ಬೆಂಗಳೂರು: ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಕ್ಷೇತ್ರ ಪುನರ್‌ವಿಂಗಡನೆ ಪೂರ್ಣಗೊಂಡಿದ್ದು, ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್‌ಗಳಿಗೆ ಚುನಾವಣೆ ನಡೆಸುವಂತೆ ಸೂಚಿಸಿದ್ದ ಏಕ ಸದಸ್ಯ ಪೀಠದ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಯೋಗೇಶ್ ಮತ್ತು ರಾಜ್ಯ ಚುನಾವಣಾ ಆಯೋಗ ಮತ್ತಿತರರು ಸಲ್ಲಿಸಿದ್ದ ನ್ಯಾಯಾಂಗ ನಿಂಧನೆ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರತಿಮಾ ಹೊನ್ನಾಪುರ, ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ಗಳ ಕುರಿತಂತೆ ಈಗಾಗಲೇ ಕ್ಷೇತ್ರ ಪುನರ್‌ವಿಂಗಡಣೆ ಪೂರ್ಣಗೊಂಡಿದೆ. ಆದರೆ, ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆ ನಡೆಯುತ್ತಿದ್ದು, ನಾಲ್ಕು ವಾರಗಳ ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರ ಯೋಗೇಶ್ ಪರ ವಕೀಲ ಮೊಹಮ್ಮದ್ ತಾಹೀರ್, 2021ರ ಮೇ ತಿಂಗಳಿನಿಂದ ಗ್ರಾಮ ಪಂಚಾಯತ್ ಮತ್ತು ತಾಲೂಕು ಪಂಚಾಯತ್‌ಗಳು ಆಡಳಿತಾಧಿಕಾರಿಗಳ ಕೈಲ್ಲಿವೆ. ನಾಲ್ಕು ವರ್ಷ ಕಳೆದಿದೆ ಈವರೆಗೂ ಚುನಾವಣೆ ನಡೆಸುವ ಸಂಬಂಧ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ವಿವರಿಸಿದರು.
ಇದಕ್ಕೆ ಪೀಠ, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳನ್ನು ರಾಜ್ಯ ಚುನಾವಣಾ ಆಯೋಗ ನಡೆಸಬೇಕು ಅಲ್ಲವೇ ಎಂದು ಪ್ರಶ್ನಿಸಿತು.
ಇದಕ್ಕೆ ರಾಜ್ಯ ಚುನಾವಣಾ ಆಯೋಗದ ಪರ ವಕೀಲರು, ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲು ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ಹಿಂಪಡೆದು ಪಂಚಾಯತ್ ರಾಜ್ ಕಾಯಿದೆಗೆ ತಿದ್ದುಪಡಿ ತರಲಾಗಿದೆ. ಇದನ್ನು ರಾಜ್ಯ ಚುನಾವಣಾ ಆಯೋಗ ಪ್ರಶ್ನಿಸಿ ಅರ್ಜಿ ಸಲ್ಲಿಸಿದೆ ಎಂದು ಪೀಠಕ್ಕೆ ವಿವರಿಸಿದರು.
ಕ್ಷೇತ್ರ ಪುನರ್ ವಿಂಗಡಣೆ ರಾಜ್ಯ ಚುನಾವಣಾ ಆಯೋಗದ್ದಾಗಿರಬೇಕು ಅಲ್ಲವೇ ಎಂದು ಪೀಠ ಮರು ಪ್ರಶ್ನಿಸಿತು. ಇದಕ್ಕೆ ಆಯೋಗದ ಪರ ವಕೀಲರು, ಈ ಹಿಂದೆ ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಮೀಸಲು ನಿಗದಿ ಆಯೋಗದ ಅಧೀನದಲ್ಲಿತ್ತು. ಇದೀಗ ತಿದ್ದುಪಡಿ ಮಾಡಿ ಈ ಅಧಿಕಾರವನ್ನು ರಾಜ್ಯ ಸರ್ಕಾರ ವಶಕ್ಕೆ ಪಡೆದುಕೊಂಡಿದೆ ಎಂದು ಪೀಠದ ಗಮನಕ್ಕೆ ತಂದರು.
ಈ ವೇಳೆ ಸರ್ಕಾರಿ ವಕೀಲರು, ಲೋಕಸಭೆ ಚುನಾವಣೆ ಸೇರಿದಂತೆ ವಿವಿಧ ಕಾರಣಗಳಿಂದ ವಿಳಂಬವಾಗಿದೆ. ಶೀಘ್ರದಲ್ಲಿಯೇ ಮೀಸಲಾತಿ ಪ್ರಕಟಿಸಿ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪೀಠಕ್ಕೆ ವಿವರಿಸಿದರು.
ಇದಕ್ಕೆ ಪೀಠ, ನಿಮಗೆ(ರಾಜ್ಯ ಸರ್ಕಾರ)ಕ್ಕೆ ಸಂವಿಧಾನದ ಪರಿಚ್ಚೇದ 73 ಮತ್ತು 74 ರ(ಸ್ಥಳೀಯ ಸಂಸ್ಥೆಗಳಿಗೆ ಸ್ವಾತಂತ್ರ್ಯ ನೀಡುವುದು, ಸ್ಥಳೀಯ ಸಂಸ್ಥೆಗಳು ಸ್ವಾತಂತ್ರ್ಯವಾಗಿ ಕಾರ್ಯನಿರ್ವಹಣೆಗೆ ಸರ್ಕಾರದಿಂದ ಸಹಕಾರ ನೀಡುವುದು) ತಿದ್ದುಪಡಿಯಿಂದ ವಿನಾಯತಿ ನೀಡಲಾಗಿದಿಯೇ ಎಂದು ಪ್ರಶ್ನಿಸಿತು. ಅದಕ್ಕೆ ವಕೀಲರು ಇಲ್ಲ ಎಂದು ಪೀಠಕ್ಕೆ ತಿಳಿಸಿದರು. ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಸೆಪ್ಟಂಬರ್ 5ಕ್ಕೆ ವಿಚಾರಣೆ ಮುಂದೂಡಿತು.
ಇದನ್ನೂ ಓದಿ: ಡಿಕೆಶಿ ಪ್ರಕರಣ: ಸಿಬಿಐ, ಯತ್ನಾಳ್ ಸಲ್ಲಿಸಿದ್ದ ಅರ್ಜಿಯ ತೀರ್ಪು ಕಾಯ್ದಿರಿಸಿದ ಹೈಕೋರ್ಟ್ - Disproportionate Assets Case