ಬೆಂಗಳೂರು: ಸೊಸೆಗೆ ವರದಕ್ಷಿಣೆ ಕಿರುಕುಳ ಕೊಟ್ಟು, ಆಕೆಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಅತ್ತೆ ಹಾಗೂ ಆಕೆಯ ಪುತ್ರಿ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಪ್ರಕರಣ ಸಂಬಂಧ ದಾಖಲಾಗಿದ್ದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ದೊಡ್ಡಬಳ್ಳಾಪುರ ನಿವಾಸಿ ಕೆ.ಎಂ. ಸುನಂದಮ್ಮ ಮತ್ತು ಆಕೆಯ ಪುತ್ರಿ ಸೌಮ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರ ಪೀಠ ಈ ಆದೇಶ ನೀಡಿದೆ.
ಪ್ರಕರಣದಲ್ಲಿ ಅರ್ಜಿದಾರರ ಮೇಲಿನ ಆರೋಪಗಳು ಗಂಭೀರ ಸ್ವರೂಪದಿಂದ ಕೂಡಿದೆ. ಪ್ರಕರಣದ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಅರ್ಜಿದಾರರ ಮೇಲಿನ ಆರೋಪಗಳಿಗೆ ಎಳ್ಳಷ್ಟು ದಾಖಲೆಗಳಿಲ್ಲ ಎಂದು ಹೇಳಲಾಗದು. ಎಫ್‌ಐಆರ್ ರದ್ದುಪಡಿಸಿ ತನಿಖೆ ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ: 2024 ರ ಫೆಬ್ರವರಿ 25 ರಂದು ಸುನಂದಮ್ಮ ಅವರ ಸೊಸೆ ಚೈತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ಆಕೆಯ ತಾಯಿ ಭಾರತಿ, ಪೀಣ್ಯ ಠಾಣೆಗೆ ಫೆ. 26 ರಂದು ದೂರು ನೀಡಿದ್ದರು. ಚೈತ್ರಾಗೆ ಆಕೆಯ ಗಂಡ, ಅತ್ತೆ ಮತ್ತು ನಾದಿನಿ ವರದಕ್ಷಿಣೆಗೆ ಕಿರುಕುಳ ನೀಡಿದ್ದಾರೆ. ಪತಿ ನಿಂದಿಸಿ, ಹಲ್ಲೆ ಸಹ ನಡೆಸಿದ್ದಾರೆ. ಮನೆಯಿಂದ ಬಲವಂತದಿಂದ ಮನೆಯಿಂದ ಹೊರದಬ್ಬಿದ್ದರು. ಹಿತೈಷಿಗಳ ಸಲಹೆ ಮೇರೆಗೆ ಮತ್ತೆ ಮನೆಗೆ ಕರೆಯಿಸಿಕೊಂಡಿದ್ದರು. 2024 ರ ಫೆ.೨ 25 ರಂದು ಚೈತ್ರಾ ತನ್ನ ಅಜ್ಜಿಗೆ ಕರೆ ಮಾಡಿ, ಆರೋಪಿಗಳಿಂದ ಆಗುತ್ತಿರುವ ಕಿರುಕುಳದ ಬಗ್ಗೆ ಮಾಹಿತಿ ನೀಡಿದ್ದು, ಅದೇ ದಿನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.
ಈ ಆರೋಪದಲ್ಲಿ ಪೀಣ್ಯ ಠಾಣೆ ಪೊಲೀಸರು, ಅರ್ಜಿದಾರರ ಮೇಲೆ ಮಹಿಳೆಯು ಮೇಲೆ ಕ್ರೌರ್ಯ ಎಸಗಿದ, ಆತ್ಮಹತ್ಯೆಗೆ ಪ್ರಚೋದನೆ ಹಾಗೂ ವರದಕ್ಷಿಣೆ ಕಿರುಕುಳ ನೀಡಿದ ಆರೋಪದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಪ್ರಕರಣದಲ್ಲಿ ಸುನಂದಮ್ಮ, ಸೌಮ್ಯ ಕ್ರಮವಾಗಿ ಎರಡು ಹಾಗೂ ಮೂರನೇ ಆರೋಪಿಯಾಗಿದ್ದಾರೆ. ಈ ಎಫ್‌ಐಆರ್ ರದ್ದುಪಡಿಸಲು ಕೋರಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ಇದನ್ನೂ ಓದಿ: ಸಾಕ್ಷ್ಯಾಧಾರ ಕೊರತೆ: ಪೆಟ್ರೋಲಿಯಂ ಅಧಿಕಾರಿ ವಿರುದ್ಧ ಭ್ರಷ್ಟಾಚಾರ ಆರೋಪ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್ - High Court