ಬೆಂಗಳೂರು: ಸರ್ಕಾರದಿಂದ ಮಂಜೂರಾದ ಜಮೀನು ಮಾರಾಟ ಮಾಡಿದ ಬಳಿಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲ ಜಮೀನುಗಳ ವರ್ಗಾವಣೆ ನಿಷೇಧ) ಕಾಯಿದೆ(ಪಿಟಿಸಿಎಲ್) ಅಡಿ ಜಮೀನಿನ ಹಕ್ಕು ಪುನರ್ ಸ್ಥಾಪಿಸಲು ಕೋರಿದ್ದ ಅರ್ಜಿ ತಿರಸ್ಕಾರಗೊಂಡಿದ್ದಲ್ಲಿ, ಅದೇ ಜಮೀನಿಗೆ ಸಂಬಂಧಿಸಿದಂತೆ ಮತ್ತೊಮ್ಮೆ ಹಕ್ಕು ಮರುಸ್ಥಾಪಿಸುವಂತೆ ಕೋರಲಾಗದು ಎಂದು ಹೈಕೋರ್ಟ್ ತಿಳಿಸಿದೆ.
ಚನ್ನಗಿರಿ ತಾಲೂಕಿನ ಮಂಗೇನಹಳ್ಳಿಯ ಚಂದ್ರಪ್ಪ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅರ್ಜಿದಾರರಿಗೆ (ಚಂದ್ರಪ್ಪ) 1962ರಲ್ಲಿ ಸರ್ಕಾರದಿಂದ ಮಂಜೂರಾದ ಜಮೀನನ್ನು 1964ರಲ್ಲಿ ಮಾರಾಟ ಮಾಡಿದ್ದಾರೆ. ಇದಾದ ಬಳಿಕ 1992ರ ಅಕ್ಟೋಬರ್ 16ರಂದು ಜಮೀನಿನ ಹಕ್ಕು ಪುನರ್ ಸ್ಥಾಪಿಸುವಂತೆ ಸಹಾಯಕ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದು, ಆ ಅರ್ಜಿ ತಿರಸ್ಕೃತಗೊಂಡಿದೆ. ಈ ಆದೇಶವನ್ನು ಸಂಬಂಧಪಟ್ಟ ವೇದಿಕೆಯಲ್ಲಿ ಪ್ರಶ್ನಿಸಿ ತಾರ್ಕಿಕ ಅಂತ್ಯ ಕಂಡುಕೊಳ್ಳಬಹುದಾಗಿತ್ತು. ಆದರೆ, ಈ ಪ್ರಕ್ರಿಯೆ ನಡೆಸದ ಪರಿಣಾಮ ಉಪವಿಭಾಗಾಧಿಕಾರಿಗಳ ಆದೇಶಕ್ಕೆ ಸಮ್ಮತಿ ಸೂಚಿಸಿದಂತಾಗಲಿದ್ದು, ಉಪವಿಭಾಗಾಧಿಕಾರಿಗಳ ಆದೇಶ ಅನುಷ್ಠಾನಗೊಂಡಂತಾಗಿದೆ. ಆದ್ದರಿಂದ ಜಮೀನಿನ ಹಕ್ಕನ್ನು ಪುನರ್ ಸ್ಥಾಪಿಸುವಂತೆ ಕೋರಿ ಮತ್ತೊಂದು ಅರ್ಜಿ ಸಲ್ಲಿಸುವ ಹಕ್ಕನ್ನು ಚಂದ್ರಪ್ಪ ಕಳೆದುಕೊಂಡಿದ್ದಾರೆ ಎಂದು ಪೀಠ ತಿಳಿಸಿದೆ.
