ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಮಳೆಯಿಂದಾಗಿ ಭಾರೀ ಅನಾಹುತವನ್ನೇ ಸೃಷ್ಟಿಸಿದೆ. ಹಾಸನ, ಚಿಕ್ಕಮಗಳೂರು,ಮಂಗಳೂರು, ಉತ್ತರಕನ್ನಡದಲ್ಲಿ ವಿಪರೀತ ಮಳೆಯಾಗುತ್ತಿದ್ದು, ಗುಡ್ಡ ಕುಸಿತ ಉಂಟಾಗಿ ಈವರೆಗೂ 10 ಪ್ರಾಣಗಳು ಬಲಿಯಾಗಿವೆ. ರಸ್ತೆಗಳು, ಸೇತುವೆಗಳು, ಮನೆಗಳು ಹಾನಿಗೀಡಾಗಿವೆ.
ಅಂಕೋಲಾ ತಾಲೂಕಿನ ಶಿರೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳವಾರ ಸಂಭವಿಸಿದ ಭಾರಿ ಭೂಕುಸಿತದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ 10 ಮಂದಿ ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ಮನೆ ಸಮೀಪದ ಗುಡ್ಡ ಕುಸಿದು ಕಾರವಾರದಲ್ಲಿ ಮತ್ತೊಬ್ಬರು ಮೃತಪಟ್ಟಿದ್ದಾರೆ. ಅನಾಹುತ ಘಟನೆಗಳಲ್ಲಿ ಜೀವ ಹಾನಿಯ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಅಲ್ಲಿ ಭೂಕುಸಿತ ಉಂಟಾಗಿದೆ. ಇದರಲ್ಲಿ ಹಲವಾರು ಪ್ರಾಣಗಳು ಹಾರಿ ಹೋಗಿವೆ. ಮಣ್ಣಿನ ಅವಶೇಷಗಳಡಿ ಜನರು ಸಮಾಧಿಯಾಗಿದ್ದಾರೆ. ಇದು ಮಾನವ ನಿರ್ಮಿತ ವಿಪತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ. ರಸ್ತೆ ನಿರ್ಮಾಣ ಕಂಪನಿಯು ಯಾವುದೇ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿಲ್ಲ ಎಂದು ದೂರಿದ್ದಾರೆ.
ಉಳುವಾರೆ ಗ್ರಾಮದಲ್ಲಿ (ಗಂಗಾವಳಿ ನದಿ ಪ್ರದೇಶ) ಹಲವು ಮನೆಗಳಿಗೆ ನೀರು ನುಗ್ಗಿದ್ದರಿಂದ 14 ಜನರು ಗಾಯಗೊಂಡಿದ್ದಾರೆ. ಎಲ್ಲರನ್ನು ಕಾರವಾರ ಮತ್ತು ಕುಮಟಾದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅಧಿಕಾರಿಗಳು ನೆರೆ ಪೀಡಿತ ಪ್ರದೇಶಗಳಲ್ಲಿ ಮೊಕ್ಕಾಂ ಹೂಡಿದ್ದು, ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
5 ಲಕ್ಷ ಪರಿಹಾರ ಘೋಷಣೆ: ಮಳೆ ದುರಂತದಲ್ಲಿ ಜೀವ ಕಳೆದುಕೊಂಡ ಸಂತ್ರಸ್ತರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಮೃತಪಟ್ಟವರಲ್ಲಿ ಇತರ ರಾಜ್ಯದವರಾಗಿದ್ದರೂ, ಅವರಿಗೂ ಪರಿಹಾರ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಗೃಹ ಸಚಿವಾಲಯದ ರಾಷ್ಟ್ರೀಯ ಅಪರಾಧ ಮಾಹಿತಿ ಕೇಂದ್ರದ ಪ್ರಕಾರ ಕರ್ನಾಟಕದಲ್ಲಿ ಭೂಕುಸಿತದಿಂದ ಉಂಟಾದ ಸಾವುಗಳು ಸಂಖ್ಯೆ (2018-2022)
ವರ್ಷ | ಸಾವು |
2018 | 22 |
2019 | 21 |
2020 | 46 |
2021 | 2 |
2022 | 2 |
ಕೆಲವು ಪ್ರಮುಖ ಭೂಕುಸಿತ ದುರಂತಗಳು ಮತ್ತು ಸಾವಿನ ಸಂಖ್ಯೆ
- 07.07.2023: ಮಂಗಳೂರಿನ ನಂದಾವರ ಎಂಬಲ್ಲಿ ಗುಡ್ಡ ಕುಸಿದು ಮಹಿಳೆ ಸಾವಿಗೀಡಾಗಿದ್ದರು. ಹಲವು ಮನೆಗಳು ಮಣ್ಣಿನಡಿ ಹೂತು ಹೋಗಿದ್ದವು. ಭಾರಿ ಮಳೆಯಿಂದಾಗಿ ಬೆಟ್ಟದ ಒಂದು ಪಾರ್ಶ್ವವೇ ಕುಸಿದಿತ್ತು.
