ಬೆಂಗಳೂರು: ಅಪರಾಧ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದು, ಸಾರ್ವಜನಿಕರ ನೆಮ್ಮದಿ ಹಾಳು ಮಾಡುತ್ತಿರುವ ಆರೋಪದ ಮೇಲೆ ಮಳವಳ್ಳಿ ತಾಲೂಕಿನ ಹಲಗೂರು ಟೌನ್ ನಿವಾಸಿ ಆರ್.ಪ್ರಮೋದ್ ಎಂಬುವರನ್ನು ಮಂಡ್ಯ ಜಿಲ್ಲೆಯಿಂದ ಕೋಲಾರಕ್ಕೆ ಮೂರು ತಿಂಗಳ ಕಾಲ ಗಡಿಪಾರು ಮಾಡಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.
ಗಡಿಪಾರು ಆದೇಶ ರದ್ದು ಕೋರಿ ಪ್ರಮೋದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ. ಅರ್ಜಿದಾರರಿಗೆ ಶೋಕಾಸ್ ನೋಟಿಸ್ ತಲುಪಿಸದೇ ಹಾಗೂ ಅವರ ವಿವರಣೆ ಕೇಳದೇ ಗಡಿಪಾರು ಆದೇಶ ಹೊರಡಿಸಿರುವುದು ಕಾನೂನು ಬಾಹಿರವಾಗಿದೆ. ಆದ್ದರಿಂದ, ಗಡಿಪಾರು ಆದೇಶ ರದ್ದುಪಡಿಸಲಾಗುತ್ತಿದೆ. ಆದರೆ, ಅರ್ಜಿದಾರರ ವಿರುದ್ಧ ಕ್ರಮ ಜರುಗಿಸುವುದು ಅಗತ್ಯವಾಗಿದ್ದರೆ, ಕಾನೂನು ಪ್ರಕಾರ ನಿಯಮಗಳನ್ನು ಅನುಸರಿಸಿ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸ್ವಾತಂತ್ರ್ಯವಿದೆ ಎಂದು ಆದೇಶದಲ್ಲಿ ನ್ಯಾಯಪೀಠ ತಿಳಿಸಿದೆ.
ಹಲಗೂರು ಠಾಣಾ ವ್ಯಾಪ್ತಿಯಲ್ಲಿ ಪ್ರಮೋದ್ ವಿರುದ್ಧ ಕೊಲೆ ಇನ್ನಿತರ ಅಪರಾಧ ಪ್ರಕರಣಗಳು ದಾಖಲಾಗಿವೆ. ಆತ ಸಾರ್ವಜನಿಕ ನೆಮ್ಮದಿಗೆ ಧಕ್ಕೆಯುಂಟು ಮಾಡುತ್ತಿದ್ದಾರೆ ಎಂದು ಹಲಗೂರು ಠಾಣೆ ಇನ್ಸ್‌ಪೆಕ್ಟರ್ ಮತ್ತು ಸಬ್ ಇನ್ಸ್‌ಪೆಕ್ಟರ್ ವರದಿ ಸಲ್ಲಿಸಿದ್ದರು.
ಇದನ್ನೂ ಓದಿ: ಅಂಗವೈಕಲ್ಯವಿರುವ ಪತಿ ತನ್ನ ಪತ್ನಿಗೆ ಜೀವನಾಂಶ ಕೊಡಬೇಕಿಲ್ಲ: ಹೈಕೋರ್ಟ್ - High Court
ಅದನ್ನು ಪರಿಗಣಿಸಿದ್ದ ಮಂಡ್ಯ ಉಪ ವಿಭಾಗದ ಸಹಾಯಕ ಉಪ ವಿಭಾಗಾಧಿಕಾರಿ, ಪ್ರಮೋದ್‌ನನ್ನು ಏಪ್ರಿಲ್ 2ರಿಂದ ಜುಲೈ 7ರವರೆಗೆ ಮೂರು ತಿಂಗಳ ಕಾಲ ಮಂಡ್ಯ ಜಿಲ್ಲೆಯಿಂದ ಕೋಲಾರಕ್ಕೆ ಗಡಿಪಾರು ಮಾಡಿ ಏಪ್ರಿಲ್ 2ರಂದು ಆದೇಶಿಸಿದ್ದರು. ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.
ವಿಚಾರಣೆ ವೇಳೆ ಪ್ರಮೋದ್ ಪರ ವಕೀಲ ಸಿ.ಎನ್. ರಾಜು, ''ಗಡಿಪಾರು ಮಾಡುವ ಮುನ್ನ ವಿವರಣೆ ಕೇಳಿ ಅರ್ಜಿದಾರರಿಗೆ ಶೋಕಾಸ್ ನೋಟಿಸ್ ತಲುಪಿಸಿಲ್ಲ. ಆತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಆದರೆ, ಆತನ ಹಲಗೂರಿನ ಮನೆಗೆ ಪೊಲೀಸರು ನೋಟಿಸ್ ಅಂಟಿಸಿ ಹೋಗಿದ್ದಾರೆ. ಆ ನೋಟಿಸ್‌ನಲ್ಲಿ ವಿವರಣೆ ನೀಡಲು ಉಪ ವಿಭಾಗಾಧಿಕಾರಿ ಮುಂದೆ ಪ್ರಮೋದ್ ಹಾಜರಾಗಬೇಕಿದ್ದ ದಿನಾಂಕವನ್ನೇ ನಮೂದಿಸಿಲ್ಲ. ಅವರಿಗೆ ತಿಳಿಯದಂತೆ ಗಡಿಪಾರು ಆದೇಶ ಮಾಡಲಾಗಿದ್ದು, ಮುಳಬಾಗಿಲು ಪೊಲೀಸರು ಬಲವಂತವಾಗಿ ಕರೆದೊಯ್ದಿದ್ದಾರೆ. ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರು ಸೂಕ್ತ ದಾಖಲೆ ನೀಡಿಲ್ಲ. ಕೇವಲ ಊಹಾಪೋಹದ ಮೇಲೆ ಉಪ ವಿಭಾಗಾಧಿಕಾರಿಗೆ ವರದಿ ನೀಡಿದ್ದಾರೆ. ಆದ್ದರಿಂದ ಗಡಿಪಾರು ಆದೇಶ ರದ್ದುಪಡಿಸಬೇಕು'' ಎಂದು ಕೋರಿದ್ದರು.
ಇದನ್ನೂ ಓದಿ: ವ್ಯಾಪಾರ ಪರವಾನಗಿ ನವೀಕರಣಕ್ಕೆ ಮಳಿಗೆ ಮಾಲೀಕನಿಂದ ಎನ್ಒಸಿಗೆ ಒತ್ತಾಯಿಸುವಂತಿಲ್ಲ: ಹೈಕೋರ್ಟ್ - High Court