ಉಡುಪಿ: ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಉಡುಪಿ ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ನಗರದಲ್ಲಿನ ಇಂದ್ರಾಣಿ ನದಿ ಕಾಲುವೆಗಳು ತುಂಬಿ ಹರಿಯುತ್ತಿದ್ದು, ಕೆಲವು ಕಡೆ ಕೃತಕ ನೆರೆ ಉಂಟಾಗಿದೆ.
ಉಡುಪಿ ನಗರಸಭೆ ವ್ಯಾಪ್ತಿಯ ಸಗ್ರಿ ವಾರ್ಡ್ ಕೀರ್ತಿ ನಗರ ಫಸ್ಟ್ ಕ್ರಾಸ್ನಲ್ಲಿರುವ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿ ನಷ್ಟ ಉಂಟಾಗಿದೆ. ಇಂದ್ರಾಣಿ ನದಿ ಕಾಲುವೆಗಳು ತುಂಬಿ ಹರಿಯುತ್ತಿರುವುದರಿಂದ ಗುಂಡಿಬೈಲು ಎಂಬಲ್ಲಿರುವ ತೆಂಗಿನ ತೋಟದಲ್ಲಿ ಕೃತಕ ನೆರೆ ಸಂಭವಿಸಿದೆ. ಉಡುಪಿ ಸಿಟಿ ಬಸ್ ನಿಲ್ದಾಣ ಸಮೀಪದ ಮಠದಬೆಟ್ಟು ಪರಿಸರದ ಕೆಲವು ಮನೆಗಳ ಆವರಣಕ್ಕೆ ನೀರು ನುಗ್ಗಿದೆ. ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದ ಸ್ಥಳಗಳಲ್ಲಿ ಕೃತಕ ನೆರೆ ಉಂಟಾಗಿದ್ದು, ಅಗ್ನಿಶಾಮಕ ತಂಡ ಮನೆಯವರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದರು.
ಜಿಲ್ಲೆಯಲ್ಲಿ ಮಳೆ - ಗಾಳಿಯಿಂದ 15ಕ್ಕೂ ಅಧಿಕ ಮನೆ, ಸೊತ್ತುಗಳಿಗೆ ಹಾನಿಯುಂಟಾದ ಮಾಹಿತಿಗಳು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಕಂಟ್ರೋಲ್ ರೂಮಿಗೆ ಬಂದಿವೆ. ಇದರಿಂದ ನಾಲ್ಕು ಲಕ್ಷ ರೂ.ಗಳಿಗೂ ಅಧಿಕ ನಷ್ಟ ಉಂಟಾಗಿರುವ ಅಂದಾಜು ಮಾಡಲಾಗಿದೆ. ಉಡುಪಿ ಸಮೀಪ ಕಡೆಕಾರು, ಬ್ರಹ್ಮಾವರ, ಕಾರ್ಕಳದ ಸಮೀಪ ಮಾಳ, ಕುಂದಾಪುರ ಸಮೀಪ ಗುಲ್ವಾಡಿ, ಬೈಂದೂರು, ಸಮೀಪದಲ್ಲಿ ಅನೇಕ ಮನೆಗಳಿಗೆ ಹಾನಿಗಳಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದರು.
ಚಾಂತಾರು ರೈಲ್ವೆ ಸೇತುವೆ ರಸ್ತೆ ಸ್ಥಗಿತ: ಭಾರಿ ಮಳೆಯಿಂದಾಗಿ ಬ್ರಹ್ಮಾವರ-ಪೇತ್ರಿ-ಹೆಬ್ರಿ ರಸ್ತೆಯಲ್ಲಿನ ಚಾಂತಾರು ಎಂಬಲ್ಲಿರುವ ರೈಲ್ವೆ ಸೇತುವೆ ಕೆಳಗಿನ ರಸ್ತೆಯು ನೀರು ತುಂಬಿದ್ದು, ಇದರಿಂದ ಈ ರಸ್ತೆಯಲ್ಲಿ ಸಂಚರಿಸುವ ಬಸ್ ಸೇರಿದಂತೆ ಇತರ ವಾಹನಗಳು ಹರಸಾಹಸ ಪಡುವಂತಾಯಿತು.