ಆದರೆ, ಈ ಅಂಶವನ್ನು ಬಹಿರಂಗಪಡಿಸದೇ ಪುನಃ 2000ನೇ ಇಸವಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದು ಸತ್ಯವನ್ನು ಮರೆಮಾಚಿದಂತಾಗಿದೆ ಎಂದು ತಿಳಿಸಿದ ಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ದಾಖಲೆಗಳ ಡಿಜಿಟಲೀಕರಣಕ್ಕೆ ಆದೇಶ: ಈ ಪ್ರಕರಣದಲ್ಲಿ ದಾಖಲೆಗಳ ಕೊರತೆಯಿಂದ ಸಹಾಯಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳು ಒಂದೇ ಭೂಮಿಯ ಮೇಲೆ ಅನೇಕ ವಿಚಾರಣೆಗಳನ್ನು ನಡೆಸಿದ್ದಾರೆ. ಆದ್ದರಿಂದ ಈ ರೀತಿಯ ಪ್ರಕರಣಗಳಲ್ಲಿ ಜಮೀನಿನ ದಾಖಲೆಗಳನ್ನು (ಅರ್ಜಿದಾರರಿಗೆ ಮಂಜೂರಾದ ಪ್ರತಿ, ಮಾರಾಟ ಮಾಡಿದ ವಿವರ, ಆರ್‌ಟಿಸಿ, ಉಪವಿಭಾಗಾಧಿಕಾರಿಗಳಿಗೆ ಸಲ್ಲಿಸಿದ್ದ ಅರ್ಜಿ, ಈ ಅರ್ಜಿ ವಜಾಗೊಂಡಿರುವ ಮಾಹಿತಿ) ಡಿಜಿಟಲೀಕರಣಗೊಳಿಸಿ, ಅದಕ್ಕೆ ಎಲ್ಲ ದಾಖಲೆಗಳನ್ನು ಪರಸ್ಪರ ಹೈಪರ್‌ಲಿಂಕ್ ಮಾಡಬೇಕು ಎಂದು ನ್ಯಾಯಪೀಠ ಇದೇ ವೇಳೆ ಸೂಚನೆ ನೀಡಿದೆ.
ಪ್ರಕರಣದ ಹಿನ್ನೆಲೆ: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಂಗೇನಹಳ್ಳಿಯ ಸವೇ ನಂಬರ್ 26ರಲ್ಲಿ 6 ಎಕರೆ ಖುಷ್ಕಿ ಜಮೀನನ್ನು 1963ರ ನವೆಂಬರ್ 26ರಂದು ಸರ್ಕಾರ ಪರಿಶಿಷ್ಟ ಜಾತಿ, ಪಂಗಡ ವರ್ಗಕ್ಕೆ ಸೇರಿದ್ದ ಚಂದ್ರಪ್ಪ ಎಂಬುವರಿಗೆ ಮಂಜೂರು ಮಾಡಿದ್ದು, 15 ವರ್ಷಗಳ ಅವಧಿಗೆ ಭೂಮಿಯನ್ನು ಪರಾಭಾರೆ ಮಾಡುವಂತಿಲ್ಲ ಎಂಬ ಷರತ್ತನ್ನು ವಿಧಿಸಲಾಗಿತ್ತು.
ಆದರೆ, ಚಂದ್ರಪ್ಪ ಅವರು 1964ರ ಅಕ್ಟೋಬರ್ 19ರಂದು ದುಗ್ಗಮ್ಮ ಮತ್ತು ಲಕ್ಕಮ್ಮ ಎಂಬುವರಿಗೆ ತಲಾ ಮೂರು ಎಕರೆ ಜಮೀನನ್ನು ಮಾರಾಟ ಮಾಡಿದ್ದು, ಸಂಪೂರ್ಣ ಭೂಮಿಯನ್ನು ಪರಾಭಾರೆ ಮಾಡಿರುತ್ತಾರೆ. ಇದಾದ ಬಳಿಕ ತಮ್ಮ ಜಮೀನನ ಮೇಲಿನ ಹಕ್ಕನ್ನು ಪುನರ್‌ಸ್ಥಾಪಿಸುವಂತೆ ಕೋರಿ 2000ನೇ ಇಸವಿಯಲ್ಲಿ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಅದರಂತೆ ಉಪವಿಭಾಗಾಧಿಕಾರಿಗಳು ಜಮೀನಿನ ಮೇಲಿನ ಹಕ್ಕನ್ನು ಪುನರ್ ಸ್ಥಾಪಿಸಿ ಜಮೀನಿನ ಹಕ್ಕನ್ನು ಚಂದ್ರಪ್ಪ ಅವರಿಗೆ ನೀಡಿದ್ದರು.
