ಬೆಂಗಳೂರು: ವಿಶ್ವ ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವ ಏಪ್ರಿಲ್ 15ಕ್ಕೆ ಪ್ರಾರಂಭವಾಗಲಿದ್ದು, ಸಕಲ ತಯಾರಿ ನಡೆಯುತ್ತಿದೆ. ತಿಗಳರಪೇಟೆಯಲ್ಲಿನ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಏಪ್ರಿಲ್ 25ರವರೆಗೆ ನಡೆಯುವ ಜಾತ್ರಾ ಮಹೋತ್ಸವವು ಲಕ್ಷಾಂತರ ಜನರನ್ನು ಆಕರ್ಷಿಸಲಿದೆ.
ಕರಗವು ಕರ್ನಾಟಕದ ಪ್ರಸಿದ್ಧ ಜಾನಪದ ಆಚರಣೆಯಾಗಿದ್ದು, ಆದಿಶಕ್ತಿ ದ್ರೌಪದಿಯನ್ನು, ವಹ್ನಿಕುಲ ಕ್ಷತ್ರಿಯ ಜನಾಂಗ ಆರಾಧಿಸುತ್ತದೆ. ಶತಮಾನಗಳ ಇತಿಹಾಸ ಹೊಂದಿರುವ ವಿಶ್ವಪ್ರಸಿದ್ಧ ಬೆಂಗಳೂರು ಕರಗಕ್ಕೆ ತನ್ನದೇ ಆದ ವಿಶೇಷ ಮಹತ್ವವಿದೆ. ಮೈಸೂರು ದಸರಾದಂತೆಯೇ ಬೆಂಗಳೂರು ಕರಗವೂ ಕೂಡ ರಾಜ್ಯದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಈಗಾಗಲೇ ಕರಗ ಮಹೋತ್ಸವ ಸಂಬಂಧ ಪಾಲಿಕೆ ಸಭೆ ನಡೆದಿದೆ. ದೇವಸ್ಥಾನ ಸಮಿತಿಯಿಂದ ಕೂಡ ಇನ್ನೊಂದು ವಾರದಲ್ಲಿ ಸಭೆ ನಡೆಸಿ, ತಯಾರಿಯ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ.
ಪ್ರತಿದಿನ ಪೂಜಾ ಕೈಂಕರ್ಯ: ಈ ಬಾರಿಯೂ ಪೂಜಾರಿ ಎ.ಜ್ಞಾನೇಂದ್ರ ಅವರು ಕರಗ ಹೊರಲಿದ್ದಾರೆ. ಜ್ಞಾನೇಂದ್ರ ಅವರು 13ನೇ ಬಾರಿಗೆ ಬೆಂಗಳೂರು ಕರಗ ಹೊರುತ್ತಿದ್ದಾರೆ. ಈ ಕುರಿತು ಮುಜರಾಯಿ ಇಲಾಖೆ ಮತ್ತು ಧರ್ಮರಾಯಸ್ವಾಮಿ ದೇವಾಲಯದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಧ್ವಜಾರೋಹಣದ ಜೊತೆಗೆ ಏಪ್ರಿಲ್ 15ರ ರಾತ್ರಿ ಕರಗ ಪ್ರಾರಂಭವಾಗಲಿದೆ. ನಿತ್ಯ ಬೆಳಗ್ಗೆ ಮತ್ತು ರಾತ್ರಿ ಪೂಜೆಗಳು ಜರುಗಲಿದೆ. ಏ.20ರಂದು ಹೆಣ್ಣುಮಕ್ಕಳಿಂದ ಆರತಿ ದೀಪ ಹೊತ್ತು ತರುವ ಕಾರ್ಯಕ್ರಮವಿದೆ. 21ರಂದು ಹಸಿ ಕರಗ ಮಹೋತ್ಸವ, 22ಕ್ಕೆ ಪೊಂಗಲ್ ಸೇವೆ, 23ರ ಚೈತ್ರ ಪೂರ್ಣಿಮೆ ದಿನ ಮುಖ್ಯ ಕರಗ ಮಹೋತ್ಸವ ಜರುಗಲಿದೆ. ಏ.24ಕ್ಕೆ ಗಾವು ಹಾಗೂ 25ರಂದು ಧ್ವಜ ಅವರೋಹಣ ನಡೆಯಲಿದೆ.