- 25.03.2023: ದಕ್ಷಿಣ ಕನ್ನಡದ ಸುಳ್ಯದಲ್ಲಿ ಉಂಟಾದ ಭೂಕುಸಿತದಲ್ಲಿ ಮೂವರು ವಲಸೆ ಕಾರ್ಮಿಕರು ಮೃತಪಟ್ಟಿದ್ದರು.
- 02.08.2022: ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ 6 ಮಂದಿ ಪ್ರಾಣ ಕಳೆದುಕೊಂಡಿದ್ದರು. ಭಾರಿ ಪ್ರಮಾಣದಲ್ಲಿ ರಸ್ತೆ ಸಂಪರ್ಕ ಕಡಿತವಾಗಿತ್ತು. ಅಂದಿನ ಮುಖ್ಯಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿ ಅವರು ರಸ್ತೆ ಪುನಃಶ್ಚೇತನಕ್ಕೆ ಸೂಚಿಸಿದ್ದರು.
- 07.07.2022: ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮಣ್ಣಿನಲ್ಲಿ ಸಿಲುಕಿ ಮೂವರು ಕಾರ್ಮಿಕರು ಮೃತಪಟ್ಟಿದ್ದರು. ಒಬ್ಬರು ಪವಾಡ ಸದೃಶವಾಗಿ ಬದುಕುಳಿದಿದ್ದ.
- 25.07.2021: ಧಾರಾಕಾರ ಮಳೆಯಿಂದಾಗಿ ಕರಾವಳಿ, ಮಲೆನಾಡು ಮತ್ತು ರಾಜ್ಯದ ಉತ್ತರ ಒಳನಾಡಿನ ಪ್ರದೇಶದ ಹಲವಾರು ಭಾಗಗಳಲ್ಲಿ ಪ್ರವಾಹ, ಭೂಕುಸಿತದಿಂದ 9 ಮಂದಿ ಸಾವನ್ನಪ್ಪಿದ್ದರು. ಮೂವರು ನಾಪತ್ತೆಯಾಗಿದ್ದರು.
- 06 ಆಗಸ್ಟ್, 2020: ಕಾವೇರಿ ನದಿ ನೀರು ಉಗಮಿಸುವ ಸ್ಥಳವಾದ ತಲಕಾವೇರಿಯಲ್ಲಿ ಭೂಕುಸಿತದ ಘಟನೆಗಳು ಸಂಭವಿಸಿದ್ದರು. ಕೊಡಗು ಜಿಲ್ಲೆಯ ಭಾಗಮಂಡಲದ ಬಳಿಯ ಬ್ರಹ್ಮಗಿರಿ ಬೆಟ್ಟದ ತಲಕಾವೇರಿ ದೇವಸ್ಥಾನದ ಬಳಿಯ ರಸ್ತೆ ಉದ್ದಕ್ಕೂ ಮಣ್ಣು ಕುಸಿದಿತ್ತು. ಇದರ ಜೊತೆಗೆ 2007, 2018, 2019 ಮತ್ತು 2020 ರಲ್ಲಿ ಸಂಭವಿಸಿದ ಘಟನೆಗಳಲ್ಲಿ 5 ಸಾವುಗಳು ದಾಖಲಾಗಿವೆ.
- 15 ರಿಂದ 17ನೇ ಆಗಸ್ಟ್, 2018: ಆ ವರ್ಷ ಕೊಡಗು ಜಿಲ್ಲೆಯಲ್ಲಿ ಕಳೆದ 20 ವರ್ಷಗಳಲ್ಲಿ ಸರಾಸರಿ ವಾರ್ಷಿಕ ಮಳೆಗಿಂತ ಶೇ 32ರಷ್ಟು ಹೆಚ್ಚು ಮಳೆ ಸುರಿದಿತ್ತು. ಇದರಿಂದ ಭಾರೀ ಪ್ರಮಾಣದಲ್ಲಿ ಭೂಕುಸಿತಗಳು ಸಂಭವಿಸಿದ್ದವು. ಜೀವಹಾನಿ, ಆಸ್ತಿ ಹಾನಿ, ಮೂಲಸೌಕರ್ಯ ಮತ್ತು ರಸ್ತೆ ಸಂಪರ್ಕಗಳು ಕಡಿತವಾಗೊಂಡಿತ್ತು. ಮಂಗಳೂರಿನಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಶಿರಾಡಿ ಮತ್ತು ಸಂಪಾಜೆ ರಸ್ತೆಯ ಸಂಪರ್ಕ ಪೂರ್ಣ ಕಡಿತವಾಗಿತ್ತು. ಈ ಪ್ರದೇಶದಲ್ಲಿ 105 ಭೂಕುಸಿತಗಳು ದಾಖಲಾಗಿದ್ದವು.
