ರಾಮನಗರ: ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪಾರ್ಹ ವಿಡಿಯೋ ಹಾಗೂ ಚಿತ್ರಗಳನ್ನು ಪೆನ್‌ಡ್ರೈವ್‌ಗೆ ತುಂಬಿಸಿ ಮನೆ ಮನೆಗೆ ಹಂಚುವ ಮೂಲಕ ಸಂತ್ರಸ್ತೆಯರ ಗೌರವಕ್ಕೆ ಧಕ್ಕೆ ಉಂಟುಮಾಡಿದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ಕನಕಪುರದ ದಿನೇಶ್ ಕಲ್ಲಹಳ್ಳಿ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ನೋಂದಾಯಿತ ಅಂಚೆ ಮೂಲಕ ದೂರು ಕೊಟ್ಟಿದ್ದಾರೆ.
ಈ ಸಂಬಂಧ ಎಸ್‌ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ಅವರಿಗೆ ಪತ್ರ ಬರೆದು ರಿಜಿಸ್ಟರ್ ಪೋಸ್ಟ್ ಮಾಡಿರುವ ದಿನೇಶ್, ದೌರ್ಜನ್ಯದ ವಿಡಿಯೋಗಳನ್ನು ಪೆನ್‌ಡ್ರೈವ್‌ಗೆ ತುಂಬಿಸಿ ಮನೆ ಮನೆಗೆ ಹಂಚಿ ಮಹಿಳೆಯರ ಮಾನ ಕಳೆದಿರುವುದರ ಹಿಂದೆ ರಾಜಕೀಯ ಲಾಭ ಪಡೆದುಕೊಳ್ಳುವ ಶಂಕೆ ಹಚ್ಚಿದೆ. ಈ ಹಿನ್ನೆಲೆಯಲ್ಲಿ ಪೆನ್ಡ್ರೈವ್ ಹಂಚಿಕೆ ಮಾಡಿದ ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 1860 ಸೆಕ್ಷನ್ 228 (ಎ)(1), 292, ಮಾಹಿತಿ ತಂತ್ರಜ್ಞಾನ ಕಾಯ್ದೆ 2000, ಮಾಹಿತಿ ತಿದ್ದುಪಡಿ ಕಾಯ್ದೆ 2008ರ ಸೆಕ್ಷನ್ 67, 67-ಎ ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಬೇಕು ಹಾಗೂ ಮಹಿಳೆಯರನ್ನು ಅತ್ಯಂತ ಕೀಳು ಮಟ್ಟದಲ್ಲಿ ನೋಡಿದ್ದಕ್ಕಾಗಿ ಮತ್ತು ಪ್ರತಿಬಿಂಬಿಸಿದ್ದಕ್ಕಾಗಿ ಭಾರತೀಯ ಮಹಿಳಾ ಪ್ರತಿನಿಧಿ (ತಿದ್ದುಪಡಿ) ಕಾಯ್ದೆ 1986ರ ಅಡಿಯಲ್ಲಿ ಪೆನ್ಡ್ರೈವ್ ಹಂಚಿಕೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಕೋರಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪ್ರಕರಣ: ದೇವೇಗೌಡ, ಕುಮಾರಸ್ವಾಮಿ ಹೆಸರು ಬಳಸದಂತೆ ಕೋರ್ಟ್ ನಿರ್ಬಂಧ - Restraining Order