ಬೆಂಗಳೂರು : ಕಾಫಿ ತೋಟದಲ್ಲಿ ಎಂಟು ಗಾಂಜಾ ಗಿಡ ಬೆಳೆದಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬನಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಪ್ರಕರಣದ ಆರೋಪಿಯಾಗಿರುವ ಕೆ. ಎಂ ರಾಜೇಂದ್ರ (55) ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ. ಜಿ ಉಮಾ ಅವರಿದ್ದ ರಜಾಕಾಲದ ಪೀಠ ಈ ಆದೇಶ ಮಾಡಿದೆ.
ಅರ್ಜಿದಾರನ ವಿರುದ್ಧದ ಆರೋಪ ಗಂಭೀರ ಸ್ವರೂಪದಿಂದ ಕೂಡಿದೆ. ತೋಟದಲ್ಲಿ ಎಂಟು ಗಾಂಜಾಗಿಡ ಬೆಳೆದಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡು ಸ್ಥಳವನ್ನು ಮಹಜರು ಮಾಡಿದ್ದಾರೆ. ಆದಾಗ್ಯೂ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಮುಂದಿನ ವಿಚಾರಣೆಗೆ ಅರ್ಜಿದಾರ ಅಗತ್ಯವಿಲ್ಲವಾಗಿದೆ. ಹಾಗಾಗಿ, ಆತನಿಗೆ ಜಾಮೀನು ನೀಡಲಾಗುತ್ತಿದೆ ಎಂದು ಆದೇಶದಲ್ಲಿ ನ್ಯಾಯಪೀಠ ಹೇಳಿದೆ.
ಆರೋಪಿಯು ಎರಡು ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ (ಶ್ಯೂರಿಟಿಗಳು) ನೀಡಬೇಕು. ಇದೇ ಮಾದರಿಯ ಅಪರಾಧ ಕೃತ್ಯದಲ್ಲಿ ಭಾಗಿಯಾಗಬಾರದು ಎಂದು ನ್ಯಾಯಪೀಠ ಷರತ್ತು ವಿಧಿಸಿದೆ. ಅಲ್ಲದೇ, ಆರೋಪಿ ಷರತ್ತುಗಳನ್ನು ಉಲ್ಲಂಘಿಸಿದರೆ ಜಾಮೀನು ರದ್ದತಿಗೆ ತನಿಖಾಧಿಕಾರಿಗಳು ವಿಚಾರಣಾ ನ್ಯಾಯಾಲಯವನ್ನು ಕೋರಬಹುದು. ಆರೋಪಿ ಒದಗಿಸುವ ಶ್ಯೂರಿಟಿಗಳ ವಿಳಾಸ ಮತ್ತು ದಾಖಲೆಗಳ ನೈಜತೆಯನ್ನು ಪರಿಶೀಲಿಸಲು ವಿಚಾರಣಾ ನ್ಯಾಯಾಲಯ ತನಿಖಾಧಿಕಾರಿಗೆ ನಿರ್ದೇಶಿಸಬಹುದು.
ಒಂದೊಮ್ಮೆ ಅಂತಹ ಸೂಚನೆಯನ್ನು ವಿಚಾರಣಾ ನ್ಯಾಯಾಲಯ ನೀಡಿದರೆ, ತನಿಖಾಧಿಕಾರಿಯು ಐದು ದಿನದಲ್ಲಿ ವರದಿ ಸಲ್ಲಿಸಬೇಕು. ಆ ವರದಿ ಬಗ್ಗೆ ವಿಚಾರಣಾ ನ್ಯಾಯಾಲಯ ತೃಪ್ತಿದಾಯಕವಾದಲ್ಲಿ ಅರ್ಜಿದಾರನನ್ನು ಜಾಮೀನು ಮೇಲೆ ಬಿಡುಗಡೆ ಮಾಡಬಹುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಪ್ರಕರಣ ಹಿನ್ನೆಲೆ : ಖಚಿತ ಮಾಹಿತಿ ಮೇರೆಗೆ ಚಿಕ್ಕಮಗಳೂರು ಸಿಇಎನ್ ಠಾಣಾ ಪೊಲೀಸರು, 2024ರ ಮಾ. 6ರಂದು ಬೆಳಗ್ಗೆ 8 ಗಂಟೆಗೆ ಆವತಿ ಹೋಬಳಿಯ ಕೆಳ ಹೋಲಗದ್ದೆ ಗ್ರಾಮದ ನಿವಾಸಿ ರಾಜೇಂದ್ರ ಎಂಬಾತನ ಕಾಫಿ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆಗ ಕಾಫಿ ಗಿಡಗಳ ಮಧ್ಯೆ ಮಾರಾಟ ಮಾಡುವ ಉದ್ದೇಶದಿಂದ 8 ಗಾಂಜಾ ಗಿಡ ಬೆಳೆದಿರುವುದು ಕಂಡುಬಂದಿತ್ತು.
ಅದರಂತೆ ಒಂದು ಸಾವಿರ ರು. ಬೆಲೆಬಾಳುವ 100 ಗ್ರಾಂ ನಷ್ಟು ಗಾಂಜಾ ಗಿಡ, ಅದರ ಹಸಿ ಬೇರು, ಕಾಂಡಾ, ಕಡ್ಡಿ ಮತ್ತು ಸೊಪ್ಪು, ಹೂವು, ಮೊಗ್ಗನ್ನು ವಶಪಡಿಸಿಕೊಂಡಿದ್ದ ಪೊಲೀಸರು ರಾಜೇಂದ್ರ ಅವರನ್ನು ಬಂಧಿಸಿದ್ದರು. ಗಾಂಜಾ ಗಿಡ ಬೆಳೆಸಿಕೊಡುವಂತೆ ಹೇಳಿದ್ದ ಅದೇ ಗ್ರಾಮದ ಲಕ್ಷ್ಮಣ್ ಎಂಬಾತನನ್ನು ಎರಡನೇ ಆರೋಪಿಯನ್ನಾಗಿಸಿದ್ದರು. ಜಾಮೀನು ಕೋರಿ ರಾಜೇಂದ್ರ ಹೈಕೋರ್ಟ್ ಮೊರೆ ಹೋಗಿದ್ದರು.
ಇದನ್ನೂ ಓದಿ : ಜೈಲಲಿದ್ದು ಬಂದರೂ ಬದಲಾಗದ ವ್ಯಕ್ತಿ: ಎರಡನೇ ಬಾರಿ ಗಾಂಜಾ ಮಾರಾಟ ಸಾಬೀತಾಗಿ 6 ವರ್ಷ ಕಠಿಣ ಶಿಕ್ಷೆ