ಬೆಳಗಾವಿ: "ಪಂಚಮಸಾಲಿ ಹೋರಾಟಗಾರರು ಕಾನೂನು ಕೈಗೆತ್ತಿಕೊಂಡಿದ್ದರು. ಹಾಗಾಗಿ ಅನಿವಾರ್ಯವಾಗಿ ಲಾಠಿಚಾರ್ಜ್ ಮಾಡಿದೆವು" ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಮೀಸಲಾತಿ ಹೋರಾಟದ ವಿಚಾರವಾಗಿ ಪ್ರತಿಕ್ರಿಯಿಸಿ, "ನಾವು ಪ್ರತಿಭಟನೆಗೆ ಅವಕಾಶ ಕೊಟ್ಟಿದ್ದೆವು. ಆದರೆ, ಅವರು ಟ್ರ್ಯಾಕ್ಟರ್ ರ‍್ಯಾಲಿ ಇಟ್ಟುಕೊಂಡಿದ್ದರು. ಹಾಗಾಗಿ ನಾವು ಅದನ್ನು ಬೇಡ ಎಂದಿದ್ದೆವು. ಶಾಂತಿಯುತ ಪ್ರತಿಭಟನೆ ಮಾಡಿ ಎಂದಿದ್ದೆವು. ನಮ್ಮ ಸಚಿವರನ್ನೂ ಅಲ್ಲಿಗೆ ಕಳುಹಿಸಿದ್ದೆವು. ಪಂಚಮಸಾಲಿ ಹೋರಾಟದ ಸ್ಥಳಕ್ಕೆ ಕಳುಹಿಸಿದ್ದೆವು. ಆದರೆ ಅವರೆಲ್ಲ ಮುಖ್ಯಮಂತ್ರಿ ಬರಬೇಕೆಂದು ಪಟ್ಟು ಹಿಡಿದರು" ಎಂದರು.
"ಅದಕ್ಕೆ 10 ಮಂದಿ ಬನ್ನಿ ಎಂದು ಅವಕಾಶ ಕೊಟ್ಟಿದ್ದೆವು. ಇದ್ದಕ್ಕಿದ್ದಂತೆ ಸ್ವಾಮೀಜಿಗಳು ಇಲ್ಲಿಗೆ ಬರೋಕೆ ಹೊರಟ್ರು. ಅವರು ಕೋರ್ಟ್ಗೂ ಹೋಗಿದ್ದರು. ನಿಯಮಗಳನ್ನು ಗಾಳಿಗೆ ತೂರಿದ್ರು. ಸುವರ್ಣಸೌಧಕ್ಕೆ ಮುತ್ತಿಗೆ ಹಾಕೋಕೆ ಹೊರಟ್ರು. ನಾವು ಮುತ್ತಿಗೆ ಅವಕಾಶ ಕೊಟ್ಟಿದ್ದರೆ ಕಷ್ಟ. ಬೇರೆಯವರು ಮುಂದೆ ಇಂತಹ ಕೆಲಸಕ್ಕೆ ಕೈಹಾಕ್ತಿದ್ರು. ನಾನು ಮೀಸಲಾತಿ ವಿಚಾರಕ್ಕೆ ಹೋಗಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾಗುತ್ತದೆ. ನಮ್ಮ ತಪ್ಪಿದ್ದರೆ ಕೇಳೋಣ" ಎಂದರು.
"ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿದ್ದಾರೆ. ಕಾನೂನನ್ನು ಕೈಗೆತ್ತಿಕೊಂಡಿದ್ದಾರೆ. ಕಲ್ಲು ಎಸೆಯೋಕೆ ಶುರು ಮಾಡಿದ್ರು. ಬ್ಯಾರಿಕೇಡ್ ಎಳೆದು ಹಾಕಿದ್ರು. ಇದೆಲ್ಲವಕ್ಕೂ ನಮ್ಮ ಬಳಿ ದಾಖಲೆಗಳಿವೆ. ವಿಡಿಯೋ ಕ್ಲಿಪಿಂಗ್ಗಳಿವೆ. ಹಾಗಾಗಿ ಲಾಠಿಚಾರ್ಜ್ ಅನಿವಾರ್ಯವಾಗಿತ್ತು. ಬ್ಯಾರಿಕೇಡ್ ಮುರಿದು ಹಾಕಿದಾಗ ಪೊಲೀಸರು ಸುಮ್ಮನಿರೋಕೆ ಸಾಧ್ಯವಾಗುತ್ತಾ?" ಎಂದು ಸಮರ್ಥಿಸಿಕೊಂಡರು.
ಇದನ್ನೂ ಓದಿ: ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್: ಬೆಳಗಾವಿ ಜಿಲ್ಲಾಧಿಕಾರಿ ಹೇಳಿದ್ದೇನು?