ.ಮೀ ಕೆರೆಯ ಸುತ್ತ ಪಾತ್ ವೇ, ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಮಕ್ಕಳಿಗೆ ಆಟದ ಸಾಮಗ್ರಿಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಸದ್ಯದಲ್ಲೇ ಶಾಸಕ ಪ್ರಸಾದ ಅಬ್ಬಯ್ಯ ಅವರ ಜೊತೆ ಚರ್ಚಿಸಿ ಆದಷ್ಟು ಬೇಗ ಉದ್ಘಾಟನೆ ಮಾಡುವುದಾಗಿ ತಿಳಿಸಿದರು.
ಕೆರೆ ನಿರ್ವಹಣೆಗೆ ಟೆಂಡರ್: ಉದ್ಘಾಟನೆಯಾದ ಬಳಿಕ ಅದರ ನಿರ್ವಹಣೆಗೆ ಟೆಂಡರ್ ಕರೆಯಲಾಗುವುದು. ಸಾರ್ವಜನಿಕರಿಗೆ ಬೆಳಿಗ್ಗೆ ಹಾಗೂ ಸಂಜೆ ವಾಯುವಿಹಾರಕ್ಕೆ ಉಚಿತ ಪ್ರವೇಶ ಇರಲಿದೆ. ಇನ್ನೂ ಮಧ್ಯಾಹ್ನ ಬರುವವರಿಗೆ ಶುಲ್ಕ ನಿಗದಿಪಡಿಸಲಾಗುವುದು. ಇದರಿಂದ ಸಂಗ್ರಹವಾಗುವ ಹಣದಿಂದ ನಿರ್ವಹಣೆ ಹಾಗೂ ಸಿಬ್ಬಂದಿಗೆ ಸಂಬಳ ನೀಡಲಾಗುವುದು ಎಂದು ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ವಿಜಯಕುಮಾರ್ ತಿಳಿಸಿದರು.
ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕೆರೆ ಅಭಿವೃದ್ಧಿ ಮಾಡಲಾಗಿದೆ. ಆದ್ರೆ ಕೆರೆಯಲ್ಲಿ ಕಳೆ ತುಂಬಿದೆ. ಇಲ್ಲಿನ ಉಪಕರಣಗಳು ತುಕ್ಕು ಹಿಡಿಯುವ ಹಂತಕ್ಕೆ ಬಂದಿವೆ. ಸರ್ಕಾರ ಹಾಗೂ ಮಹಾನಗರ ಪಾಲಿಕೆ ಕೂಡಲೇ ಉದ್ಘಾಟನೆ ಮಾಡಿ ಸಾರ್ವಜನಿಕರಿಗೆ ಮುಕ್ತ ಮಾಡಬೇಕು ಎಂದು ಸ್ಥಳೀಯ ಮಂಜುನಾಥ ಹೆಬಸೂರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಗೂಗಲ್ ಮ್ಯಾಪ್ ನಂಬಿ ಹಾದಿತಪ್ಪಿದರು: ರಾತ್ರಿಯಿಡೀ ಖಾನಾಪುರ ದಟ್ಟಾರಣ್ಯದಲ್ಲಿ ಕಾಲ ಕಳೆದ ಬಿಹಾರಿ ಕುಟುಂಬ