ಹುಬ್ಬಳ್ಳಿ: ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಹತ್ಯೆಯಾದ ನೇಹಾ ಹಿರೇಮಠ ಮತ್ತು ಅಂಜಲಿ ಅವರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ನೀಡಿದರು. ಇಲ್ಲಿನ ಬಿಡ್ನಾಳ ಬಸವ ನಗರದಲ್ಲಿರುವ ಯುವತಿ ನೇಹಾ ಹಿರೇಮಠ ನಿವಾಸಕ್ಕೆ ಆಗಮಿಸಿ, ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ನೇಹಾ ತಂದೆ ನಿರಂಜನ ಹಿರೇಮಠ ದಂಪತಿ ಅವರೊಂದಿಗೆ ಘಟನೆಯ ಕುರಿತು ಮಾಹಿತಿ ಪಡೆದರು.
ಘಟನೆ ಬಗ್ಗೆ ಮಾಹಿತಿ ಬಂದ ತಕ್ಷಣ ಸಚಿವರು, ಶಾಸಕರು ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೆ. ಪ್ರಕರಣದ ಸಂಪೂರ್ಣ ಮಾಹಿತಿ ಪಡೆದುಕೊಂಡಿರುವೆ ಎಂದು ಗೃಹ ಸಚಿವರು ತಿಳಿಸಿದರು. ಈ ವೇಳೆ ನೇಹಾ ತಂದೆ, ಪಾಲಿಕೆ ಸದಸ್ಯ ನಿರಂಜನ ಮಾತನಾಡಿ, ತನಿಖೆ ವಿಳಂಬ ಆಗುತ್ತಿದೆ. ಆದಷ್ಟು ಬೇಗ ತನಿಖೆ ಪೂರ್ಣಗೊಳಿಸಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಈ ಪ್ರಕರಣದಲ್ಲಿ ಆರೋಪಿಯೊಂದಿಗೆ ಇನ್ನೂ ನಾಲ್ವರು ಹತ್ಯೆಗೆ ಸಹಕಾರ ನೀಡಿರುವ ಬಗ್ಗೆ ಈಗಾಗಲೇ ಪೊಲೀಸರಿಗೆ ದೂರು ಕೊಟ್ಟಿದ್ದರೂ ಅವರ ಮೇಲೆ ಈವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದರ ಬಗ್ಗೆ ಸಂಪೂರ್ಣ ತನಿಖೆ ಆಗಬೇಕೆಂದು ಒತ್ತಾಯಿಸಿದರು.
ಈ ಘಟನೆಯಿಂದಾಗಿ ನನಗೂ ಹಾಗೂ ಪಕ್ಷಕ್ಕೂ ತೀವ್ರ ಹಾನಿಯಾಗಿದೆ. ಮಗಳ ಹತ್ಯೆ ನಡೆದ ತಿಂಗಳೊಳಗೆ ಇದೇ ಮಾದರಿಯಲ್ಲಿ ನಾನು ಪ್ರತಿನಿಧಿಸಿದ ವಾರ್ಡ್ನಲ್ಲೇ ಅಂಜಲಿ ಅಂಬಿಗೇರ ಎಂಬ ಯುವತಿಯ ಕೊಲೆ ಆಗಿದೆ. ಇದರಿಂದ ಜನರಲ್ಲಿ ಪೊಲೀಸರ ಬಗ್ಗೆ ಇರುವ ಗೌರವ ಕುಂದಿದೆ. ಮುಂದೆ ಈ ರೀತಿಯ ಅಹಿತಕರ ಘಟನೆ ನಡೆಯದಂತೆ ಸರ್ಕಾರ ಕಠಿಣ ನಿರ್ಧಾರ ಕೈಗೊಳ್ಳುವಂತೆ ಮನವಿ ಮಾಡಿದರು.
ಈ ವೇಳೆ ಗೃಹ ಸಚಿವರು ಮಾತನಾಡಿ, ಈಗಾಗಲೇ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಆದಷ್ಟು ಬೇಗ ತನಿಖೆ ಪೂರ್ಣಗೊಳಿಸಿ ನ್ಯಾಯ ಒದಗಿಸಲಾಗುವುದು ಹಾಗೂ ಆರೋಪಿಯೊಂದಿಗೆ ಬೇರೆ ಯಾರಾದರೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಆ ಬಗ್ಗೆ ತನಿಖಾಧಿಕಾರಿಗಳಿಗೆ ಸೂಚನೆ ನೀಡಿ, ತನಿಖೆ ನಡೆಸಿ ತಪ್ಪಿತಸ್ಥರು ಇರುವುದು ಕಂಡುಬಂದರೆ ಅವರ ಮೇಲೂ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ನಂತರ ಗೃಹ ಸಚಿವರು ನೇಹಾ ಪಾಲಕರೊಂದಿಗೆ ಸುಮಾರು ಅರ್ಧ ತಾಸಿಗೂ ಹೆಚ್ಚು ಕಾಲ ಚರ್ಚಿಸಿದರು.
ಇನ್ನೊಂದೆಡೆ, ಅಂಜಲಿ ಹತ್ಯೆಗೆ ರಾಜ್ಯ ಸರ್ಕಾರದಿಂದ ನಮಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆಂದು ಹತ್ಯೆಯಾದ ಅಂಜಲಿ ಅಜ್ಜಿ ಗಂಗಮ್ಮಾ ಅಂಬಿಗೇರ ಹೇಳಿದರು.
ಗೃಹ ಸಚಿವರಾದ ಜಿ. ಪರಮೇಶ್ವರ ಅವರು ಭೇಟಿ ನೀಡಿ ಸಾಂತ್ವಾನ ಹೇಳಿದ ಬಳಿಕ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆ ನಡೆದ ದಿನ ಏನೇನು ಆಯಿತು ಅಂತಾ ಕೇಳಿದರು. ಅದರ ಬಗ್ಗೆ ನಾವು ಹೇಳಿಕೆ ನೀಡಿದ್ದೇವೆ. ನಮ್ಮ ಮೊಮ್ಮಗಳ ಕೊಂದ ಆರೋಪಿಗೆ ಗಲ್ಲು ಶಿಕ್ಷೆ ಕೊಡಿಸಲು ಕೇಳಿದ್ದೇವೆ. ಅದರ ಕುರಿತಾಗಿ ಅವರು ತನಿಖೆ ಮಾಡಿ ತಕ್ಕ ಶಿಕ್ಷೆ ನೀಡುವುದಾಗಿ ಭರವಸೆ ನೀಡಿದ್ದಾರೆ.
ಲೋಕಸಭಾ ಚುನಾವಣೆಯ ಬಳಿಕ ಮನೆ, ಶಿಕ್ಷಣದ ಜವಾಬ್ದಾರಿ ಹಾಗೂ ಸರ್ಕಾರಿ ನೌಕರಿ ಕೊಡಿಸುವ ಭರವಸೆ ನೀಡಿದ್ದಾರೆ. ಸಚಿವರ ಭರವಸೆ ಮೇಲೆ ನಮಗೆ ನಂಬಿಕೆ ಇದ್ದು, ನಮ್ಮ ಮೊಮ್ಮಗಳ ಜೀವ ತೆಗೆದವನಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿದ್ದೇವೆಂದರು.