ಮೀನುಗಾರರಿಗೆ ಎಚ್ಚರಿಕೆ: ಜೂ.26ರಿಂದ 29ರವರೆಗೆ ಕರ್ನಾಟಕ ಕರಾವಳಿಯ ಜಿಲ್ಲೆಗಳಲ್ಲಿ ಥಂಡಿ ಹವೆ ಇರಲಿದ್ದು, ಗಂಟೆಗೆ 35ರಿಂದ 45 ಕಿ.ಮೀ. ವೇಗದ ಗಾಳಿ ಬೀಸಲಿರುವ ಕಾರಣ ಸಮುದ್ರ ಪ್ರಕ್ಷುಬ್ಧಗೊಳ್ಳಲಿದ್ದು, ಇದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ತಿರುವನಂತಪುರದ ಹವಾಮಾನ ಕೇಂದ್ರ ಎಚ್ಚರಿಕೆ ನೀಡಿದೆ.
ಅಲ್ಲದೇ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಸಮುದ್ರ ತೀರಗಳಲ್ಲಿ ಎತ್ತರದ ಅಲೆಗಳು ಏಳಲಿದ್ದು, ದಡವನ್ನು ಅಪ್ಪಳಿಸುವ ಸಾಧ್ಯತೆ ಇರುತ್ತದೆ. ಆದುದರಿಂದ ಮೂರು ಜಿಲ್ಲೆಗಳ ಕರಾವಳಿ ತೀರದಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ, ಮೀನುಗಾರಿಕಾ ದೋಣಿಗಳು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದ್ದು, ಹಲವು ಕಡೆಗಳಲ್ಲಿ ಸಮುದ್ರ ಕೊರೆತವೂ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆಯವರು ತಿಳಿಸಿದ್ದಾರೆ.
ಮೆಸ್ಕಾಂಗೆ 17.8ಲಕ್ಷ ರೂ. ನಷ್ಟ: ರಾತ್ರಿಯಿಂದ ಸುರಿಯುತ್ತಿರುವ ಗಾಳಿಮಳೆಯಿಂದಾಗಿ ಜಿಲ್ಲೆಯಾದ್ಯಂತ ಮೆಸ್ಕಾಂ ಇಲಾಖೆಯ ಸುಮಾರು 102 ವಿದ್ಯುತ್ ಕಂಬಗಳು ಧರೆಗೆ ಉರುಳಿ ಬಿದ್ದು ಹಾನಿ ಉಂಟಾಗಿದೆ. ಅದೇ ರೀತಿ 8 ಟ್ರಾನ್ಸ್‌ಪಾರ್ಮರ್‌ಗಳು, 1.6ಕಿ.ಮೀ. ಉದ್ದದ ವಿದ್ಯುತ್ ತಂತಿಗಳು ಹಾನಿಯಾಗಿವೆ. ಇದರಿಂದ ಸುಮಾರು 17.8ಲಕ್ಷ ರೂ. ನಷ್ಟ ಉಂಟಾಗಿದೆ. ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ದುರಸ್ತಿ ಮಾಡುವ ಕಾರ್ಯ ಎಲ್ಲ ಕಡೆ ನಡೆಸಲಾಗುತ್ತಿದೆ ಎಂದು ಮೆಸ್ಕಾಂ ಇಲಾಖೆಯವರು ತಿಳಿಸಿದರು.
ಇದನ್ನೂ ಓದಿ: ಮಂಗಳೂರಿನಲ್ಲಿ ವಿದ್ಯುತ್ ತಂತಿ ಸ್ಪರ್ಶ: ಇಬ್ಬರು ರಿಕ್ಷಾ ಚಾಲಕರ ದಾರುಣ ಸಾವು - Two Electrocuted in Mangaluru