ಸೂಕ್ತ ವ್ಯವಸ್ಥೆಗೆ ಸೂಚನೆ: ಮಹೋತ್ಸವದ ಕುರಿತು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪಾಲಿಕೆ ಕೇಂದ್ರ ಕಚೇರಿಯ ಪೂರ್ವಭಾವಿ ಸಭೆಯಲ್ಲಿ ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕ್ರಮ ವಹಿಸಬೇಕು. ಕರಗ ಶಕ್ತ್ಯೋತ್ಸವವು ಹೊರಡುವ ಮಾರ್ಗದ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಉತ್ಸವ ನಡೆಯುವ ಬೀದಿಗಳಲ್ಲಿ ದೀಪಗಳ ಅಳವಡಿಕೆ ವ್ಯವಸ್ಥೆ, ಪಾಲಿಕೆಯ ಆರೋಗ್ಯ ಇಲಾಖೆಯಿಂದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ನಿಯೋಜನೆ ಮಾಡಬೇಕು ಎಂದು ತಿಳಿಸಿದ್ದಾರೆ.
ಸ್ವಚ್ಛತಾ ನಿರ್ವಹಣೆ ದೃಷ್ಠಿಯಿಂದ ಘನತ್ಯಾಜ್ಯ ವಿಭಾಗದ ಅಧಿಕಾರಿ/ಸಿಬ್ಬಂದಿ ನಿಯೋಜಿಸಬೇಕು. ಭಕ್ತಾದಿಗಳು ಹಾಗೂ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯಗಳ ವ್ಯವಸ್ಥೆ ಮಾಡಬೇಕು. ಜಲಮಂಡಳಿ ವತಿಯಿಂದ ಒಳಚರಂಡಿಗಳನ್ನು ಸ್ವಚ್ಛಗೊಳಿಸಿ, ಎಲ್ಲೂ ಕೊಳಚೆ ನೀರು ಹೊರಬಾರದಂತೆ ಅಗತ್ಯ ಕ್ರಮ ವಹಿಸಬೇಕು. ಸಂಚಾರ ದಟ್ಟಣೆಯಾಗದಂತೆ ಮಾರ್ಗ ಬದಲಾವಣೆ ಹಾಗೂ ವಾಹನಗಳ ನಿಲುಗಡೆಗೆ ಸ್ಥಳ ನಿಗದಿಪಡಿಸುವಂತೆ ಸೂಚಿಸಿದ್ದಾರೆ.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸಿಸಿ ಕ್ಯಾಮರಾ, ಬೆಂಕಿಯಿಂದ ಅವಘಡಗಳು ಸಂಭವಿಸದಂತೆ ಅಗ್ನಿಶಾಮಕ ವ್ಯವಸ್ಥೆ ಕೈಗೊಳ್ಳಬೇಕು. ಭಕ್ತರು ಹಾಗೂ ಸಾರ್ವಜನಿಕರ ಭದ್ರತೆಯ ಹಿತದೃಷ್ಟಿಯಿಂದ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು ಎಂದು ತುಷಾರ್ ಗಿರಿನಾಥ್ ಪಾಲಿಕೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
''ಪ್ರತಿ ವರ್ಷ ಲಕ್ಷ ಲಕ್ಷ ಜನರು ಕರಗಕ್ಕೆ ಭೇಟಿ ನೀಡುತ್ತಿದ್ದಾರೆ. ನೀರಿನ ಅಭಾವದ ನಡುವೆ ಮಹೋತ್ಸವ ನಡೆಸುವ ಸವಾಲು ದೇವಸ್ಥಾನದ ಆಡಳಿತ ಮಂಡಳಿ ಮುಂದಿದೆ. ಅದಕ್ಕಾಗಿ ಹೆಚ್ಚುವರಿ ನೀರಿನ ಟ್ಯಾಂಕರ್ಗಳ ವ್ಯವಸ್ಥೆ ಸಹ ಮಾಡಲಾಗುತ್ತಿದೆ. ಸಾರ್ವಜನಿಕರು ಮತ್ತು ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಚಿಕ್ಕ ವಾಟರ್ ಫಿಲ್ಟರ್ ಜೊತೆಗೆ ದೊಡ್ಡ ಫಿಲ್ಟರ್ಗಳ ವ್ಯವಸ್ಥೆಯೂ ಇರಲಿದೆ'' ಎಂದು ಧರ್ಮರಾಯಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸತೀಶ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಒಂದೇ ತಿಂಗಳಲ್ಲಿ ಕೋಟ್ಯಾಧಿಪತಿಯಾದ ನಂಜುಂಡೇಶ್ವರ, ಹುಂಡಿಯಲ್ಲಿ 1.78 ಕೋಟಿ ಸಂಗ್ರಹ - Nanjundeshwara