ಬೆಂಗಳೂರು: ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ ವತಿಯಿಂದ ಬೆಂಗಳೂರಿನ ರಾಜಾಜಿನಗರದ ರಾಮಮಂದಿರ ಮೈದಾನದಲ್ಲಿ ಹೋಳಿ ಹಬ್ಬ ಆಚರಿಸಲಾಯಿತು. ಬೆಂಗಳೂರಿನಲ್ಲಿ ವಾಸವಾಗಿರುವ ಉತ್ತರ ಕರ್ನಾಟಕ ಭಾಗದ ಜನರು ಪ್ರತಿ ವರ್ಷದಂತೆ ಈ ವರ್ಷವೂ ಕಾಮದಹನ ಮಾಡಿ, ಬಣ್ಣದೋಕುಳಿ ಆಡಿದರು.
ಹೋಳಿ ಹಬ್ಬದ ಕುರಿತು ಮಾತನಾಡಿದ ಮಹಾಸಂಸ್ಥೆ ಅಧ್ಯಕ್ಷ ಶಿವಕುಮಾರ್ ಮೇಟಿ, ನಮ್ಮ ಉತ್ತರ ಕರ್ನಾಟಕ ಭಾಗದ ಸಂಸ್ಕೃತಿಯ ಪ್ರತಿಬಿಂಬವಾಗಿ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕದ ಜನರು ನಮ್ಮ ಸಂಸ್ಕೃತಿ ಪರಂಪರೆ ಉಳಿಸಿಕೊಂಡು ಹೋಗಲು ಈ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಮಹಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಂಕರ ಪಾಗೋಜಿ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಹೋಳಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಐದು ದಿನಗಳ ಕಾಲ ಆಚರಿಸಲಾಗುತ್ತದೆ. ಕಾಮಣ್ಣನ ಮೂರ್ತಿ ಕೂರಿಸುವುದು, ಹೋಳಿ ಹಾಡು ಹಾಡುವುದು, ಕಾಮದಹನ ಮಾಡುವ ಕಾರ್ಯಕ್ರಮಗಳನ್ನು ಎಲ್ಲರೂ ಸೇರಿ ಆಚರಿಸುತ್ತಾರೆ. ಉತ್ತರ ಕರ್ನಾಟಕದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ಜನರು ನಮ್ಮ ಭಾಗದ ಪ್ರಮುಖ ಸಾಂಸ್ಕೃತಿಕ ಹಬ್ಬಗಳಾದ ರೊಟ್ಟಿ ಪಂಚಮಿ, ಬನ್ನಿ ಹಬ್ಬ(ವಿಜಯದಶಮಿ), ಹೋಳಿ ಹಬ್ಬವನ್ನು ಬೆಂಗಳೂರಿನಲ್ಲಿ ಆಚರಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಹಾಗೂ ನಮ್ಮ ಮುಂದಿನ ಪೀಳಿಗೆಗೆ ಅದನ್ನು ಪರಿಚಯಿಸುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಮಹಾಸಂಸ್ಥೆಯ ಕಾರ್ಯದರ್ಶಿ ಬಸಯ್ಯ ನಂದಿಕೋಲ್, ಶಿವಕುಮಾರ್ ಸರಶೆಟ್ಟಿ, ಭೀಮಪ್ಪ ನಾಲತ್ವಾಡ್ ಸೇರಿದಂತೆ ಮಹಾಸಂಸ್ಥೆಯ ಪದಾಧಿಕಾರಿಗಳು ಹಾಗೂ ಉತ್ತರ ಕರ್ನಾಟಕ ಭಾಗದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಆಚರಣೆಯಲ್ಲಿ ಪಾಲ್ಗೊಂಡಿದ್ದರು.
ಕಾರವಾರದಲ್ಲಿ ಸಾಂಪ್ರದಾಯಿಕ ಕಲೆ ಸುಗ್ಗಿ ಕುಣಿತ ಪ್ರಾರಂಭ: ಮತ್ತೊಂದೆಡೆ, ಹೋಳಿ ಹುಣ್ಣಿಮೆ ಹತ್ತಿರವಾದ ಬೆನ್ನಲ್ಲೇ ಉತ್ತರಕನ್ನಡ ಜಿಲ್ಲೆಯಲ್ಲಿ ಸುಗ್ಗಿಯ ಸಂಭ್ರಮ ಕಳೆಗಟ್ಟಿದೆ. ಜಿಲ್ಲೆಯಲ್ಲಿನ ಹಾಲಕ್ಕಿ, ಕೋಮಾರಪಂಥ, ಗ್ರಾಮ ಒಕ್ಕಲಿಗ, ನಾಮಧಾರಿ, ಅಂಬಿಗ, ಗುನಗಿ ಸೇರಿದಂತೆ ಅನೇಕ ಸಮಾಜದವರು ತಮ್ಮ ಸಾಂಪ್ರದಾಯಿಕ ಕಲೆಯಾದ ಸುಗ್ಗಿ ಕುಣಿತವನ್ನು ಹೋಳಿ ಹಬ್ಬಕ್ಕೂ ಮುಂಚಿತವಾಗಿ ಪ್ರಾರಂಭಿಸಿದ್ದಾರೆ. ಹಬ್ಬಕ್ಕೆ ಏಳು, ಒಂಬತ್ತು ಇಲ್ಲವೇ 11 ದಿನಗಳ ಮುನ್ನ ಸುಗ್ಗಿ ಕಟ್ಟುವ ತಂಡ ಬಳಿಕ ಊರೂರು ತಿರುಗಿ ತಮ್ಮ ಸಮಾಜದವರ ಮನೆಗೆ ತೆರಳಿ ಕುಣಿತದ ಪ್ರದರ್ಶನ ನಡೆಸುತ್ತಿದ್ದಾರೆ.
ಅದರಂತೆ ಅಂಕೋಲಾ ತಾಲೂಕಿನ ಅವರ್ಸಾದ ಕ್ಷತ್ರೀಯ ಕೋಮಾರಪಂಥದ ಸುಗ್ಗಿಯನ್ನು ಏಳು ವರ್ಷದ ಬಳಿಕ ಆರಂಭಿಸಲಾಗಿದೆ. ತಮ್ಮ ಸಮುದಾಯದವರು ಇರುವಲ್ಲಿಗೆ ತೆರಳಿ ಸುಗ್ಗಿ ಕುಣಿತವನ್ನು ಪ್ರದರ್ಶಿಸುತ್ತಿದ್ದಾರೆ. ಹೋಳಿ ಹುಣ್ಣಿಮೆಗೂ 9 ದಿನಗಳ ಮುಂಚೆ ಸುಗ್ಗಿ ಕುಣಿತವನ್ನು ಪ್ರಾರಂಭಿಸಲಾಗಿದೆ. ಈಗಾಗಲೇ ತಮ್ಮ ಸಮುದಾಯದವರು ಇರುವ ಕಡೆಯ ಮನೆಗಳ ಮುಂದೆ ತೆರಳಿ ಸುಗ್ಗಿ ಕುಣಿತ ಆಡಲಾಗುತ್ತಿದೆ.