ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ಮುಖ್ಯಮಂತ್ರಿ ಅವರ ಕುಟುಂಬಸ್ಥರಿಗೆ ಅಕ್ರಮವಾಗಿ 14 ನಿವೇಶನಗಳನ್ನು ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿರುವ ಅರ್ಜಿ ವಿಚಾರಣೆ ಗುರುವಾರಕ್ಕೆ ನಿಗದಿಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠದಲ್ಲಿ ವಿಚಾರಣೆಗೆ ಬರಲಿದೆ.
ಅರ್ಜಿಯ ಸಂಬಂಧ ಈ ಹಿಂದೆ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಆರೋಪ ಸಂಬಂಧ ಸಿದ್ದರಾಮಯ್ಯ ಸೇರಿ ಐವರು ಆರೋಪಿಗಳ ವಿರುದ್ಧ ವಿಶೇಷ ತನಿಖಾ ದಳ ಅಥವಾ ಬೇರಾವುದೇ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಖಾಸಗಿ ದೂರು ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿಂತೆ, ಆಗಸ್ಟ್ 29ರ ವರೆಗೂ ಆದೇಶ ಮುಂದೂಡುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೂಚಿಸಿತ್ತು. ಇದರಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿತ್ತು.
ಈ ಹಿಂದೆ ಮುಖ್ಯಮಂತ್ರಿಗಳ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಂಘ್ವಿ, ರಾಜ್ಯಪಾಲರ ಕಚೇರಿಯ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದರು. ಗುರುವಾರವೂ ಅವರ ವಾದ ಮುಂದುವರೆಯಲಿದೆ.
ಅರ್ಜಿಯಲ್ಲಿ ಏನಿದೆ: 2024ರ ಜುಲೈ 26 ರಂದು ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಂ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ (ಪಿಸಿ ಆ್ಯಕ್ಟ್) 17ಎ, 19 ಮತ್ತು ಭಾರತೀಯ ನ್ಯಾಯಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್)ಸೆಕ್ಷನ್ 218ರ ಅಡಿಯಲ್ಲಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವಂತೆ ಕೋರಿದ್ದಾರೆ. ಅದೇ ದಿನ ರಾಜ್ಯಪಾಲರು ಶೋಕಾಸ್ ನೋಟಿಸ್ ಜಾರಿ ಮಾಡಿದ್ದರು.
ಇದಕ್ಕೆ ಮುಖ್ಯಮಂತ್ರಿಗಳು ವಿವರವಾದ ಪ್ರತಿಕ್ರಿಯೆ ನೀಡಿದ್ದರು. ಜತೆಗೆ, ಸಂಪುಟದ ಸಲಹೆ ಹೊರತಾಗಿಯೂ ರಾಜ್ಯಪಾಲರು ತಮ್ಮ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿ ಆಗಸ್ಟ್ 16 ರಂದು ಆದೇಶ ಹೊರಡಿಸಿದ್ದಾರೆ. ಮುಖ್ಯಮಂತ್ರಿಗಳ ವಿವರವಾದ ಪ್ರತಿಕ್ರಿಯೆಯಲ್ಲಿ ಕಾನೂನು ಮತ್ತು ವಾಸ್ತವಿಕತೆಗಳನ್ನು ಸ್ಪಷ್ಟವಾಗಿ ವಿವರಿಸಿದ್ದರ, ಅವುಗಳನ್ನು ಪರಿಗಣಿಸದೆ ಅನುಮತಿ ನೀಡಲಾಗಿದೆ. ರಾಜ್ಯಪಾಲರ ಈ ನಡೆ ಸ್ಪಷ್ಟವಾಗಿ ಸ್ವಾಭಾವಿಕ ನ್ಯಾಯದ ಉಲ್ಲಂಘನೆ ಆಗಿದೆ. ವಿವೇಚನಾ ರಹಿತವಾಗಿದ್ದು, ಪಿಸಿ ಕಾಯ್ದೆಯ ಸೆಕ್ಷನ್ 17ಎ ಮತ್ತು 19ರ ಬಿಎನ್ಎಸ್ಎಸ್ ಸೆಕ್ಷನ್ 218ರ ನಿಬಂಧನೆಗಳಿಗೆ ವಿರುದ್ಧವಾಗಿದೆ.
ರಾಜ್ಯಪಾಲರು ಮುಖ್ಯಮಂತ್ರಿಗಳ ನೀಡಿದ್ದ ಪ್ರತಿಕ್ರಿಯೆನ್ನು ಉದ್ದೇಶ ಪೂರ್ವಕವಾಗಿ ನಿರ್ಲಕ್ಷಿಸಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ. ಇದೊಂದು ವಿವೇಚನಾರಹಿತ ಮತ್ತು ಆತುರದ ಹಾಗೂ ಅಸಾಂವಿಧಾನಿಕ ನಿರ್ಧಾರವಾಗಿದೆ. ಹೀಗಾಗಿ, ಈ ಆದೇಶವನ್ನು ಅಗತ್ಯ ದಾಖಲೆಗಳ ಪರಿಗಣಿಸದೆ ಹೊರಡಿಸಿದ್ದು, ರದ್ದುಮಾಡಬೇಕು. ಅಲ್ಲದೆ, ಈ ಆದೇಶಕ್ಕೆ ಮಧ್ಯಂತರ ಪರಿಹಾರ ನೀಡದಿದ್ದಲ್ಲಿ ಅರ್ಜಿದಾರರ ಘನತೆಗೆ ಸರಿಪಡಿಸಲಾಗದ ಹಾನಿಯಾಗಲಿದೆ. ಜತೆಗೆ ಮುಖ್ಯಮಂತ್ರಿಗಳ ಕಚೇರಿಯ ಕಾರ್ಯನಿರ್ವಹಣೆಗೂ ತೊಡಕಾಗಲಿದೆ. ಹೀಗಾಗಿ ರಾಜ್ಯಪಾಲರ ಆದೇಶವನ್ನು ಕಾರ್ಯರೂಪಕ್ಕೆ ತರುವುದಕ್ಕೆ ತಡೆ ನೀಡಬೇಕು ಎಂದು ಮಧ್ಯಂತರ ಪರಿಹಾರವನ್ನು ಕೋರಿದ್ದಾರೆ.
ಇದನ್ನೂ ಓದಿ: ಸಿಎಂ ಪತ್ನಿ ವಿರುದ್ಧ ದೂರು ನೀಡಿದ ಸ್ನೇಹಮಯಿ ಕೃಷ್ಣ: ಆತ ಒಬ್ಬ ಬ್ಲಾಕ್ ಮೇಲರ್ ಎಂದ ಲಕ್ಷ್ಮಣ್ - complaint against CM wife