ಈ ನಡುವೆ ಲಕ್ಕಮ್ಮ ಖರೀದಿಸಿದ್ದ 3 ಎಕರೆ ಜಮೀನನ್ನು ಮಾರ್ತಾಂಡಪ್ಪ ಎಂಬುವರಿಗೆ ಮಾರಾಟ ಮಾಡಿದ್ದರು. ಹೀಗಾಗಿ ಉಪವಿಭಾಗಾಧಿಕಾರಿಗಳ ಆದೇಶವನ್ನು ಮಾರ್ತಾಂಡಪ್ಪ ಪ್ರಶ್ನಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಜಿಲ್ಲಾಧಿಕಾರಿಗಳು ಉಪ ವಿಭಾಗಾಧಿಕಾರಿಗಳ ಆದೇಶವನ್ನು ಎತ್ತಿಹಿಡಿದು ಅರ್ಜಿ ವಜಾಗೊಳಿಸಿದ್ದರು. ಇದನ್ನು ಮಾರ್ತಾಂಡಪ್ಪ ಮತ್ತು ದುಗ್ಗಮ್ಮ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಅದನ್ನು ವಜಾಗೊಳಿಸಿ ಮರು ಪರಿಶೀಲನೆಗಾಗಿ ಪ್ರಕರಣವನ್ನು ಉಪವಿಭಾಗಾಧಿಕಾರಿಗಳಿಗೆ ಹಿಂದಿರುಗಿಸಿ ಕಾನೂನು ಪ್ರಕಾರ ಮುಂದಿನ ಆರು ತಿಂಗಳಲ್ಲಿ ಇತ್ಯರ್ಥಪಡಿಸಲು ನಿರ್ದೇಶನ ನೀಡಿ ಆದೇಶಿಸಿತ್ತು.
ಪುನಃ ಪ್ರಕರಣದ ವಿಚಾರಣೆ ನಡೆಸಿದ್ದ ಉಪವಿಭಾಗಾಧಿಕಾರಿಗಳು, ಸರ್ಕಾರದಿಂದ ಮಂಜೂರಾದ ಜಮೀನನ್ನು 15 ವರ್ಷ ಮಾರಾಟ ಮಾಡುವಂತಿಲ್ಲ ಎಂಬ ಷರತ್ತು ವಿಧಿಸಿದ್ದರೂ, ಅವಧಿಗಿಂತಲೂ ಮುನ್ನ ಮಾರಾಟ ಮಾಡಿರುವುದರಿಂದ ಜಮೀನನ್ನು ಮತ್ತೆ ಚಂದ್ರಪ್ಪ ಅವರ ಹೆಸರಿಗೆ ಮರು ಸ್ಥಾಪಿಸಿ ಆದೇಶಿಸಿದ್ದರು. ಈ ಆದೇಶವನ್ನು ರದ್ದುಪಡಿಸಿದ್ದ ಜಿಲ್ಲಾಧಿಕಾರಿಗಳು, ಮಾರ್ತಾಂಡಪ್ಪ ಮತ್ತು ದುಗ್ಗಮ್ಮ ಸುಮಾರು 49 ವರ್ಷಗಳ ಕಾಲ ಸ್ವಾಧೀನದಲ್ಲಿದ್ದು, ಅವರ ಹಕ್ಕು ಮುಂದುವರೆಯಲಿದೆ ಎಂದು ಆದೇಶಿಸಿದ್ದರು. ಈ ನಡುವೆ ಚಂದ್ರಪ್ಪ ಮೃತಪಟ್ಟಿದ್ದು, ಅವರ ಮಕ್ಕಳು ಮತ್ತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ನೆರಿಯ ಎಸ್ಟೇಟ್ ರೂರಲ್ ಇಂಡಸ್ಟ್ರೀ ಅಸೋಸಿಯೇಷನ್ನ ಜಮೀನು ಬಿಟ್ಟುಕೊಡಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ - High Court