ಬೆಂಗಳೂರು: ರಾಜ್ಯದ 17 ಖಾಸಗಿ ವೈದ್ಯಕೀಯ ಕಾಲೇಜುಗಳ ತಮ್ಮ ಮ್ಯಾನೇಜ್‌ಮೆಂಟ್ ಮತ್ತು ಎನ್‌ಆರ್‌ಐ ಕೋಟಾದ 212 ಸೀಟುಗಳನ್ನು ಸರ್ಕಾರಿ ಕೋಟಾಕ್ಕೆ ಒಪ್ಪಿಸುವಂತೆ ಹೈಕೋರ್ಟ್ ಏಕಸದಸ್ಯಪೀಠ ನೀಡಿದ್ದ ಆದೇಶಕ್ಕೆ ವಿಭಾಗೀಯಪೀಠ ಮಧ್ಯಂತರ ತಡೆ ನೀಡಿದೆ.
ಬೆಂಗಳೂರಿನ ವೈದೇಹಿ ವೈದ್ಯಕೀಯ ವಿಜ್ಞಾನಗಳು ಮತ್ತು ಸಂಶೋಧನಾ ಸಂಸ್ಥೆ ಸೇರಿದಂತೆ ಹಲವು ಕಾಲೇಜುಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾ.ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ಈ ಮಧ್ಯಂತರ ಆದೇಶ ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಡುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಜೊತೆಗೆ, ಏಕಸದಸ್ಯ ಪೀಠದ ಆದೇಶದಂತೆ ಖಾಸಗಿ ಕಾಲೇಜುಗಳು ನಾಲ್ಕು ವಾರದೊಳಗೆ ತಾವು ಎಷ್ಟು ಸೀಟುಗಳನ್ನು ಸರಂಡರ್ (ವಶಕ್ಕೆ ಒಪ್ಪಿಸುವುದು) ಮಾಡುತ್ತವೋ ಅಷ್ಟು ಸೀಟುಗಳಿಗೆ ಖಾಸಗಿ ಕಾಲೇಜುಗಳಿಗೆ ಸರ್ಕಾರಿ ಕೋಟಾಕ್ಕೆ ನಿಗದಿಪಡಿಸಿರುವ ಶುಲ್ಕಕ್ಕೂ ಮತ್ತು ಮ್ಯಾನೇಜ್‌ಮೆಂಟ್ ಮತ್ತು ಎನ್‌ಆರ್‌ಐ ಕೋಟಾದ ಶುಲ್ಕದ ನಡುವಿನ ವ್ಯತ್ಯಾಸದ ಮೊತ್ತವನ್ನು ಪಾವತಿಸಬೇಕು ಎಂದು ಪೀಠ ಆದೇಶಿಸಿದೆ.
ಒಂದು ವೇಳೆ ಖಾಸಗಿ ವೈದ್ಯಕೀಯ ಕಾಲೇಜುಗಳ ಮೇಲ್ಮನವಿಗಳು ವಜಾಗೊಂಡರೆ ಈ ವರ್ಷದ ಬದಲು ಮುಂದಿನ ಶೈಕ್ಷಣಿಕ ವರ್ಷ ಸೀಟುಗಳನ್ನು ಸರ್ಕಾರಿ ಕೋಟಾಕ್ಕೆ ಬಿಟ್ಟು ಕೊಡಬೇಕಾಗುತ್ತದೆ ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.
ಪ್ರಕರಣದ ಹಿನ್ನೆಲೆ : ಕೆಲವು ಖಾಸಗಿ ವೈದ್ಯಕೀಯ ಕಾಲೇಜುಗಳು ಯುಜಿಸಿ ಮತ್ತು ಎನ್ಎಂಸಿಯ ನಿರ್ದಿಷ್ಟ ನಿಯಮಗಳನ್ನು ಉಲ್ಲಂಘಿಸಿ ಕಡಿಮೆ ಶ್ರೇಯಾಂಕದ ವಿದ್ಯಾರ್ಥಿಗಳನ್ನು ಎಂಬಿಬಿಎಸ್ ಕೋರ್ಸ್ಗಳಿಗೆ ಪ್ರವೇಶ ಮಾಡಿಕೊಂಡಿದ್ದವು. ಆ ಹಿನ್ನೆಲೆಯಲ್ಲಿ ಏಕಸದಸ್ಯಪೀಠ ಕಳೆದ ಏ. 25ರಂದು ನಿಯಮ ಬಾಹಿರವಾಗಿ ವಿದ್ಯಾರ್ಥಿಗಳನ್ನು ಪ್ರವೇಶ ಮಾಡಿಕೊಂಡ ಹಿನ್ನೆಲೆ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ 17 ಕಾಲೇಜುಗಳು ತಮ್ಮ ಮ್ಯಾನೇಜ್‌ಮೆಂಟ್ ಹಾಗೂ ಎನ್‌ಆರ್‌ಐ ಕೋಟಾದಿಂದ 212 ವೈದ್ಯಕೀಯ ಸೀಟುಗಳನ್ನು ಸರ್ಕಾರಿ ಕೋಟಾಕ್ಕೆ ಒಪ್ಪಿಸಬೇಕು ಎಂದು ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಕಾಲೇಜುಗಳು ವಿಭಾಗೀಯ ಪೀಠದ ಮೊರೆ ಹೋಗಿದ್ದವು.
ವಿಚಾರಣೆ ವೇಳೆ ಮೇಲ್ಮನವಿದಾರರ ಪರ ವಕೀಲರು, ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದ ಆರ್‌ಜಿಯುಎಚ್‌ಎಸ್ ಕ್ರಮ ಪ್ರಶ್ನಿಸಿ ಕಾಲೇಜುಗಳು ಮತ್ತು ವಿದ್ಯಾರ್ಥಿಗಳು ಏಕ ಸದಸ್ಯಪೀಠದ ಮುಂದೆ ಸಲ್ಲಿಸಿದ್ದ ಅರ್ಜಿಯಲ್ಲಿ ಆರ್ಜಿಯುಹೆಚ್ಎಸ್ ಮತ್ತು ಎನ್‌ಎಂಸಿ ಪರವಾಗಿ ಲಿಖಿತ ಆಕ್ಷೇಪಣೆಗಳನ್ನು ಸಲ್ಲಿಸದೆ ಕೇವಲ ಮೌಖಿಕವಾಗಿ ವಾದ ಮಂಡಿಸಲಾಗಿದೆ. ಅದನ್ನು ಪರಿಗಣಿಸಿ ಏಕ ಸದಸ್ಯಪೀಠ ಆದೇಶ ಹೊರಡಿಸಿರುವುದು, ಅದಕ್ಕೆ ಸಿಂಧುತ್ವವಿಲ್ಲ ಎಂದರು.
ಸರ್ಕಾರದ ಪರ ವಾದ ಮಂಡಿಸಿದ ವಕೀಲರು, 2024-25ನೇ ಸಾಲಿನ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ಮೇಲ್ಮನವಿ ಕುರಿತ ತೀರ್ಪಿಗಾಗಿ ವೈದ್ಯಕೀಯ ಶಿಕ್ಷಣ ಇಲಾಖೆ ಕಾಯುತ್ತಿದೆ ಎಂದು ವಿವರಿಸಿದ್ದರು.
ಇದನ್ನೂ ಓದಿ : ಮುಡಾ: ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿದ ಅನುಮತಿ ವಿರುದ್ಧ ನಾಳೆ ಹೈಕೋರ್ಟ್‌ಗೆ ಅರ್ಜಿ - MUDA Scam