- 08 ನವೆಂಬರ್ 2010: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬಳಿ ಗುಡ್ಡ ಕುಸಿತ ಉಂಟಾಗಿ ರೈಲು ಹಳಿಯ ಮೇಲೆ ದೊಡ್ಡ ಬಂಡೆಗಳು ಉರುಳಿ ಬಿದ್ದಿದ್ದವು. ಮಂಗಳೂರು-ಮುಂಬೈ ಮತ್ಸ್ಯಗಂಧ ಎಕ್ಸ್‌ಪ್ರೆಸ್ ಬಂಡೆಗಳಿಗೆ ಡಿಕ್ಕಿ ಹೊಡೆದು ಒಬ್ಬ ವ್ಯಕ್ತಿ ಸಾವನ್ನಪ್ಪಿ, ಒಬ್ಬರು ಗಂಭೀರ, 14 ಮಂದಿ ಸಣ್ಣಪುಟ್ಟ ಗಾಯಕ್ಕೀಡಾಗಿದ್ದರು.
- 29 ಜುಲೈ, 2010: ಮಂಗಳೂರಿನ ಶಕ್ತಿನಗರ ಎಂಬಲ್ಲಿ ಭೂಕುಸಿತ ಉಂಟಾಗಿ, ಒಬ್ಬರು ಗಾಯಗೊಂಡಿದ್ದರು. ಅಂಬ್ಲಮೊಗರು ಗ್ರಾಮ ಪಂಚಾಯಿತಿಯ ಎಲಿಯಾರ್ಪದವು ಎಂಬಲ್ಲಿ ಆಗಸ್ಟ್ 1 ರಂದು ಸುರಿದ ಮಳೆಯಿಂದ ಭೂಕುಸಿತ ಉಂಟಾಗಿ ಮನೆ ಸಂಪೂರ್ಣ ಹಾನಿಗೀಡಾಗಿತ್ತು. 30ಕ್ಕೂ ಹೆಚ್ಚು ಮನೆಗಳು ಬಿರುಕು ಬಿಟ್ಟಿದ್ದವು.
- 26 ಜೂನ್, 2010: ಮಂಗಳೂರು ರೈಲು ನಿಲ್ದಾಣದಿಂದ 10 ಕಿ.ಮೀ ದೂರದಲ್ಲಿರುವ ಪಡೀಲ್ ಮತ್ತು ತೋಕೂರು ಜಂಕ್ಷನ್ ನಡುವಿನ ಪ್ರದೇಶದಲ್ಲಿ ಭೂಕುಸಿತ ಉಂಟಾಗಿತ್ತು. ಮಂಗಳೂರಿನ ಕುಲಶೇಖರ್ ಬಳಿ ಜೂನ್ 27 ರಂದು ಭೂಕುಸಿತ ಉಂಟಾಗಿತ್ತು. ಜೂನ್ 30 ರವರೆಗೆ ಈ ಭಾಗದ ರೈಲು ಸಂಚಾರ ಬಂದ್ ಆಗಿತ್ತು.
- 26 ಅಕ್ಟೋಬರ್ 2009: ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಭೂಕುಸಿತ ಉಂಟಾಗಿ ಓರ್ವ ಕಾರ್ಮಿಕ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿದ್ದರು.
- 2 ಅಕ್ಟೋಬರ್, 2009: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಡವಾಡ ಗ್ರಾಮದ ಮಡಿಬಾಗ್‌ನಲ್ಲಿ ಭಾರೀ ಮಳೆಯಿಂದ ಭೂಕುಸಿತ ಸಂಭವಿಸಿತ್ತು. ಒಂಬತ್ತು ಮನೆಗಳು ಮಣ್ಣಿನಡಿ ಹೂಯು ಹೋಗಿ 24 ಮಂದಿ ಜೀವಂತ ಸಮಾಧಿಯಾಗಿದ್ದರು. ಅಕ್ಟೋಬರ್ 2-3 ರಂದು ಸಂಭವಿಸಿದ ಹಲವು ಭೂಕುಸಿತಗಳಿಂದಾಗಿ ಕಾರವಾರ ಮತ್ತು ಅಂಕೋಲಾ ನಡುವಿನ ರಾಷ್ಟ್ರೀಯ ಹೆದ್ದಾರಿ 17 ಬಂದ್ ಆಗಿತ್ತು.
ಮೂಲ: ಆರ್ಕೆಸಿ
ಇದನ್ನೂ ಓದುಇ: ಶಿರೂರು ಗುಡ್ಡ ಕುಸಿತ: ಮಣ್ಣಿನಡಿ ಸಿಲುಕಿ ಏಳು ಜನರ ದಾರುಣ ಸಾವು, ಮುಂದುವರಿದ ಕಾರ್ಯಾಚರಣೆ - hill collapsed